ಭೂಕುಸಿತಕ್ಕೆ ಶಾಶ್ವತ ಪರಿಹಾರಕ್ಕಾಗಿ ಕಸ್ತೂರಿ ರಂಗನ್ ವರದಿ ಜಾರಿಗೆ ಮರುಚಿಂತನೆ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಮನೆ ಕಳೆದುಕೊಂಡಿರುವವರಿಗೆ ಎನ್ಡಿಆರ್ಎಫ್ ನಿಂದ ಕೊಡುವ 1.20 ಲಕ್ಷದ ಪರಿಹಾರದ ಹಣದ ಜೊತೆಗೆ ಹೊಸ ಮನೆ ನಿರ್ಮಿಸಿಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.02): ರಾಜ್ಯದಲ್ಲಿ ಮನೆ ಕಳೆದುಕೊಂಡಿರುವವರಿಗೆ ಎನ್ಡಿಆರ್ಎಫ್ ನಿಂದ ಕೊಡುವ 1.20 ಲಕ್ಷದ ಪರಿಹಾರದ ಹಣದ ಜೊತೆಗೆ ಹೊಸ ಮನೆ ನಿರ್ಮಿಸಿಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಪೊನ್ನಂಪೇಟೆ, ಕುಟ್ಟ, ವಿರಾಜಪೇಟೆ ಸೇರಿದಂತೆ ಎಲ್ಲೆಡೆ ಮಳೆ ಹಾನಿ ವೀಕ್ಷಿಸಿದ್ದೇನೆ. ರಾಜ್ಯದಲ್ಲಿ ವಾಡಿಕೆಗಿಂತ ಶೇ 30 ರಷ್ಟು ಹೆಚ್ಚಿನ ಮಳೆಯಾಗಿದ್ದರೆ, ಕೊಡಗಿನಲ್ಲಿ ವಾಡಿಕೆಗಿಂತ ಶೇ 50 ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದಾಗಿ 13 ಕಡೆಗಳಲ್ಲಿ ಭೂಕುಸಿತವಾಗಿದ್ದು, ಕಳೆದ 24 ಗಂಟೆಗಳಲ್ಲೇ 2 ಕಡೆಗಳಲ್ಲಿ ಭೂಕುಸಿತವಾಗಿದೆ. ರಸ್ತೆ, ವಿದ್ಯುತ್ಛಕ್ತಿ ಹಾಳಾಗಿದ್ದು, 344 ಕಿಲೋ ಮೀಟರ್ ನಷ್ಟು ವಿವಿಧ ರೀತಿಯ ರಸ್ತೆಗಳು ಹಾಳಾಗಿವೆ.
ಆದರೆ ನಿರಂತರ ಮಳೆ ಬರುತ್ತಲೇ ಇರುವುದರಿಂದ ರಸ್ತೆ ದುರಸ್ಥಿ ಮಾಡಲಾಗಿಲ್ಲ ಎಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಜಿಲ್ಲೆಯಲ್ಲಿ 67 ಮನೆಗಳು ಪೂರ್ಣ ಹಾನಿಯಾಗಿದ್ದರೆ, 176 ಮನೆಗಳು ಭಾಗಶಃ ಹಾನಿಯಾಗಿವೆ ಎಂದಿದ್ದಾರೆ. ಮನೆ ಹಾಳಾಗಿದ್ದವರಿಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ 5 ಲಕ್ಷ ಕೊಡುವುದಾಗಿ ಹೇಳಿದ್ದರು. ಮೊದಲನೇ ಕಂತಿನ ಹಣ ಬಿಡುಗಡೆ ಮಾಡಿ, ಎರಡನೆ ಕಂತಿನ ಹಣ ಕೊಡಲಿಲ್ಲ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಆಗಿರುವ ಬೆಳೆಹಾನಿ ಹೆಚ್ಚಿನ ಪರಿಹಾರ ನೀಡಬೇಕೆಂದು ಬಿಜೆಪಿಯ ಶಾಸಕ ಅಶ್ವತ್ ನಾರಾಯಣ ಅವರು ಆಗ್ರಹಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು ಅಶ್ವತ್ಥ್ ನಾರಾಯಣ ಸರ್ಕಾರ ನಡೆಸುವುದಾ ಎಂದು ಗರಂ ಆಗಿ ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಿಲ್ಲಿಸದಿದ್ದರೆ ಉಗ್ರ ಹೋರಾಟ: ಮಾಜಿ ಸಚಿವ ಆರ್.ಶಂಕರ್
ಜಿಲ್ಲೆಯಲ್ಲಿ 16 ಜಾನುವಾರು ಸಾವಿಗೀಡಾಗಿದ್ದು, ಅವುಗಳಿಗೆ ಪ್ರತೀ ಪ್ರಾಣಿಗೆ 37 ಸಾವಿರ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಅಪಾಯದಲ್ಲಿರುವ 186 ಜನರನ್ನು ರಕ್ಷಿಸಿ 10 ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದರು. ಜೊತೆಗೆ 28 ಹೆಕ್ಟೇರೆ ಬೆಳೆ ಹಾನಿಯಾಗಿದ್ದು, ಕಂದಾಯ ಮತ್ತು ಕಾಫಿ ಮಂಡಳಿಗಳಿಗೆ ಜಂಟಿ ಸರ್ವೆ ಮಾಡಲು ಹೇಳಿದ್ದೇನೆ ಎಂದರು. 2708 ವಿದ್ಯುತ್ ಕಂಬಗಳು ಬಿದ್ದಿದ್ದರೆ, 47 ವಿದ್ಯುತ್ ಪರಿವರ್ತಕಗಳ ಹಾಳಾಗಿದ್ದವು ಅವುಗಳನ್ನು ರಿಪ್ಲೇಸ್ ಮಾಡಲಾಗಿದೆ ಎಂದರು. ಇನ್ನು ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯನ್ನು ಪರಿಶೀಲಿಸಿದೆ.
2018 ರಲ್ಲಿ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಬಂದು ವೀಕ್ಷಿಸಿದ್ದೆ, ಇದೀಗ ಮತ್ತೆ ಅದನ್ನು ಪರೀಶಿಲಿಸಿದ್ದೇನೆ ಎಂದರು. ಇಷ್ಟೊಂದು ತಡವಾಗಿ ಕಾಮಗಾರಿ ಮುಗಿಯದಿರುವುದಕ್ಕೆ ಸಿಟ್ಟಾದ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಅವರನ್ನು ಕರೆದು ಅಲ್ಲಿಯೇ ಎಚ್ಚರಿಕೆ ನೀಡಿದರು. ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಡಿಸೆಂಬರ್ ಅಂತ್ಯದೊಳಗೆ ಅದರ ಕಾಮಗಾರಿ ಮುಗಿಸಲು ಸೂಚನೆ ನೀಡಬೇಕು ಎಂದು ಸೂಚಿಸಿದರು. ಇದಕ್ಕೂ ಮೊದಲು ಪೊನ್ನಂಪೇಟೆ ತಾಲ್ಲೂಕಿನ ಶ್ರಿಮಂಗಲ ಹಾಗೂ ಕುಟ್ಟ ಮಧ್ಯೆ ಇರುವ ರಾಜ್ಯ ಹೆದ್ದಾರಿಯಲ್ಲಿ ಭಾರೀ ಮಳೆಗೆ ಕುಸಿತವಾಗಿರುವುದನ್ನು ಸಿದ್ದರಾಮಯ್ಯ ಅವರು ವೀಕ್ಷಿಸಿದರು.
ಒಳ ಮೀಸಲಾತಿ: ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ: ಸಂಸದ ಗೋವಿಂದ ಕಾರಜೋಳ
ಬಳಿಕ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರಿಗೆ ಭೇಟಿ ನೀಡಿದ ಅವರು ಅಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರದಲ್ಲಿ ಸಂತ್ರಸ್ಥರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು. ಬಳಿಕ ಕುಶಾಲನಗರ ತಾಲ್ಲೂಕಿನ ಮಾದಾಪುರಕ್ಕೂ ತೆರಳಿದ ಮುಖ್ಯಮಂತ್ರಿ ಅಲ್ಲಿ ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ಥರನ್ನು ಭೇಟಿಯಾಗಿ ಅವರಿಗೂ ಸಾಂತ್ವನ ಹೇಳಿದರು. ಜೊತೆಗೆ ಕೊಡಗು ಉಸ್ತುವಾರಿ ಸಚಿವ ಎನ್. ಎಸ್. ಭೋಸರಾಜ್, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.