ಉಡುಪಿ(ಸೆ.04): ಶಾಸಕರಾಗಿ, ಸಂಸದರಾಗಿ ಜನರಿಂದ 5 ವರ್ಷಕ್ಕೆ ಆಯ್ಕೆಯಾಗುವವರು ಅವಧಿಗೆ ಮುನ್ನ ರಾಜೀನಾಮೆ ನೀಡಿದರೆ, ನಂತರ ನಡೆಯುವ ಉಪ ಚುನಾವಣೆಯ ವೆಚ್ಚವನ್ನು ಅವರೇ ಭರಿಸುವಂತಹ ಸರ್ಕಾರ ಕಾನೂನು ರೂಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೆ. ಅಲ್ತಾಫ್‌ ಅಹಮ್ಮದ್‌ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮಿರ 370, 35ಎ ವಿಧಿಯನ್ನು ತೆಗೆದು ಹಾಕಿದ ಕೇಂದ್ರ ಸರ್ಕಾರದ ನಿರ್ಧಾರ ಅಭಿನಂದನೀಯ. ಅದೇ ರೀತಿಯಲ್ಲಿ ಸ್ವಾರ್ಥ ರಾಜಕಾರಣಕ್ಕಾಗಿ, ಅಧಿಕಾರದ ಆಸೆಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು, ಮರು ಚುನಾವಣೆ ಸ್ಪರ್ಧಿಸುವುದು ನಡೆಯುವುದನ್ನು ತಡೆಗಟ್ಟಬೇಕು ಎಂದಿದ್ದಾರೆ.

ನಾಗರಿಕರ ಮೊಬೈಲ್‌ಗೆ ನೇರ ಪೊಲೀಸ್‌ ಸಂದೇಶ!

ರಾಜೀನಾಮೆ ನೀಡುವ ಶಾಸಕರು, ಸಂಸದರಿಂದಲೇ ಮೊದಲ ಚುನಾವಣೆ ವೆಚ್ಚವನ್ನು ಸಂಪೂರ್ಣ ವಸೂಲಿ ಮಾಡಿ, ಬಳಿಕ ಮರು ಚುನಾವಣೆಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು. ಈ ಮೂಲಕ ಜನರ ತೆರಿಗೆ ಹಣವನ್ನು ಉಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಡಿಸಿಗೆ ಮನವಿ:

ಈ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರೆ ಬರೆಯಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಅಲ್ತಾಫ್‌ ಅಹಮ್ಮದ್‌ ತಿಳಿಸಿದರು. ಸಾಮಾಜಿಕ ಕಾರ್ಯಕರ್ತರಾದ ಜಿ.ಆರ್‌. ಕರ್ಕಡ, ಜೇಮ್ಸ್‌ ನೊರೋನ್ಹ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.