ಮಲೆನಾಡಿನಲ್ಲಿ ಮುಂಗಾರು ಮಳೆ ಬಿಡುವು: ಜನ ಜೀವನ ಸಹಜ ಸ್ಥಿತಿಯತ್ತ
ಕಳೆದ ಹದಿನೈದು ದಿನಗಳಿಂದ ಆರ್ಭಟಿಸಿದ್ದ ಮುಂಗಾರು ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೊಂಚ ಬಿಡುವು ನೀಡಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.29): ಕಳೆದ ಹದಿನೈದು ದಿನಗಳಿಂದ ಆರ್ಭಟಿಸಿದ್ದ ಮುಂಗಾರು ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೊಂಚ ಬಿಡುವು ನೀಡಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮೂರು ಜನರ ಜೀವಹಾನಿ ಜೊತೆಗೆ ಕೋಟ್ಯಾಂತರ ರೂ.ನ ಆಸ್ತಿ,ಪಾಸ್ತಿ ಹಾನಿ ಪಡಿಸಿದ್ದ ಮಳೆ ನೂರಾರು ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ನಾಶಪಡಿಸಿತ್ತು. ನದಿಗಳು ಅಪಾಯದ ಮಟ್ಟದಲ್ಲಿ ಹರಿದು ಪ್ರವಾಹದ ಭೀತಿ ಮೂಡಿಸಿದ್ದವು.ಆದರೆ ನಿನ್ನೆ ಸಂಜೆಯಿಂದಲೇ ಮಳೆ ಅಬ್ಬರ ತಗ್ಗಿದ್ದು, ಶುಕ್ರವಾರ ಮಲೆನಾಡಿನ ಕೆಲವೆಡೆ ಬಿಸಿಲು ಕಾಣಿಸಿಕೊಂಡಿತು. ಮಳೆ ಬಿಡುವು ನೀಡಿದ ಪರಿಣಾಮ ನದಿಗಳ ನೀರಿನ ಮಟ್ಟ ತಗ್ಗಿದ್ದು, ಪ್ರವಾಹದ ಭೀತಿಯನ್ನೂ ದೂರಾಗಿಸಿದೆ.
ಎರಡು ಮೂರು ದಿನಗಳ ಕಾಲ ನಿರಂತರವಾಗಿ ಭದ್ರಾನದಿ ನೀರಿನಿಂದ ಮುಳುಗಡೆಯಾಗಿದ್ದ ಕಳಸ-ಹೊರನಾಡು ಸಂಪರ್ಕಿಸುವ ಹೆಬ್ಬಾಳ ಸೇತುವೆ ನೀರಿನಿಂದ ತೆರವಾಗಿದೆ. ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ನೂತನ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡರೆ ಮಳೆಗಾಲದಲ್ಲಿ ಹತ್ತಾರು ಕಿ.ಮೀ. ಬಳಸಿಕೊಂಡು ಪ್ರಯಾಣಿಸುವುದು ತಪ್ಪಲಿದೆ.ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಮನೆಗಳು, ಮರಗಳು ವಿದ್ಯುತ್ ಕಂಬಗಳ ನೆಲಕ್ಕುರುಳುವುದು ಹೆಚ್ಚಾಗುತ್ತದ್ದ ವೇಳೆಗೆ ಮಳೆ ಬಿಡುವುದು ನೀಡುವುದರಿಂದ ಒಂದಷ್ಟು ಅನಾಹುತಗಳು ತಪ್ಪಿದಂತಾಗುತ್ತಿದೆ.
ಮೊಹರಂ ಹಬ್ಬ: ಚಿಕ್ಕಮಗಳೂರಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದ್ಯೋತಕ
ವಾಡಿಕೆಗಿಂತ ಕಡಿಮೆ ಮಳೆ: ಒಂದೇ ಸಮನೆ ಸುರಿದ ಮಳೆಯಿಂದ ಸಾಕಷ್ಟು ಅನಾಹುತಗಳು ಸೃಷ್ಠಿಯಾಗಿದ್ದರೂ ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಕಡಿಮೆ ಬಿದ್ದಿದೆ. ಅಲ್ಲದೆ ಮಳೆ ಕೊರತೆಯೂ ಉಂಟಾಗಿರುವುದರಿಂದ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. ಕೆಲವು ದೊಡ್ಡ ಕೆರೆಗಳೂ ಸಹ ಭರ್ತಿಯಾಗಿಲ್ಲ.ಜನವರಿಯಿಂದ ಜುಲೈ 26 ರ ವರೆಗೆ ಜಿಲ್ಲೆಯಲ್ಲಿ ಸರಾಸರಿ 952 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ ಈ ವರ್ಷ ಸುರಿದಿರುವುದು 703.1 ಮಿ.ಮೀ ಮಾತ್ರ. ಈ ಅವಧಿಯಲ್ಲಿ ಚಿಕ್ಕಮಗಳೂರು ಹಾಗೂ ಕಡೂರು ತಾಲ್ಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಸ್ವಲ್ಪ ಪ್ರಮಾಣದಲ್ಲಿ ಮಳೆ ಹೆಚ್ಚಾಗಿ ಬಿದ್ದಿದೆ. ಆದರೆ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಡಿಕೆಗಿಂತಲೂ ಕಡಿಮೆಯೇ ಮಳೆ ಯಾಗಿರುವುದು ಅಂಕಿ ಅಂಶದಿಂದ ಕಂಡುಬಂದಿದೆ.
ಪ್ರವಾಸಿಗರು ವಾಪಸ್: ಮಳೆ ಹಿನ್ನೆಲೆಯಲ್ಲಿ ಗಿರಿ , ಜಲಪಾತಗಳಿಗೆ ವೀಕೆಂಡ್ ನಲ್ಲಿ ಪ್ರವಾಸಿಗರಿಗೆ ಜಿಲ್ಲಾಡಳಿತ ಮುಂಜ್ರಾಗತ ಕ್ರಮವಾಗಿ ನಿರ್ಬಂಧ ವಿಧಿಸಿತ್ತು. ಇದರ ನಡುವೆ ಇಂದು ಬೆಳಗಿನಿಂದಲೇ ಮುಳ್ಳಯ್ಯನಗಿರಿ ಮತ್ತು ದತ್ತಪೀಠದ ವೀಕ್ಷಣೆಗೆ ನೂರಾರು ಪ್ರವಾಸಿಗರು ಆಗಮಿಸಿದರು. ಗಿರಿಶ್ರೇಣಿಯ ರಸ್ತೆಗಳಲ್ಲಿ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿರುವ ಜೊತೆಗೆ ವಾಹನಗಳ ಒತ್ತಡದಿಂದಾಗಿ ಇನ್ನಷ್ಟು ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಭೇಟಿಗೆ ನಿರ್ಬಂಧವಿದೆ ಎಂದು ಕೈಮರ ಚೆಕ್ಪೋಸ್ಟ್ ಸಿಬ್ಬಂದಿ ಪ್ರವಾಸಿಗರಿಗೆ ಮನವರಿಕೆ ಮಾಡಿದರೂ ಬಹುತೇಕ ಮಂದಿ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಕೆಜೆ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳನ್ನು ಅಮಾಯಕರೆಂದು ಪರಿಗಣಿಸುವುದು ಅಪಾಯಕಾರಿ: ಸಿ.ಟಿ.ರವಿ
ಕೆಲವು ಪ್ರವಾಸಿಗರು ಸಿಬ್ಬಂದಿಗಳ ಜೊತೆಗೆ ಜಗಳಕ್ಕೆ ನಿಂತರಲ್ಲದೆ, ನಾವು ದೂರದಿಂದ ಬಂದಿದ್ದೇವೆ. ಹಿಂದಕ್ಕೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರು. ಈ ಕಾರಣಕ್ಕೆ ಚೆಕ್ಪೋಸ್ಟ್ ಸಿಬ್ಬಂದಿಗಳು ಪೊಲೀಸರ ಮೊರೆ ಹೋಗಬೇಕಾಯಿತು.ಈ ನಡುವೆ ಬಹಳಷ್ಟು ಮಂದಿ ಪ್ರವಾಸಿಗರು ಚೆಕ್ ಪೋಸ್ಟ್ ಬಳಿಯೇ ವಾಹನಗಳನ್ನು ನಿಲ್ಲಿಸಿ ಕಿ.ಮೀ.ದೂರ ನಡೆದು ಹೋಗಿದ್ದಾರೆ. ಜುಲೈ 31 ರ ರವರೆಗೆ ಗಿರಿ ಪ್ರದೇಶದ ನಿಸರ್ಗ ತಾಣಗಳಿಗೆ ಬರಬಾರದು ಎಂದು ಜಿಲ್ಲಾಡಳಿತ ಪ್ರವಾಸಿಗರಿಗೆ ಮನವಿ ಮಾಡಿದೆ.