ಶಿವಮೊಗ್ಗದ ಸೊಗಾನೆ ಏರ್‌ಪೋರ್ಟ್‌ನಿಂದ ಸ್ಟಾರ್ ಏರ್‌ಲೈನ್ಸ್ ವಿಮಾನ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಏರ್‌ಪೋರ್ಟ್ ಮ್ಯೂಸಿಯಂ ಆಗುವ ಆತಂಕವನ್ನು ಸಂಸದ ಬಿ.ವೈ. ರಾಘವೇಂದ್ರ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ (ನ.09): ಶಿವಮೊಗ್ಗದ ಸೊಗಾನೆಯಲ್ಲಿರುವ ಏರ್‌ಪೋರ್ಟ್‌ನಿಂದ ಸ್ಟಾರ್ ಏರ್‌ಲೈನ್ಸ್ (Star Air) ವಿಮಾನ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮುಂದುವರಿದರೆ ಶಿವಮೊಗ್ಗ ಏರ್‌ಪೋರ್ಟ್ ಕೇವಲ 'ಮ್ಯೂಸಿಯಂ' ಆಗಿ ಉಳಿಯಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಇದೇ ತಿಂಗಳ 29 ರಂದು ಸ್ಟಾರ್ ಏರ್‌ಲೈನ್ಸ್ ವಿಮಾನ ಸಂಸ್ಥೆಯು ಶಿವಮೊಗ್ಗದಿಂದ ತನ್ನ ಪ್ರಯಾಣ ಸೇವೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಕಳೆದ 3 ವರ್ಷಗಳಲ್ಲಿ ಶಿವಮೊಗ್ಗ ಏರ್‌ಪೋರ್ಟ್‌ನಿಂದ ಬರೋಬ್ಬರಿ 4 ಲಕ್ಷದ 29 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಉತ್ತಮ ಪ್ರಯಾಣಿಕರ ಸಾಂದ್ರತೆ ಇದ್ದರೂ ವಿಮಾನ ಸೇವೆ ಸ್ಥಗಿತಗೊಳ್ಳುತ್ತಿರುವುದು ಅತ್ಯಂತ ಬೇಸರದ ಸಂಗತಿ' ಎಂದರು.

ಸರ್ಕಾರಕ್ಕೆ 2 ಬಾರಿ ಪತ್ರ ಬರೆದರೂ ಸ್ಪಂದನೆ ಇಲ್ಲ!

ಫೆಬ್ರವರಿ 27, 2023 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಸ್ವತಃ ಆಗಮಿಸಿ ಉದ್ಘಾಟನೆ ಮಾಡಿದ ಈ ಏರ್‌ಪೋರ್ಟ್, ರಾಜ್ಯ ಸರ್ಕಾರದ ಚೌಕಟ್ಟಿನಲ್ಲೇ ಆಪರೇಟ್ ಆಗಬೇಕಾದ ಏಕೈಕ ವಿಮಾನ ನಿಲ್ದಾಣವಾಗಿದೆ. 'ವಿಮಾನ ಸೇವೆ ಮುಂದುವರಿಸಲು ಕೋರಿ ನಾನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ 19-09-2026 ಮತ್ತು 14-10-2026 ರಂದು ಎರಡು ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಸರ್ಕಾರದಿಂದ ಸೂಕ್ತ ಬೆಂಬಲ ಸಿಕ್ಕಿಲ್ಲ' ಎಂದು ಸಂಸದರು ಆರೋಪಿಸಿದರು.

ಇಂಡಿಗೋ ಆಪರೇಟರ್‌ಗೆ ಅವಕಾಶ ನೀಡಿ!

ಈ ಹಿಂದೆ ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಮಾನವನ್ನು BGMI ಕೋರಿದರೂ ಮುಂದುವರಿಸಲಿಲ್ಲ, ಸರ್ಕಾರ ಸಬ್ಸಿಡಿಯನ್ನೂ ನೀಡಲಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಒಬ್ಬ ಇಂಡಿಗೋ (IndiGo) ಆಪರೇಟರ್‌ಗೆ ಅವಕಾಶ ಕಲ್ಪಿಸಬೇಕು. ಬೆಂಗಳೂರು - ಶಿವಮೊಗ್ಗ - ಬೆಂಗಳೂರು ಮಾರ್ಗದಲ್ಲಿ ನಿಯಮಿತ ವಿಮಾನ ಸಂಚಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗಕ್ಕೆ ಯಾಕೀ ತಾರತಮ್ಯ?

'ರಾಜ್ಯದಿಂದ ಮೈಸೂರು - ಮುಂಬೈ ಸೇರಿ 4 ಏರ್‌ಪೋರ್ಟ್ ಲೈನ್‌ಗಳ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮೈಸೂರು, ಕಲಬುರಗಿ, ಬೀದರ್, ಹುಬ್ಬಳ್ಳಿಗೆ ಸೌಲಭ್ಯ ಕಲ್ಪಿಸುವ ಸರ್ಕಾರ, ಶಿವಮೊಗ್ಗಕ್ಕೆ ಯಾಕೆ ಸೌಲಭ್ಯ ನೀಡುತ್ತಿಲ್ಲ? ಮೈಸೂರು ಏರ್‌ಪೋರ್ಟ್‌ನ್ನು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಿರ್ವಹಣೆ ಮಾಡುತ್ತಿದೆ. ಆದರೆ ಶಿವಮೊಗ್ಗ ಏರ್‌ಪೋರ್ಟ್ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಆಸ್ತಿಯಾಗಿದ್ದು, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆಯೇ ಇದೆ' ಎಂದರು.

ಮಂಗಳೂರಿಗೆ ₹30,000 ಕೋಟಿ, ಮಂಡ್ಯಕ್ಕೆ ₹3,000 ಕೋಟಿ ಅನುದಾನ ನೀಡಿದ ಸರ್ಕಾರ, ಶಿವಮೊಗ್ಗಕ್ಕೆ ಕಳೆದ 3.5 ವರ್ಷದಲ್ಲಿ ಏನು ಕೊಟ್ಟಿದ್ದೀರಿ? ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಶ್ನಿಸಿದ್ದಾರೆ. ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ನೈಟ್ ಲ್ಯಾಂಡಿಂಗ್ ಲೈಟ್ (Night Landing Facility) ವ್ಯವಸ್ಥೆ ಶೀಘ್ರದಲ್ಲೇ ಶುರುವಾಗಲಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.