ಬೆಂಗಳೂರು[ಫೆ.02]: ರಾಜಧಾನಿ ಬೆಂಗಳೂರಿಗೆ ಉತ್ತಮ ಕೊಡುಗೆ ನೀಡಿರುವ ಶ್ರೀಸಾಮಾನ್ಯರನ್ನು ಗುರುತಿಸಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಕೊಡಮಾಡುವ 10ನೇ ವರ್ಷದ ‘ನಮ್ಮ ಬೆಂಗಳೂರು ಪ್ರಶಸ್ತಿ’ಗೆ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.

‘ನನ್ನ ನಗರ, ನನ್ನ ನಾಯಕ’ ಎಂಬ ಟ್ಯಾಗ್‌ ಲೈನ್‌ನಡಿ ಪ್ರಶಸ್ತಿ ನೀಡಲಾಗುತ್ತಿದೆ. ತೆರೆಮರೆಯಲ್ಲಿದ್ದುಕೊಂಡು ಬೆಂಗಳೂರಿಗಾಗಿ ಉತ್ತಮ ಕೊಡುಗೆ ನೀಡುತ್ತಿರುವ ಶ್ರೀಸಾಮಾನ್ಯರನ್ನು ಗುರುತಿಸಿ ನಾಮ ನಿರ್ದೇಶನ ಮಾಡಬಹುದಾಗಿದೆ.

ವರ್ಷದ ನಾಗರಿಕ, ಉದಯೋನ್ಮುಖ ತಾರೆ, ಪತ್ರಕರ್ತ, ಸಾಮಾಜಿಕ ಉದ್ಯಮಿ ಹಾಗೂ ಸರ್ಕಾರಿ ಅಧಿಕಾರಿ ಎಂಬ ಐದು ವಿಭಾಗಗಳಲ್ಲಿ ಆರು ಪ್ರಶಸ್ತಿ ನೀಡಲಾಗುತ್ತಿದೆ. ಈ ಐದು ವಿಭಾಗಗಳಲ್ಲಿ ಉತ್ತಮ ಎನಿಸಿದವರಿಗೆ ‘ವರ್ಷದ ನಮ್ಮ ಬೆಂಗಳೂರಿಗ’ ಪ್ರಶಸ್ತಿ ನೀಡಲಾಗುತ್ತದೆ.

ಯಾವುದೇ ಕ್ಷೇತ್ರದಲ್ಲಿ ತೆರೆಮರೆಯಲ್ಲಿದ್ದುಕೊಂಡು ಪ್ರಶಸ್ತಿ ಬಯಸದೆ ನಿಸ್ವಾರ್ಥದಿಂದ ದುಡಿಯುತ್ತಿರುವವರನ್ನು ಗುರುತಿಸಿ ಫೆಬ್ರವರಿ ಕೊನೆಯವರೆಗೆ ಹೆಸರು ಸೂಚಿಸಬಹುದು. ಹೆಸರನ್ನುಆನ್‌ಲೈನ್‌ ಮೂಲಕ www.nammabengaluruaeard.org ನಾಮ ನಿರ್ದೇಶನ ಮಾಡಬಹುದಾಗಿದೆ. ಆಯ್ಕೆಯಾದ ಆರು ಜನರಿಗೆ ಏ.27ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

2009ರಿಂದ ಈ ವರೆಗೆ 87 ಕೊಡುಗೆದಾರರಿಗೆ ನಮ್ಮ ಬೆಂಗಳೂರು ಪ್ರಶಸ್ತಿ ನೀಡಲಾಗಿದೆ. ಒಂಬತ್ತು ವರ್ಷಗಳಲ್ಲಿ ಒಟ್ಟಾರೆ 2,58,468 ನಾಮ ನಿರ್ದೇಶನ ಸ್ವೀಕೃತವಾಗಿವೆ. ಈ ಪೈಕಿ 261 ಜನರನ್ನು ಅಂತಿಮಗೊಳಿಸಿ 87 ಜನರನ್ನು ಪುರಸ್ಕರಿಸಿದೆ.

ರಮೇಶ್‌ ರಾಯಭಾರಿ, ಲಾಂಛನ ಬಿಡುಗಡೆ

10ನೇ ವರ್ಷದ ಅಂಗವಾಗಿ ನಟ ರಮೇಶ್‌ ಅರವಿಂದ್‌ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡ, ಮಹಾನಗರ ಪಾಲಿಕೆಯನ್ನು ಒಳಗೊಂಡ ಲಾಂಛನ ಕೂಡ ಬಿಡುಗಡೆ ಮಾಡಿರುವುದು ಈ ಬಾರಿಯ ವಿಶೇಷವಾಗಿದೆ.

ಹೆಸರು ಸೂಚಿಸುವ ಮೂಲಕ ನಾಮ ನಿರ್ದೇಶನ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ರಮೇಶ್‌ ಅರವಿಂದ್‌, ಉತ್ತಮ ಸಮಾಜಕ್ಕಾಗಿ ದುಡಿಯುತ್ತಿರುವವರನ್ನು ಗುರುತಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿ ನೀಡುತ್ತಿದೆ. ಇಂತಹ ಆಯ್ಕೆಯ ವಿಭಾಗದಲ್ಲಿ ಪಾತ್ರ ವಹಿಸುತ್ತಿರುವುದು ಖುಷಿಯ ವಿಚಾರವಾಗಿದೆ ಎಂದರು.

ನನಗೆ ಸಿಕ್ಕ ಮೊದಲ ಗೆಲುವು, ಪ್ರೀತಿ, ಮುತ್ತು, ಚಪ್ಪಾಳೆ, ಸನ್ಮಾನ ಮತ್ತು ಅವಮಾನಿಸಿದ ಊರು ಬೆಂಗಳೂರಾಗಿದೆ. ಆದ್ದರಿಂದಲೇ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ. ನಮ್ಮ ಮೆಟ್ರೋ, ನಮ್ಮ ಕಬ್ಬನ್‌ ಪಾರ್ಕ್, ನಮ್ಮ ಲಾಲ್‌ಬಾಗ್‌ ಇವುಗಳನ್ನು ಉಳಿಸುತ್ತಿರುವವರನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ‘ನಮ್ಮ ಬೆಂಗಳೂರು ಪ್ರಶಸ್ತಿ’ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಎಲೆಮರೆ ಕಾಯಿಯಂತೆ ಕೊಡುಗೆ ನೀಡುತ್ತಿರುವವರನ್ನು ಗುರುತಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಪ್ರತಿಷ್ಠಾನದ ನಿರ್ದೇಶಕ ಎನ್‌.ಆರ್‌.ಸುರೇಶ್‌, ತೀರ್ಪುಗಾರರ ಸಮಿತಿ ಸದಸ್ಯರಾದ ಪ್ರದೀಪ್‌ ಕರ್‌, ಡಾ.ಅಶ್ವಿನಿ ಮಹೇಶ್‌, ಡಾ.ವಿಶಾಲ್‌ ರಾವ್‌, ವಿ.ರವಿಚಂದರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.