ರಾಗಿ, ಜೋಳ ಬೆಳೆದ ರೈತರಿಗೆ ಗುಡ್ ನ್ಯೂಸ್      ಇಂದಿನಿಂದ ಜಿಲ್ಲಾದ್ಯಂತ ರೈತರ ನೋಂದಣಿಗೆ ಅವಕಾಶ  

 ಚಿಕ್ಕಬಳ್ಳಾಪುರ (ಡಿ.22): ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ಪ್ರತಿ ಕ್ವಿಂಟಾಲ್‌ ರಾಗಿಗೆ 3,377 ರು.ಗಳಂತೆ ಹಾಗೂ ಪ್ರತಿ ಕ್ವಿಂಟಾಲ್‌ ಬಿಳಿ ಜೋಳ-ಹೈಬ್ರೀಡ್‌-2738 ಮತ್ತು ಬಿಳಿ ಜೋಳ ಮಾಲ್ದಂಡಿ 2,758 ರು ಗಳಂತೆ ನಿಗದಿಗೊಳಿಸಲಾಗಿದೆ. ಸರ್ಕಾರವು ನಿಗದಿಪಡಿಸಿರುವ ಗುಣಮಟ್ಟಕ್ಕೆ ಅನುಗುಣವಾಗಿ ರಾಗಿ ಮತ್ತು ಬಿಳಿ ಜೋಳವನ್ನು ನೀಡಲು ಇಚ್ಚಿಸುವ ಜಿಲ್ಲೆಯ ರೈತರ (Farmers) ನೋಂದಣಿ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಲಾಗುವುದೆಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ (DC) ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರಾಗಿ ಮತ್ತು ಬಿಳಿಜೋಳ ಖರೀದಿ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ (Karnataka Govt) ನಿರ್ದೇಶನದನ್ವಯ 2021-22ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಆಸಕ್ತ ರೈತರಿಂದ ರಾಗಿ ಮತ್ತು ಬಿಳಿ ಜೋಳವನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.

ರೈತರು ಹೆಸರು ನೋಂದಣಿ ಮಾಡಿಸಿ

ರಾಗಿ (Millets) ಮತ್ತು ಬಿಳಿಜೋಳ ಮಾರಾಟ ಮಾಡಲು ಇಚ್ಚಿಸುವ ಜಿಲ್ಲೆಯ ಆಸಕ್ತ ರೈತರ (Farmers) ನೋಂದಣಿ ಪ್ರಕ್ರಿಯೆಯನ್ನು ಡಿ.22 ರಿಂದಲೆ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತಿದ್ದು, ಆಸಕ್ತ ರೈತರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತೆರೆದಿರುವ ನೋಂದಣಿ ಕೇಂದ್ರಗಳನ್ನು ಸಂಪರ್ಕಿಸಿ ಕೂಡಲೆ ನೋಂದಣಿ ಮಾಡಿಸಿಕೊಳ್ಳಬೇಕು. ಮಳೆ ಹಾನಿಯಿಂದ ಉಳಿದ ರಾಗಿ, ಜೋಳ ಬೆಳೆಗಾದರೂ ಸೂಕ್ತ ಬೆಲೆ ಸಿಗಬೇಕು ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯು ಜಿಲ್ಲೆಯ ರೈತರಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.

ಸರ್ಕಾರದ ನಿರ್ದೇಶನದಂತೆ ಸದರಿ ಯೋಜನೆಯಡಿ ರಾಗಿ (Millets) ಮತ್ತು ಜೋಳವನ್ನು ಬರುವ ಜನವರಿ 1ರಿಂದ ಮಾಚ್‌ರ್‍ 31 ರವರೆಗೆ ಜಿಲ್ಲೆಯಲ್ಲಿ ಖರೀದಿಸಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಗ್ರಹಣಾ ಏಜೆನ್ಸಿಗಳು ತಕ್ಷಣದಿಂದ ಜಾರಿಗೆ ಬರುವಂತೆ ರೈತರ ನೋಂದಣಿ ಕಾರ್ಯ ಪ್ರಾಂಭಿಸುವಂತೆ ಸಂಬಂಧಪಟ್ಟಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಹಾಯವಾಣಿ ಆರಂಭ

ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮತ್ತು ಜೋಳವನ್ನು ಮಾರಾಟ ಮಾಡಲು ಇಚ್ಚಿಸುವ ಜಿಲ್ಲೆಯ ರೈತರಿಗೆ (Farmers) ನೋಂದಣಿ ಹಾಗೂ ಮಾರಾಟದ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಸಮಸ್ಯೆಗಳು ಉಂಟಾದಲ್ಲಿ ಅಥವಾ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ 08156-277108 ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

ಬಾಗೇಪಲ್ಲಿ ಕೆಎಫ್‌ಸಿಎಸ್‌ಸಿ (KFCSC) ಸುಗಟು ಮಳಿಗೆ ಗೂಳೂರು ರಸ್ತೆ, ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಆವರಣ, ಚಿಂತಾಮಣಿ ಕಾಗತಿ ಸಮೀಪ ಇರುವ ಕೆಎಫ್‌ಸಿಎಸ್‌ಸಿ, ಗೌರಿಬಿದನೂರು ಎಪಿಎಂಸಿ ಮಾರುಕಟ್ಟೆಆವರಣದಲ್ಲಿರುವ ಕೆಎಫ್‌ಸಿಎಸ್‌ಸಿ, ಗುಡಿಬಂಡೆ ಟಿಎಪಿಸಿಎಸ್‌ಸಿ ಕಟ್ಟಡ, ಶಿಡ್ಲಘಟ್ಟನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ ಇಲ್ಲಿ ರೈತರು ತಮ್ಮ ಹೆಸರುಗಳನ್ನು ನೊಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಭೆಯಲ್ಲಿ ಆಹಾರ (Food) ಮತ್ತು ಸರಬರಾಜು ಇಲಾಖೆಯ ಉಪನಿರ್ದೇಶಕಿ ಸವಿತಾ, ಚಿಕ್ಕಬಳ್ಳಾಪರು ತಾಲ್ಲೂಕು ತಹಸೀಲ್ದಾರ್‌ ಗಣಪತಿಶಾಸ್ತ್ರಿ, ಆಹಾರ ಮತ್ತು ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಚೌಡೇಗೌಡ, ವಿವಿಧ ತಾಲ್ಲೂಕುಗಳ ಆಹಾರ ಶಿರಸ್ತೇದಾರ್‌ ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗರಿಷ್ಠ 20 ಕ್ವಿಂ. ಖರೀದಿಗೆ ಅವಕಾಶ

ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‌ ನಂತೆ ಗರಿಷ್ಠ 20 ಕ್ವಿಂಟಾಲ್‌ ರಾಗಿ ಹಾಗೂ ಪ್ರತಿ ಎಕರೆಗೆ 10 ಕ್ವಿಂಟಾಲ್‌ ನಂತೆ ಗರಿಷ್ಠ 20 ಕ್ವಿಂಟಾಲ್‌ ಜೋಳವನ್ನು ಖರೀದಿಸಬಹುದು. ಸರ್ಕಾರವು ನಿಗಧಿಡಪಸಿರುವ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ರಾಗಿ ಹಾಗೂ ಜೋಳವನ್ನು ಖರೀದಿಸುವಂತಿಲ್ಲ. ಈ ಎಲ್ಲಾ ಅಂಶಗಳನ್ನು ಪಾಲಿಸಿಕೊಂಡು ಜಿಲ್ಲೆಯಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ರೈತರು ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವಂತೆ ಕಟ್ಟು ನಿಟ್ಟಿನ ಸೂಚನೆಗಳನ್ನು ಡೀಸಿ ಸೂಚಿಸಿದ್ದಾರೆ.