ಕಾವೇರಿ ಪ್ರವಾಹದ ಅಬ್ಬರಕ್ಕೆ ನಲುಗಿದ ರಂಗನತಿಟ್ಟು ಪಕ್ಷಿಧಾಮ

https://static.asianetnews.com/images/authors/b348a094-0bef-5801-a1f6-61e57071185f.jpg
First Published 9, Aug 2018, 1:23 PM IST
Ranganathittu Bird Sanctuary ravaged due to Cauvery flood
Highlights

ಈ ವರ್ಷ ಮುಂಗಾರು ಸಮೃದ್ಧವಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ, ಹರಿದ ನೀರಿನ ಪ್ರವಾಹದಿಂದ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಪಕ್ಷಿಧಾಮದ ಮೇಲೆ ಪರಿಣಾಮ ಬೀರಿದರೆ, ಇತ್ತ ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮದಲ್ಲಿಯೂ ಪಕ್ಷಿಗಳು ತತ್ತರಿಸಿ ಹೋಗಿವೆ.

-  ಎಲ್. ವಿ. ನವೀನ್ ಕುಮಾರ್
ಶ್ರೀರಂಗಪಟ್ಟಣ:
ಅಪಾರ ಪ್ರಮಾಣದ ಪಕ್ಷಿಗಳ ಗೂಡುಗಳ ನಾಶ. ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ 300ಕ್ಕೂ ಹೆಚ್ಚಿನ ಗಿಡ ಮರಗಳು.

ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಕಳೆದ ಎರಡು ವಾರಗಳ ಹಿಂದೆ 60-70 ಸಾವಿರ ಕ್ಯುಸೆಕ್ ನೀರನ್ನು ಬಿಟ್ಟ ಸಮಯದಲ್ಲಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಆಗಿರುವ ಅವಾಂತರ ಸ್ಥೂಲ ಚಿತ್ರಣವಿದು. ಈ ಸಲ ಭಾರಿ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕೆಆರ್‌ಎಲ್ ೮೦ ಸಾವಿರ ಕ್ಯುಸೆಕ್ ನೀರು ಪ್ರವಾಹೋ ಪಾದಿಯಲ್ಲಿ ಹರಿದು ಹೋಗಿದೆ.

ಅತಿ ಹೆಚ್ಚು ಪ್ರಮಾಣದ ನೀರನ್ನು ಹೊರಗೆ ಬಿಟ್ಟ ಪರಿಣಾಮ ಶ್ರೀರಂಪಗಟ್ಟಣ ಬಳಿಯ ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಧಕ್ಕೆ ಉಂಟಾಗಿದೆ. ಪಕ್ಷಿ ಸಂಕುಲಕ್ಕೆ ಅನುಕೂಲವಾಗುವ ರೀತಿಯಲ್ಲಿ ಬೆಳೆಸಲಾಗಿದ್ದ ೩೦೦ಕ್ಕೂ ಹೆಚ್ಚು ಗಿಡ ಮರಗಳಿಗೆ ಅಪಾರ ಹಾನಿಯಾಗಿವೆ. ಕೆಲವು ಕೊಚ್ಚಿ ಹೋಗಿವೆ.

ನೀರಿನ ರಭಸಕ್ಕೆ ಪಕ್ಷಿಧಾಮ ತತ್ತರಿಸಿ ಹೋಗಿತ್ತು. ಪಕ್ಷಿಗಳು ಸಹ ನಲುಗಿ ಹೋಗಿದ್ದವು. ರಂಗನತಿಟ್ಟು ಪಕ್ಷಿಧಾಮದಲ್ಲಿ ೩೪ ದ್ವೀಪಗಳಿವೆ. ಇಲ್ಲಿಗೆ ಅಪರೂಪದ ಪಕ್ಷಿಗಳೂ ಸೇರಿದಂತೆ 200ಕ್ಕೂ ಹೆಚ್ಚು ಬಗೆಯ ಪಕ್ಷಿ ಸಂಕುಲ ವಲಸೆ ಬರುವುದು ವಿಶೇಷ.

ಕಳೆದ 20 ದಿನಗಳ ಹಿಂದೆ ಕೆಆರ್‌ಎಸ್ ಅಣೆಕಟ್ಟೆಯಿಂದ ಪ್ರತೀ ದಿನ 60 ರಿಂದ 75 ಸಾವಿರ ಕ್ಯುಸೆಕ್ ನಷ್ಟು ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿತ್ತು. ಹೀಗಾಗಿ ದ್ವೀಪ ಸಮೂಹದಲ್ಲಿ ಗೂಡು ಕಟ್ಟಿಕೊಂಡು ಪಕ್ಷಿಗಳು ವಾಸಮಾಡಲು ಎಂಬ ಸಹಾಯಕವಾಗಿದ್ದ ಗಿಡಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಹಾಗಾಗಿ ಪ್ರವಾಹದಲ್ಲಿ ಪಕ್ಷಿಗಳು ಕಟ್ಟಿಕೊಂಡಿದ್ದ ಗೂಡುಗಳು ಸಹ ಕೊಚ್ಚಿಹೋಗಿವೆ.

ನಷ್ಟದ ಅಂದಾಜು ಪರಿಶೀಲನೆಗೆ ತಂಡ
ರಂಗನತಿಟ್ಟು  ಪಕ್ಷಿಧಾಮದಲ್ಲಿ ನೀರಿನ ಪ್ರವಾಹದಿಂದ ಸಂಭವಿಸಿರುವ ಹಾನಿ ಅಧ್ಯಯನಕ್ಕೆ ಕಳೆದ ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಕ್ಷಿ ತಜ್ಞರ ತಂಡ ಪಕ್ಷಿಧಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸಿದ್ದರಾಮಪ್ಪ ಚಲ್ಕಾಪುರೆ, ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮತ್ತು ಮೈಸೂರು ಮೂಲದ ಪಕ್ಷಿ ತಜ್ಞ ರಘುರಾಮ್ ನೇತೃತ್ವದಲ್ಲಿ ಅಧಿಕಾರಿಗಳು ರಂಗನತಿಟ್ಟು ಪಕ್ಷಿಧಾಮದ ಹಾನಿ ಕುರಿತು ಪರಿಶೀಲನೆ ನಡೆಸಿದರು. ದ್ವೀಪ ಸಮೂಹದ ಮರಗಳು ಬುಡ ಸಮೇತ ಕೊಚ್ಚಿ ಹೋಗಿರುವುದರಿಂದ ಪಕ್ಷಿಗಳು ಆ ಮರಗಳಲ್ಲಿ ಕಟ್ಟಿದ್ದ ಗೂಡುಗಳು ಸಹ ನೀರಿನಲ್ಲಿ ಕೊಚ್ಚಿಹೋಗಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ.

ಮೊಸಳೆಗಳು ಸುರಕ್ಷಿತ
ರಂಗನತಿಟ್ಟು ಪಕ್ಷಿಧಾಮದಲ್ಲಿ ಯಾವುದೇ ಪಕ್ಷಿ, ಮೊಸಳೆ ಇತರ ಪ್ರಾಣಿಗಳಿಗೆ ತೊಂದರೆಯಾಗಿಲ್ಲ, ಈ ವೇಳೆಯಲ್ಲಿ ಐಬಿಸ್ ಮತ್ತು ಗ್ರೇಟ್ ಫಾರ್ಮರ್ ಎಂಬ ಪಕ್ಷಿಗಳು ಮಾತ್ರ ಮೊಟ್ಟೆ ಇಡುತ್ತವೆ, ಆದರೆ ಆ ಪಕ್ಷಿಗಳು ಅತಿ ಎತ್ತರದ ಮರಗಳನ್ನು ಆಯ್ಕೆಮಾಡಿ ಅಲ್ಲಿ ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ಉಳಿದಂತೆ ಯಾವ ಪಕ್ಷಿಗಳು ಸಹ ಈ ಸಮಯದಲ್ಲಿ ಮೊಟ್ಟೆ ಇರುವುದಿಲ್ಲ ಇದರಿಂದ ಯಾವುದೇ ಪಕ್ಷಿಗಳಿಗೆ ತೊಂದರೆಯಾಗಿಲ್ಲ ಎಂದು ವಿವರಿಸಿದರು. ಪ್ರವಾಹಕ್ಕೆ ಹೆದರಿ ಐ ಲ್ಯಾಂಡ್‌ನಲ್ಲಿ ವಾಸವಿದ್ದ ಮೊಸಳೆಗಳು ನೀರು ಹೆಚ್ಚಾದ ಸಮಯದಲ್ಲಿ ಬೇರೆಡೆ ತೆರಳಿದ್ದವು. ಆ ಮೊಸಳೆಗಳು ಮತ್ತೆ ನದಿಗೆ ಬಂದಿವೆ. ಇದರಿಂದ ಮೊಸಳೆಗಳು ಕೂಡ ಸುರಕ್ಷಿತವಾಗಿವೆ ಎಂದರು.  

ಪ್ರವಾಹದ ನಂತರ ತ್ಯಾಜ್ಯಧಾಮ!
ನದಿಯ ಇಕ್ಕೆಲಗಳಲ್ಲಿ ಅಳವಡಿಸಲಾಗಿದ್ದ ಬೇಲಿಯ ಕಾಂಕ್ರಿಟ್ ಕಂಬಗಳು ಸಹ ನೆಲಸಮಗೊಂಡಿವೆ. ಕೆಲವೆಡೆ ಪ್ಲಾಸ್ಟಿಕ್ ಹಾಗೂ ಕಸಕಡ್ಡಿ ಅಪಾರ ಪ್ರಮಾಣದಲ್ಲಿ ಬಂದು ಶೇಖರಣೆಯಾಗಿದೆ. ಕಳೆದ ಬಾರಿ ನಡೆಸಿದ್ದ ಪಕ್ಷಿ ಗಣತಿ ಆಧರಿಸಿ ಪ್ರವಾಹದ ನಂತರ ಆಗಿರಬಹುದಾದ ಪಕ್ಷಿಗಳ ನಷ್ಟದ ಅಂದಾಜು ನಡೆಸುತ್ತಿದ್ದಾರೆ. ರಂಗನತಿಟ್ಟಿನ ಮರಗಿಡಗಳು, ಪಕ್ಷಿ ಸಂಕುಲದ ಹಾನಿ ಬಗ್ಗೆ ಅಧ್ಯಯನ ನಡೆಸಿದ ನಂತರ ಕೈಗೊಳ್ಳಬಹುದಾದ ಪರಿಹಾರೋಪಾಯ ಹಾಗೂ ಮುಂಜಾಗ್ರತಾ ಕ್ರಮದ ಕುರಿತಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಅರಣ್ಯ ಅಧಿಕಾರಿ ಸಿದ್ದರಾಮಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. 

ಪರಿಹಾರೋಪಾಯಗಳು...
ಅಧಿಕ ಸಸಿಗಳನ್ನು ನೆಟ್ಟು ಪುನಃ ಮರಗಳನ್ನು ಬೆಳೆಸುವುದು, ಪ್ರವಾಹ ಬಂದಾಗ ಮಣ್ಣು ಕೊಚ್ಚಿಕೊಂಡು ಹೋಗದಂತೆ ಮರಳಿನ ಮೂಟೆಗಳನ್ನು ಹಾಕುವುದು, ದ್ವೀಪಗಳಿಗೂ ಹಾನಿ ಆಗದಂತೆ ತಡೆಯುವುದೂ ಹೀಗೆ ಅಗತ್ಯವಾಗಿ ಕೈಗೊಳ್ಳಬೇಕಾದ ಕಾಮಗಾರಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಂಗನತಿಟ್ಟಿನ ಪಕ್ಷಿಧಾಮದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
 

loader