ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ದೂಧಗಂಗಾ ನದಿಯ ಹರಿವು ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಬೆಳಗಾವಿ ಜಿಲ್ಲೆಯ ಐತಿಹಾಸಿಕ ದರ್ಗಾ ಜಲಾವೃತಗೊಂಡಿದ್ದು, ಹಲವು ಸೇತುವೆಗಳು ಮುಳುಗಡೆಯಾಗಿವೆ ಮತ್ತು ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ.
ಬೆಂಗಳೂರು (ಜು.24) ಸ್ವಲ್ಪ ಬಿಡುವು ಕೊಟ್ಟಿದ್ದ ಮುಂಗಾರು ಮಳೆ ಚುರುಕು ಪಡೆದಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುವಾರ ಕೂಡ ಉತ್ತಮ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ದೂಧಗಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ನದಿ ಮೈದುಂಬಿ ಹರಿಯುತ್ತಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಫೆಕ್ಟ್ ರಾಜ್ಯದ ನದಿಗಳ ಒಳಹರಿವು ಹೆಚ್ಚಳ!
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ದೂಧಗಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ನದಿ ಮೈದುಂಬಿ ಹರಿಯುತ್ತಿದೆ. ಇದರ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಹೊರವಲಯದ ಮುಲ್ಲಾನ್ಕಿ ತೋಟದಲ್ಲಿರುವ ಐತಿಹಾಸಿಕ ಮನ್ಸೂರ್‌ಅಲಿ ದರ್ಗಾ ಜಲಾವೃತಗೊಂಡಿದೆ. ದೂಧಗಂಗಾ ನದಿಯ ನೀರು ದರ್ಗಾವನ್ನು ಆವರಿಸಿದ್ದು, ಸ್ಥಳೀಯರು ಪರಿಸ್ಥಿತಿಯನ್ನು ಆತಂಕದಿಂದ ಗಮನಿಸುತ್ತಿದ್ದಾರೆ. ಮಹಾರಾಷ್ಟ್ರ ಭಾಗದಿಂದ ದೂಧ್‌ಗಂಗಾ ನದಿಗೆ ಸುಮಾರು 15 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಕೂಡ ಮಳೆಯಾರ್ಭಟ ಮುಂದುವರಿದಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕು ವ್ಯಾಪ್ತಿಯ ಐದು ಕೆಳಹಂತದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದಾಗಿ ಹಲವು ಗ್ರಾಮಗಳ ನಡುವಿನ ನೇರ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ.
ಆಲಮಟ್ಟಿಗೆ ಹೆಚ್ಚಾಗುತ್ತಿದೆ ನೀರು:
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅಲ್ಲಿಂದ ಬರುತ್ತಿರುವ ನೀರಿನ ಪ್ರಮಾಣದಲ್ಲಿಯೂ ಗಣನೀಯವಾಗಿ ಕೃಷ್ಣಾ ನದಿಗೆ ಹರಿದುಬರುತ್ತಿದೆ. ಜೊತೆಗೆ ಆಲಮಟ್ಟಿ ಜಲಾಶಯಕ್ಕೆ ಗುರುವಾರ ರಾತ್ರಿ 71,750 ಕ್ಯುಸೆಕ್ ನೀರು ಬರುತ್ತಿದ್ದು, 67500 ಕ್ಯುಸೆಕ್ ಹೊರಗೆ ಬಿಡಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಲಮಟ್ಟಿ ಜಲಾಶಯ ತುಂಬುವ ಸಾಧ್ಯತೆ ಇದೆ.
ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ
- ಕಬಿನಿ 67% 2284 2272.85
- ಹೇಮಾವತಿ 61% 2922 2904.57
- ತುಂಗಭದ್ರಾ 26% 1633 1604.55
- ಸೂಪಾ(ಮೀ.) 31% 564 532.90
- ಕೆಆರ್‌ಎಸ್ 35% 124.80 92.08
- ಘಟಪ್ರಭಾ 51% 2175 2138.00
- ಲಿಂಗನಮಕ್ಕಿ 24% 1819. 1768.00
- ಭದ್ರಾ 49% 2158 2122.83
- ಹಾರಂಗಿ 85% 2859 2855.18
- ಆಲಮಟ್ಟಿ(ಮೀ.) 84% 519.60 518.38
- ನಾರಾಯಣಪುರ(ಮೀ.) 72% 492.25 489.97
- ಮಲಪ್ರಭಾ 36% 2079.50 2056.30


