ಶಿವಮೊಗ್ಗ: ಪರಿಹಾರ ಸಾಮಾಗ್ರಿ ಸಂಗ್ರಹ
ಶಿವಮೊಗ್ಗದ ಮಹಾನಗರ ಪಾಲಿಕೆ ಆವರಣದ ನೆರೆ ಪರಿಹಾರ ಕೇಂದ್ರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ವಸ್ತುಗಳು ಬಂದು ಸೇರಿದ್ದು, ಆದ್ಯತೆಯ ಮೇರೆ ವಸಗ್ತುಗಳನ್ನು ಹಂಚಲು ತೀರ್ಮಾನಿಸಲಾಗಿದೆ. ಪಾಲಿಕೆ ಸಿಬ್ಬಂದಿ ಹಗಲಿರುಳೆನ್ನದೆ ಸಾಮಾಗ್ರಿಗಳನ್ನು ಪ್ರತ್ಯೇಕವಾಗಿಸಿ ಕಿಟ್ ರೂಪದಲ್ಲಿ ಸಿದ್ಧಪಡಿಸುತ್ತಿದ್ದಾರೆ.
ಶಿವಮೊಗ್ಗ(ಆ.15): ಮಹಾನಗರ ಪಾಲಿಕೆ ಆವರಣಲ್ಲಿನ ನೆರೆ ಪರಿಹಾರ ಸಂಗ್ರಹ ಕೇಂದ್ರಕ್ಕೆ ದಾನಿಗಳಿಂದ ಸಾಕಷ್ಟುಸಾಮಗ್ರಿಗಳು ಬಂದು ತಲುಪುತ್ತಿವೆ. ಆದ್ಯತೆ ಮೇರೆಗೆ ಪರಿಹಾರ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರವಿನ ಕೇಂದ್ರಕ್ಕೆ ಸಂಘ ಸಂಸ್ಥೆಗಳು, ದಾನಿಗಳು, ಸಂಘಟನೆಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಹೀಗೆ ಅನೇಕ ಕಡೆಯಿಂದ ಪರಿಹಾರ ಸಾಮಾಗ್ರಿ ತಲುಪುತ್ತಿವೆ. ಸಂತ್ರಸ್ತರಿಗೆ ವಿತರಿಸಲು ಸಾಕಷ್ಟುಸಾಮಾಗ್ರಿಗಳು ಸಂಗ್ರಹವಾಗಿದ್ದು, ಆದ್ಯತೆಯ ಮೇರೆಗೆ ನೇರವಾಗಿ ಸಂತ್ರಸ್ತರಿಗೆ ನೀಡಲಾಗುವುದು ಎಂದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರತ್ಯೇಕ ಕಿಟ್‌ಗಳ ತಯಾರಿ:
ಪಾಲಿಕೆ ಸಿಬ್ಬಂದಿ ಹಗಲಿರುಳೆನ್ನದೆ ಸಾಮಾಗ್ರಿಗಳನ್ನು ಪ್ರತ್ಯೇಕವಾಗಿಸಿ ಕಿಟ್ ರೂಪದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳಿಗೆ, ಹಿರಿಯರಿಗೆ ಹೀಗೆ ಬೇರೆ ಬೇರೆ ರೀತಿಯ ಕಿಟ್ ಸಿದ್ಧಪಡಿಸಿ, ನಂತರ ಸಂತ್ರಸ್ತರಿಗೆ ನೇರವಾಗಿ ವಸ್ತುಗಳನ್ನು ತಲುಪಿಸಲಾಗುವುದು. ಪರಿಹಾರ ಕೇಂದ್ರ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಈಗಿರುವ ಎಲ್ಲಾ ಕೇಂದ್ರಗಳಿಗೂ ಮೂಲಭೂತ ಸೌಕರ್ಯ ಹಾಗೂ ಅಗತ್ಯ ವಸ್ತು ಪೂರೈಸಲಾಗುತ್ತಿದೆ. ಪರಿಹಾರ ಸಾಮಾಗ್ರಿ ಒದಗಿಸುವವರು ನೇರವಾಗಿ ಸಂತ್ರಸ್ತರಿಗೆ ವಿತರಿಸದೆ ಮಹಾನಗರ ಪಾಲಿಕೆ ಆವರಣದಲ್ಲಿ ಆರಂಭಿಸಿರುವ ಸಾಮಗ್ರಿ ಸಂಗ್ರಹ ಕೇಂದ್ರಕ್ಕೆ ತಲುಪಿಸಿದಲ್ಲಿ ಆದ್ಯತೆ ಮೇಲೆ ವಿತರಿಸಲು ನಮಗೆ ಅನುಕೂಲವಾಗುತ್ತದೆ. ಕೇಂದ್ರದಲ್ಲಿ ಯಾವುದೇ ತೊಂದರೆ ಇಲ್ಲ ಎಂದರು.
ಶಿವಮೊಗ್ಗಕ್ಕೆ ಸಿಎಂ ಬಿಎಸ್‌ವೈ ಬಂಪರ್ ಕೊಡುಗೆ
ಸರ್ಕಾರದಿಂದ ಸಾಕಷ್ಟುನೆರವು ದೊರಕಿದೆ. ಈಗಾಗಲೇ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಮರೋಪಾದಿಯಲ್ಲಿ ಕೆಲಸ ನಡೆಸಲಾಗುತ್ತಿದೆ. ಪರಿಹಾರ ಮತ್ತು ನೆರವು ಒದಗಿಸುವ ಕೆಲಸದಲ್ಲಿ ನಮಗೆ ಸಂಪೂರ್ಣ ತೃಪ್ತಿ ಇದೆ. ಸಂಕಷ್ಟದ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿದ ಸಹಕಾರ ಸಾರ್ವಜನಿಕರಿಂದ ದೊರಕಿದೆ. ನೆರವಿನ ಹಸ್ತ ಚಾಚಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.