Asianet Suvarna News Asianet Suvarna News

ಉಡುಪಿ: ಸಾಮಾಜಿಕ ಕಾರ್ಯಕರ್ತರ ಅವಿರತ ಸೇವೆ, 3 ವರ್ಷಗಳ ಬಳಿಕ ಕುಟುಂಬ ಸೇರಿದ ರಾಜಸ್ಥಾನದ ಯುವಕ

ರವಿ ಸಿಂಗ್‌ನನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ ಉಡುಪಿಯ ಪ್ರಸಿದ್ಧ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಎರಡು ತಿಂಗಳ ಕಾಲ ಚಿಕಿತ್ಸೆ ನೀಡಿದ ಬಾಳಿಗಾ ಆಸ್ಪತ್ರೆ, 6 ತಿಂಗಳ ಕಾಲ ಪುನರ್ವಸತಿ ಕಲ್ಪಿಸಿದ ಮಣಿಪಾಲ ಕೆಎಂಸಿಯ ಅಂಗಸಂಸ್ಥೆ `ಹೊಂಬೆಳಕು' ಸಂಸ್ಥೆ ಹಾಗೂ ಕೊನೆಯವರೆಗೂ ಆಶ್ರಯ ನೀಡಿದ ಮಂಜೇಶ್ವರ ದೈಗುಳಿಯ ಶ್ರೀಸಾಯಿ ಸೇವಾಶ್ರಮದ ಡಾ.ಉದಯ ಕುಮಾರ್ ದಂಪತಿ ಅವರ ಶ್ರಮ ಸಾರ್ಥಕಗೊಂಡಿದೆ

Ravi Singh from Rajasthan Joined the Family after 3 years in Udupi grg
Author
First Published Jun 1, 2023, 11:29 AM IST

ಉಡುಪಿ(ಜೂ.01): ಮಾನಸಿಕವಾಗಿ ಅಸ್ವಸ್ಥಗೊಂಡು 15 ತಿಂಗಳ ಹಿಂದೆ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರಾಜಸ್ಥಾನದ ನಿವಾಸಿ ರವಿ ಸಿಂಗ್ (27) ಸಾಮಾಜಿಕ ಕಾರ್ಯಕರ್ತರ ಸಹೃದಯ ಸೇವೆಯಿಂದ ಚೇತರಿಸಿಕೊಂಡು 3 ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾನೆ.

ಈತನನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ ಉಡುಪಿಯ ಪ್ರಸಿದ್ಧ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಎರಡು ತಿಂಗಳ ಕಾಲ ಚಿಕಿತ್ಸೆ ನೀಡಿದ ಬಾಳಿಗಾ ಆಸ್ಪತ್ರೆ, 6 ತಿಂಗಳ ಕಾಲ ಪುನರ್ವಸತಿ ಕಲ್ಪಿಸಿದ ಮಣಿಪಾಲ ಕೆಎಂಸಿಯ ಅಂಗಸಂಸ್ಥೆ `ಹೊಂಬೆಳಕು' ಸಂಸ್ಥೆ ಹಾಗೂ ಕೊನೆಯವರೆಗೂ ಆಶ್ರಯ ನೀಡಿದ ಮಂಜೇಶ್ವರ ದೈಗುಳಿಯ ಶ್ರೀಸಾಯಿ ಸೇವಾಶ್ರಮದ ಡಾ.ಉದಯ ಕುಮಾರ್ ದಂಪತಿ ಅವರ ಶ್ರಮ ಸಾರ್ಥಕಗೊಂಡಿದೆ.

ಹಿಜಾಬ್‌ ಬಗ್ಗೆ ಸಾಹಿತಿಗಳಿಂದ ಅನಗತ್ಯ ಗೊಂದಲ: ಶಾಸಕ ಯಶ್ಪಾಲ್‌ ಗರಂ

ಪ್ರಕರಣದ ಹಿನ್ನಲೆ : 

ರವಿ ಸಿಂಗ್ ಮನೆ ಬಿಟ್ಟು 3 ವರ್ಷಗಳಾಗಿದ್ದು, ಮಾನಸಿಕ ಅಸ್ವಸ್ಥತೆಗೊಂಡು ಹುಚ್ಚನಂತೆ ಬ್ರಹ್ಮಾವರ ಸಮೀಪದ ಉಪ್ಪೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಂಡಲೆಯುತ್ತಾ ಅನಾಗರಿಕ ಜೀವನ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಈತನನ್ನು ರಕ್ಷಿಸಿ, ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ 2 ತಿಂಗಳ ಕಾಲ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದರು. 

ಈ ಸಂದರ್ಭದಲ್ಲಿ ರವಿ ಸಿಂಗ್‌ನ ಪಾಲಕರ ಪತ್ತೆಗೆ ಪ್ರಯತ್ನ ಮಾಡಲಾದರೂ ಸಫಲವಾಗಲಿಲ್ಲ. ಹೀಗಾಗಿ ಮಣಿಪಾಲ ಕೆಎಂಸಿಯ ಅಂಗ ಸಂಸ್ಥೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ `ಹೊಂಬೆಳಕು' ಈತನಿಗೆ 6 ತಿಂಗಳಕಾಲ ಉಚಿತ ಚಿಕಿತ್ಸೆ ಹಾಗೂ ಆಶ್ರಯ ನೀಡಲು ಒಪ್ಪಿತು. 

ಕಾರ್ಕಳ: ಮಲ್ಲಿಗೆ ಧಾರಣೆ ಕುಸಿತ: ಬೆಳೆಗಾರರು ಕಂಗಾಲು

ಈ ಅವಧಿಯಲ್ಲೂ ರವಿ ಸಿಂಗ್‌ನ ಹೆತ್ತವರ ಪತ್ತೆಗೆ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಕೊನೆಗೆ ವಿಶು ಶೆಟ್ಟಿ ಅವರು ರವಿ ಸಿಂಗ್‌ಗೆ ಪುನರ್ ವಸತಿ ಹಾಗೂ ಚಿಕಿತ್ಸೆಗಾಗಿ ಮಂಜೇಶ್ವರದ ದೈಗುಳಿ ಶ್ರೀಆಯಿ ಸೇವಾಶ್ರಮವನ್ನು ಸಂಪರ್ಕಿಸಿ ಅನುಮತಿ ಕೋರಿದಾಗ ಆಶ್ರಮದ ಮುಖ್ಯಸ್ಥರಾದ ಡಾ. ಉದಯ ಕುಮಾರ್ ದಂಪತಿ ಸಕರಾತ್ಮಕವಾಗಿ ಸ್ಪಂದಿಸಿದ ಹಿನ್ನಲೆಯಲ್ಲಿ ರವಿ ಸಿಂಗ್‌ನನ್ನು ಅಲ್ಲಿಗೆ ದಾಖಲಿಸಲಾಗಿತ್ತು. ಅಲ್ಲಿ ನಿತ್ಯ ಯೋಗ, ಧ್ಯಾನ ಹಾಗೂ ಔಷಧಿಗೆ ಸ್ಪಂದಿಸಿದ ರವಿ ಸಿಂಗ್ ತನ್ನೂರಿನ ಮಾಹಿತಿ ನೀಡಿದ್ದಾನೆ. ಡಾ. ಉದಯ ಕುಮಾರ್ ಅವರು ರವಿ ಸಿಂಗ್ ನೀಡಿದ ಮಾಹಿತಿಯನ್ನು ಅನುಸರಿಸಿ ಮುಂಬಾಯಿಯ ಶ್ರದ್ಧಾ ರಿಹ್ಯಾಬಿಲಿಟೇಶನ್ ಸೆಂಟರ್‌ನ್ನು ಸಂಪರ್ಕಿಸಿದ್ದಾರೆ. ಈ ಸೆಂಟರ್ ನವರು ರವಿ ಸಿಂಗ್ ಅವರ ಹೆತ್ತವರನ್ನು ಸಂಪರ್ಕಿಸಿ, ರವಿ ಸಿಂಗ್‌ನನ್ನು ಅವರ ವಶಕ್ಕೆ ಒಪ್ಪಿಸುವ ಮೂಲಕ ಮೂರು ವರ್ಷಗಳ ಈ ದೀರ್ಘ ನೋವಿನ ಕಥೆಗೆ ಮಂಗಳ ಹಾಡಿದ್ದಾರೆ.

ರವಿ ಸಿಂಗ್‌ನನ್ನು ಮತ್ತೆ ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಶ್ರಮಿಸಿದ ಉಡುಪಿ ಬಾಳಿಗಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ಹೊಂಬೆಳಕು ಮಾನಸಿಕ ಪುನರ್ವಸತಿ ಕೇಂದ್ರದ ಆಡಳಿತ ಮಂಡಳಿ, ದೀರ್ಘಕಾಲ ಪುನರ್ವಸತಿ ಹಾಗೂ ಚಿಕಿತ್ಸೆ ನೀಡಿದ ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದ ಡಾ.ಉದಯ ಕುಮಾರ್ ದಂಪತಿ ಹಾಗೂ ಶ್ರದ್ಧಾ ಪುನರ್ವಸತಿ ಕೇಂದ್ರಕ್ಕೆ ವಿಶು ಶೆಟ್ಟಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios