ಎನ್‌ಟಿಪಿಸಿ ವಿದ್ಯುತ್ ಘಟಕ ಸ್ಥಾಪನೆಗೆ ಸಾವಿರಾರು ಎಕರೆ ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಮಕ್ಕಳಿಗೆ ಇಲ್ಲಿ ಡಿ ದರ್ಜೆಯ ಶೇ.50 ರಷ್ಟು ಹುದ್ದೆ ಮೀಸಲಿಡಿ ಎಂದು ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಕೊಲ್ಹಾರ (ಜೂ.08): ಎನ್‌ಟಿಪಿಸಿ ವಿದ್ಯುತ್ ಘಟಕ ಸ್ಥಾಪನೆಗೆ ಸಾವಿರಾರು ಎಕರೆ ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಮಕ್ಕಳಿಗೆ ಇಲ್ಲಿ ಡಿ ದರ್ಜೆಯ ಶೇ.50 ರಷ್ಟು ಹುದ್ದೆ ಮೀಸಲಿಡಿ ಎಂದು ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು. ಕೊಲ್ಹಾರ ತಾಲೂಕಿನ ಕೂಡಗಿ ಎನ್‍ಟಿಪಿಸಿ ಪರಿಸರದಲ್ಲಿ ₹ 2 ಕೋಟಿ ಅನುದಾನದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೂಡಗಿ ಎನ್‌ಟಿಪಿಸಿ ಘಟಕದಲ್ಲಿ ಸಂತ್ರಸ್ತರಿಗೆ ಉದ್ಯೋಗ ದೊರೆಯುವ ಬದಲು ಉತ್ತರ ಭಾರತ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಭವಿಷ್ಯದಲ್ಲಿ ಕನಿಷ್ಟ ಡಿ ದರ್ಜೆಯ ಹುದ್ದೆಗಳಲ್ಲಾದರೂ ಸಂತ್ರಸ್ತರ ಕುಟುಂಬದವರಿಗೆ ಉದ್ಯೋಗದ ನೇಮಕಾತಿಯಲ್ಲಿ ಮೀಸಲು ನೀಡಿ ಎಂದು ಎನ್‌ಟಿಪಿಸಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಶಕದ ಹಿಂದೆ ಕೂಡಗಿ ಎನ್‌ಟಿಪಿಸಿ ಸ್ಥಾಪನೆ ಹಂತದಲ್ಲಿ ನಡೆದ ಅಹಿತಕರ ಘಟನೆಯಿಂದ ಇಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಸೈನಿಕರು ದೇಶದ ಗಡಿಯಲ್ಲಿ ಕಾಯ್ದರೆ, ರೈತರು ದೇಶಕ್ಕೆ ಅನ್ನ ನೀಡುತ್ತಾರೆ. ಕೂಡಗಿ ಎನ್‍ಟಿಪಿಸಿ ನಿರ್ಮಾಣ ವಿರೋಧಿಸಿ ಹೋರಾಟ ನಡೆದಿತ್ತು. ಆ ಅಹಿತಕರ ಘಟನೆಯನ್ನು ಅನುಲಕ್ಷಿಸಿ, ನಾನು ಈ ಭಾಗದಲ್ಲಿ ಶಾಶ್ವತವಾಗಿ ಶಾಂತಿ, ಸುವ್ಯವಸ್ಥೆ ಸ್ಥಾಪಿಸಲು ಪೊಲೀಸ್ ಠಾಣೆ ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಅಂದಿನ ಇಂಧನ ಸಚಿವ ಇಂದಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ವಿದ್ಯುತ್ ಉತ್ಪಾದಕ ಬೃಹತ್ ಕೈಗಾರಿಕೆ ಪರಿಸರದಲ್ಲಿ ಭವಿಷ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂರಕ್ಷಣೆಗಾಗಿ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ನಾನು ಮನವಿ ಮಾಡಿದ್ದೆ. ನನ್ನ ಮನವಿ ಮೇರೆಗೆ ಸಭೆ ನಡೆಸಿದ್ದ ಶಿವಕುಮಾರ ಅವರು, ಸರ್ಕಾರ ಎನ್‍ಟಿಪಿಸಿ ಕೇಂದ್ರದ ಪರಿಸರದಲ್ಲಿ ಪೊಲೀಸ್ ಠಾಣೆ ಮಂಜೂರು ಮಾಡುವಲ್ಲಿ ಸಹಕಾರ ನೀಡಿದ್ದರು. ಪೊಲೀಸ್ ಠಾಣೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ 18 ಗುಂಟೆ ನಿವೇಶನ ನೀಡಿದ್ದು, ₹ 2 ಕೋಟಿ ಅನುದಾನ ಮಂಜೂರು ಮಾಡಿದೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡಗಿ ಟೌನ್‍ಶಿಪ್ ಮಾತ್ರವಲ್ಲದೇ 9 ಹಳ್ಳಿಗಳು, 2 ತಾಂಡಾಗಳ ವ್ಯಾಪ್ತಿ ಹೊಂದಿದೆ ಎಂದು ತಿಳಿಸಿದರು.

ಎನ್‍ಟಿಪಿಸಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಿತ್ತಿಯಾನಂದ ಝಾ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಡಿವೈಎಸ್‌ಪಿ ಬಲ್ಲಪ್ಪ ನಂದರೆಡ್ಡಿ, ಕೊಲ್ಹಾರ ತಹಸೀಲ್ದಾರ್‌ ನಾಯಕಲಮಠ, ಪಿಎಸ್‍ಐ ಯತೀಶ, ಕೂಡಗಿ ಗ್ರಾಪಂ ಅಧ್ಯಕ್ಷೆ ಹುಸೇನಬಿ ಮಾಶಾಳ, ಮೇಹರಾಜಪೀರ ಜಹಗೀರದಾರ, ಈಶ್ವರ ಜಾಧವ, ಸಿ.ಪಿ.ಪಾಟೀಲ, ತಾನಾಜಿ ನಾಗರಾಳ, ಈರಣ್ಣ ಚಿಮ್ಮಲಗಿ, ಸಿ.ಎಂ.ಹಂಡಗಿ, ಹುಚ್ಚಪ್ಪ ಕಮತಗಿ, ಬಂದೇನವಾಜ ದೋಲಜಿ, ಕೂಡಗಿ ತಾಂಡಾ, ತೆಲಗಿ, ಮುತ್ತಗಿ, ಮಸೂತಿ, ತಳೇವಾಡ, ಗೊಳಸಂಗಿ ಹಳ್ಳಿಗಳ ಜನರು ಪಾಲ್ಗೊಂಡಿದ್ದರು.