ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ರಿಲಯನ್ಸ್ ಸಮೂಹದ ₹1,600 ಕೋಟಿ ವೆಚ್ಚದ 'ಕ್ಯಾಂಪಾ ಕೋಲಾ' ಪಾನೀಯ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿದೆ. ಇದರಿಂದ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ.

ವಿಜಯಪುರ (ನ.17): ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ಸಿಕ್ಕಿದ್ದು, ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ರಿಲಯನ್ಸ್ ಸಮೂಹದ (Reliance Group) ₹1,600 ಕೋಟಿ ವೆಚ್ಚದ ಬೃಹತ್ 'ಕ್ಯಾಂಪಾ ಕೋಲಾ' (Campa Cola) ಪಾನೀಯ ತಯಾರಿಕಾ ಘಟಕಕ್ಕೆ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 109 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಈ ಘಟಕದಿಂದ 2,000 ನೇರ ಉದ್ಯೋಗಗಳು ಹಾಗೂ 3,000ಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗಾವಕಾಶಗಳು ಲಭಿಸಲಿವೆ.

2009ರಲ್ಲೇ ಭೂಸ್ವಾಧೀನವಾಗಿದ್ದ ಮುಳವಾಡಕ್ಕೆ 3 ವರ್ಷಗಳ ಶ್ರಮದ ಫಲ

ಸಚಿವರ ಕಚೇರಿಯ ಪ್ರಕಟಣೆಯ ಪ್ರಕಾರ, ಕೈಗಾರಿಕಾ ಅಭಿವೃದ್ಧಿಗಾಗಿ 2009ರಷ್ಟು ಹಿಂದೆಯೇ ಮುಳವಾಡದಲ್ಲಿ 3,000 ದಿಂದ 4,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಯಾವುದೇ ದೊಡ್ಡ ಕೈಗಾರಿಕೆಗಳು ಬಂದಿರಲಿಲ್ಲ.'ನಾನು ಕೈಗಾರಿಕಾ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಇದನ್ನು ಒಂದು ಸವಾಲಾಗಿ ಸ್ವೀಕರಿಸಿ, ಕಳೆದ ಮೂರು ವರ್ಷಗಳಿಂದ ವಿಜಯಪುರ ಜಿಲ್ಲೆಗೆ ಹೂಡಿಕೆದಾರರನ್ನು ಆಕರ್ಷಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಆ ಪ್ರಯತ್ನಗಳಿಗೆ ಈಗ ಫಲ ಸಿಗುತ್ತಿದೆ' ಎಂದು ಎಂಬಿ ಪಾಟೀಲ್‌ ಹೇಳಿದ್ದಾರೆ.

ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕುರಿತು ಸಚಿವರ ಕಟ್ಟುನಿಟ್ಟಿನ ಸೂಚನೆ

ಯೋಜನೆಗೆ ಭೂಮಿ ನೀಡಿದ ಕುಟುಂಬಗಳಿಗೆ ಉದ್ಯೋಗ ಖಚಿತಪಡಿಸುವ ಅಗತ್ಯವನ್ನು ಒತ್ತಿಹೇಳಿದ ಸಚಿವರು, ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ರಿಲಯನ್ಸ್ ಸಂಸ್ಥೆಗೆ ಸೂಚಿಸಿದ್ದಾರೆ. ಈ ಯೋಜನೆಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ನೇಮಕಾತಿಯಲ್ಲಿ ರಿಲಯನ್ಸ್ ಅತ್ಯುನ್ನತ ಆದ್ಯತೆ ನೀಡಬೇಕು. ನಂತರ 25 ಕಿ.ಮೀ ವ್ಯಾಪ್ತಿಯಲ್ಲಿರುವ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಬೇಕು ಮತ್ತು ತದನಂತರ ವಿಜಯಪುರ ಜಿಲ್ಲೆಯಾದ್ಯಂತ ಇರುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಎಲ್ಲಾ ವರ್ಗ 'ಸಿ' (Category C) ಮತ್ತು 'ಡಿ' (Category D) ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಂದಲೇ ಭರ್ತಿ ಮಾಡಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.

ಆಹಾರ ಸಂಸ್ಕರಣಾ ಉದ್ಯಮಕ್ಕೆ ವಿಜಯಪುರ ಸೂಕ್ತ ತಾಣ

ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಸೌಲಭ್ಯವಿದೆ ಹಾಗೂ ದಾಳಿಂಬೆ, ನಿಂಬೆ ಮತ್ತು ದ್ರಾಕ್ಷಿಯಂತಹ ತೋಟಗಾರಿಕಾ ಬೆಳೆಗಳ ಪ್ರಮುಖ ಉತ್ಪಾದಕ ಜಿಲ್ಲೆಯಾಗಿರುವುದರಿಂದ ಇದು ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ (Food-processing industries) ಅತ್ಯಂತ ಸೂಕ್ತವಾಗಿದೆ ಎಂದು ಸಚಿವರು ತಿಳಿಸಿದರು. 'ರಿಲಯನ್ಸ್ ಈ ಅಂಶಗಳನ್ನು ಪರಿಗಣಿಸಿ, ಇಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಕಾಲಿಡುವ ಮತ್ತು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಬಗ್ಗೆ ಚಿಂತಿಸಬೇಕು. ಕೈಗಾರಿಕೆಗಳಿಗೆ ಅಗತ್ಯವಿರುವ ಯಾವುದೇ ಬೆಳೆಗಳನ್ನು ಬೆಳೆಯಲು ನಮ್ಮ ರೈತರು ಸಿದ್ಧರಿದ್ದಾರೆ; ಆದ್ದರಿಂದ ಕಚ್ಚಾ ವಸ್ತುಗಳ ಕೊರತೆಯಾಗುವುದಿಲ್ಲ' ಎಂದರು.

ವಿಜಯಪುರಕ್ಕೆ ಹರಿದುಬರಲಿವೆ 20ಕ್ಕೂ ಹೆಚ್ಚು ಕಂಪನಿಗಳು & KSDL ಘಟಕ

ವಿಜಯಪುರಕ್ಕೆ ಹೂಡಿಕೆ ತರಲು ಸರ್ಕಾರವು 20ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಎಂ.ಬಿ. ಪಾಟೀಲ್ ಮಾಹಿತಿ ನೀಡಿದರು. ಇವುಗಳಲ್ಲಿ ಪ್ರಮುಖವಾಗಿ ಟೆರ್ರಾ ಸರ್ಕ್ಯೂಟ್ಸ್ (₹444 ಕೋಟಿ), ಜೆನಿತ್ ಎನರ್ಜಿ ಸೊಲ್ಯೂಷನ್ಸ್ (₹90 ಕೋಟಿ), ಹೈ-ಟೆಕ್ ಪೈಪ್ಸ್ (₹250 ಕೋಟಿ), ಹಿಂದೂಸ್ತಾನ್ ಕೋಕಾ-ಕೋಲಾ ಬಿವರೇಜಸ್ (₹300 ಕೋಟಿ), ಸರ್ವೋಟೆಕ್ ಪವರ್ ಸಿಸ್ಟಮ್ಸ್ (₹300 ಕೋಟಿ) ಮತ್ತು ವಿಂಗ್ಸ್ ವಿಟೆರಾ (₹350 ಕೋಟಿ) ಸೇರಿವೆ.

ಶೀಘ್ರದಲ್ಲೇ ಜಿಲ್ಲೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಮೆಟಾ ಗ್ರೂಪ್ (Meta Group) ಹಾಗೂ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಕಾರ್ಯನಿರ್ವಹಿಸುವ ಟೊನ್ಬೊ ಇಮೇಜಿಂಗ್ (Tonbo Imaging) ಸೇರಿದಂತೆ ಹಲವು ಕಂಪನಿಗಳೊಂದಿಗೆ ಹೂಡಿಕೆ ಕುರಿತು ಮಾತುಕತೆ ನಡೆಯುತ್ತಿದೆ.

'ವಿಜಯಪುರ ಜಿಲ್ಲೆಯನ್ನು ನೀರಾವರಿ, ತೋಟಗಾರಿಕೆ ಮತ್ತು ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಮೊದಲ ಎರಡು ಕ್ಷೇತ್ರಗಳು ಈಗಾಗಲೇ ಸುಸ್ಥಾಪಿತವಾಗಿವೆ, ಈಗ ನಾವು ಮೂರನೇ ಕ್ಷೇತ್ರದತ್ತ ಗಮನ ಹರಿಸುತ್ತಿದ್ದೇವೆ. ಹೆಚ್ಚಿನ ಹೂಡಿಕೆದಾರರು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಆದ್ಯತೆ ನೀಡುತ್ತಾರೆ; ಆದರೆ ರಾಜಧಾನಿಯ ಹೊರಗಿನ ಪ್ರದೇಶಗಳಲ್ಲೂ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ಅತ್ಯಗತ್ಯ' ಎಂದು ಸಚಿವರು ತಿಳಿಸಿದ್ದಾರೆ.