Asianet Suvarna News Asianet Suvarna News

ಪರ ಧರ್ಮ ಸಹಿಷ್ಣುತೆ ಅವಶ್ಯ: ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ!

"ದೇವಾಲಯಗಳ ಪ್ರವೇಶಕ್ಕೆ ಮಡಿವಂತಿಕೆಯಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು, ದೇವಾಲಯವೇ ಏಕೆ? ನಮ್ಮ ‘ದೇಹವೇ ದೇಗುಲ’ ಎಂದರು" ಎಂದು ರಗೂರು ರಾಮಚಂದ್ರಪ್ಪ ಹೇಳಿದರು

Religious tolerance necessary noted litterateur filmmaker Baraguru Ramachandrappa mnj
Author
Bengaluru, First Published Mar 14, 2022, 8:18 AM IST

ಬೆಂಗಳೂರು (ಮಾ. 14):  ಸಮಾಜದಲ್ಲಿ ಪ್ರತಿಯೊಬ್ಬರೂ ಪರ ಧರ್ಮ, ಆಚಾರ, ವಿಚಾರಗಳನ್ನು ಪರಸ್ಪರ ಸಹಿಸುವ, ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಶಾಂತಿಯುತ ಹಾಗೂ ಪ್ರಜ್ಞಾವಂತ ಸಮಾಜ ನಿರ್ಮಾಣ ಇವತ್ತಿನ ಕಾಲಘಟ್ಟದಲ್ಲಿ ಅತಿ ಅವಶ್ಯಕವಾಗಿದೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ (Baraguru Ramachandrappa) ಹೇಳಿದರು. ನಗರದ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪರ ಧರ್ಮ ಮತ್ತು ಪರ ವಿಚಾರವನ್ನು ಸಹಿಸುವುದೇ ನಿಜವಾದ ಬಂಗಾರ’ ಎಂದು ಕನ್ನಡದ ಅತ್ಯಂತ ಪ್ರಾಚೀನ ಗ್ರಂಥ ‘ಕವಿರಾಜ ಮಾರ್ಗ’ದಲ್ಲಿ ಉಲ್ಲೇಖಿಸಲಾಗಿದೆ. ಧರ್ಮ ಖಾಸಗಿ ಎಂಬುದನ್ನು ಆದಿ ಕವಿ ಪಂಪ, ವಚನಕಾರ ಬಸವಣ್ಣ ಕೂಡ ಹೇಳುತ್ತಾರೆ. ಇದು ನಮ್ಮೆಲ್ಲರಿಗೂ ಆದರ್ಶವಾಗಬೇಕು. 

ದೇವಾಲಯಗಳ ಪ್ರವೇಶಕ್ಕೆ ಮಡಿವಂತಿಕೆಯಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು, ದೇವಾಲಯವೇ ಏಕೆ? ನಮ್ಮ ‘ದೇಹವೇ ದೇಗುಲ’ ಎಂದರು. ಇದು ಜಗತ್ತಿನ ಅತ್ಯಂತ ದೊಡ್ಡ ವೈಚಾರಿಕ ಸಂದೇಶ. ಈ ವಿವೇಕವನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು. ಪ್ರತಿಯೊಬ್ಬರೂ ಇನ್ನೊಬ್ಬರ ಧರ್ಮ, ಆಚಾರ, ವಿಚಾರಗಳನ್ನು ಸಹಿಸುವ, ಗೌರವಿಸುವ ಕೆಲಸಗಳಾಗಬೇಕು. ಎಲ್ಲವನ್ನೂ ಮೀರಿ ನಾವು ಮಾನವೀಯತೆಯ ನೆಲೆಗಟ್ಟಿನಲ್ಲಿ ಬಾಳಬೇಕು ಎಂದರು

ಇದನ್ನೂ ಓದಿ: Jaipur Literature Festival : 'ನಾನು ಈ ಕಾಲದ ಕವಿ, ಪಂಥ ಗೊತ್ತಿಲ್ಲ' ರಂಜಿತ್ ಹೊಸಕೋಟೆ ಸಂದರ್ಶನ

ರಾಜನ ಆಸ್ಥಾನದಲ್ಲಿದ್ದೂ, ಪ್ರತಿನಾಯಕರನ್ನು ಸೃಷ್ಟಿಸಿದ್ದು ಪಂಪನ ದೊಡ್ಡ ಸಾಧನೆ. ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳಿಗೆ ಈ ಸಾಮರ್ಥ್ಯ ಇರುವುದು ಬಹಳ ಮುಖ್ಯ. ಆದರೆ, ತಾವು ಸೃಷ್ಟಿಸುವ ನಾಯಕನಲ್ಲಿ ಪ್ರತಿ ನಾಯಕತ್ವ ಇರಬೇಕೇ ಹೊರತು ಖಳನಾಯಕತ್ವದ ಗುಣವಲ್ಲ ಎಂದರು.

ಕವಯತ್ರಿ ಡಾ. ಎಚ್‌.ಎಲ್‌. ಪುಷ್ಪ ಮಾತನಾಡಿ, ಕವಿತೆ ರಂಜನೆಗೆ ಎನ್ನುವ ಕಾಲ ಇದಲ್ಲ. ಕಾವ್ಯವನ್ನು ಮೊದಲಿನ ಹಾಗೆ ಬರೆಯುವ ಸ್ಥಿತಿ ಈಗ ಇಲ್ಲವಾಗಿದೆ. ಕವಿ ಮತ್ತು ಕಾವ್ಯಕ್ಕೆ ಜವಾಬ್ದಾರಿ ಇರುವ ಕಾಲವಿದು. ಕವಿತೆಯ ಮೇಲೆ ಜವಾಬ್ದಾರಿ ಹೆಚ್ಚಾಗಬೇಕಾಗಿದೆ. ನಾನಾ ಸಮುದಾಯಗಳ ಹಲವು ಬಿಕ್ಕಟ್ಟು, ಸಮಸ್ಯೆಗಳು ಹೊರಹೊಮ್ಮುವ ಕಾಲಘಟ್ಟದಲ್ಲಿ ಎಲ್ಲರೂ ತಮ್ಮ ತಮ್ಮ ಆಹಾರ, ಉಡುಪು ಹಾಗೂ ಧರ್ಮ ಸೇರಿದಂತೆ ಹದಗೆಟ್ಟರಾಜಕಾರಣದ ಬಗ್ಗೆ ಯೋಚಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಇದನ್ನೂ ಓದಿ: Republic of Hindutva: ಜೈಪುರ ಸಾಹಿತ್ಯೋತ್ಸವದಲ್ಲೂ ಪ್ರಧಾನಿ ನರೇಂದ್ರ ಮೋದಿ ಜಪ!

ಬಳಿಕ ನಡೆದ ಕವಿಗೋಷ್ಠಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ, ಸುಬ್ಬು ಹೊಲೆಯಾರ್‌, ದು. ಸರಸ್ವತಿ, ನೂತನ್‌, ಎಚ್‌.ಎನ್‌. ಆರತಿ, ಜಯಲಕ್ಷ್ಮೇ ಪಾಟೀಲ್‌ ಮತ್ತಿತರರು ತಮ್ಮ ಕವಿತೆಗಳನ್ನು ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್‌, ದ್ವಾರನಕುಂಟೆ ಪಾತಣ್ಣ, ಚ.ಹ. ರಘುನಾಥ ಉಪಸ್ಥಿತರಿದ್ದರು.

Follow Us:
Download App:
  • android
  • ios