Asianet Suvarna News Asianet Suvarna News

ರಮೇಶ್‌ ರಜಿನಿಯ 'ಸಂಘರ್ಷರಹಿತ ಪಾಲಕತ್ವ' ಪುಸ್ತಕ ಲೋಕಾರ್ಪಣೆ

ಇನ್ಫೋಸಿಸ್‌ ಸಂಸ್ಥೆಯಲ್ಲಿ ಪ್ರಧಾನ ಕನ್ಸಲ್ಟಂಟ್‌ ಆಗಿರುವ ರಮೇಶ್‌ ರಜಿನಿ ಅವರು ಮಕ್ಕಳನ್ನು ಬೆಳೆಸುವುದರ ಕುರಿತು ಬರೆದಿರುವ ʻಫ್ರಿಕ್ಷನ್ ಫ್ರಿ ಪೇರೆಂಟಿಂಗ್ʼ ಪುಸ್ತಕ ಡಿಸೆಂಬರ್‌ 4 ರಂದು ಲೋಕಾರ್ಪಣೆಗೊಂಡಿತು. 

Ramesh Rajinis Sangharsha Rahita Palakatva book launched At Bengaluru gvd
Author
First Published Dec 12, 2022, 3:12 PM IST

ಬೆಂಗಳೂರು (ಡಿ.12): ಇನ್ಫೋಸಿಸ್‌ ಸಂಸ್ಥೆಯಲ್ಲಿ ಪ್ರಧಾನ ಕನ್ಸಲ್ಟಂಟ್‌ ಆಗಿರುವ ರಮೇಶ್‌ ರಜಿನಿ ಅವರು ಮಕ್ಕಳನ್ನು ಬೆಳೆಸುವುದರ ಕುರಿತು ಬರೆದಿರುವ ʻಫ್ರಿಕ್ಷನ್ ಫ್ರಿ ಪೇರೆಂಟಿಂಗ್ʼ ಪುಸ್ತಕ ಡಿಸೆಂಬರ್‌ 4 ರಂದು ಲೋಕಾರ್ಪಣೆಗೊಂಡಿತು. ಮುಖ್ಯ ಅತಿಥಿ ವ್ಯಕ್ತಿತ್ವ ವಿಕಸನ ತಜ್ಞೆ ದಿವ್ಯಾ ಅಮರನಾಥ್‌ ಅವರು ಮಾತನಾಡಿ, ʻರಜನಿ ಬಹುಮುಖ ಪ್ರತಿಭೆಯುಳ್ಳವರು. ಅವರು ತಮ್ಮ ನಾಯಕತ್ವದ ಪಾಠಗಳು, ಸಂಗೀತ, ತೋಟಗಾರಿಕೆ ಹೀಗೆ ಎಲ್ಲದರ ಅನುಭವಗಳನ್ನು ಒಟ್ಟುಗೂಡಿಸಿ ಹೊರ ತಂದಿರುವ ಅದ್ಭುತ ʻಪುಸ್ತಕ-ಫ್ರಿಕ್ಷನ್ ಫ್ರೀ ಪೇರೆಂಟಿಂಗ್ʼ ಎಂದರು. 

ಪ್ರಾಯೋಗಿಕ ಮಾರ್ಗಗಳ ಮೂಲಕ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿ ಶಾಂತಿಯುತ ಜೀವನ ನಡೆಸಲು ಆಗತ್ಯವಿರುವ ವಿಷಯಗಳನ್ನು ಅಕಾರಾದಿಯಾಗಿ ಅಣಿಮುತ್ತುಗಳಂತೆ ಪುಸ್ತಕದಲ್ಲಿ ಪೋಣಿಸಲಾಗಿದೆʼ ಎಂದರು. ಪುಸ್ತಕದ ಪರಿಚಯ ಮಾಡಿಕೊಟ್ಟ ಲೇಖಕ ಸುರೇಶ್ ಮಾಯಸಂದ್ರ ಅವರು ಲೇಖಕಿ ರಜಿನಿ ಅವರು ಬಿಡುವಿಲ್ಲದ ವೃತ್ತಿಜೀವನದ ಜತೆ ಸಂಗೀತ, ಬರವಣಿಗೆಯಂತಹ ಹವ್ಯಾಸಗಳನ್ನು ಕೈಬಿಡದೇ ಅರ್ಥಪೂರ್ಣವಾಗಿ ಬದುಕುತ್ತಿದ್ದಾರೆ ಎಂದು ಶ್ಲಾಘಿಸಿದರು. ಒತ್ತಡ ರಹಿತ ಜೀವನ ಸಾಗಿಸಲು ಹಾಗೂ ಮಕ್ಕಳನ್ನು ಸಕಾರಾತ್ಮಕವಾಗಿ ಬೆಳೆಸಲು ಬೇಕಿರುವ ಅರಿವು, ಪ್ರಾಯೋಗಿಕ ಮಾರ್ಗಗಳು ಈ ಕೃತಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಜನಾದ್ರಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು?

ಜೀವನದಲ್ಲಿ ನಮ್ಮ ಸಾಮರ್ಥ್ಯ ಹಾಗೂ ಶಕ್ತಿ ಕುಂದಿಸುವ ಸನ್ನಿವೇಶಗಳು ಉದ್ಭವಿಸಿದಂತೆ ನೋಡಿಕೊಳ್ಳಬೇಕು. ಸಂಘರ್ಷರಹಿತ ಜೀವನವು ನಮ್ಮ ಆಸಕ್ತಿಯನ್ನು ಪೋಷಿಸಿಕೊಳ್ಳಲು, ಆರೋಗ್ಯಕರ ಸಂಬಂಧ ಹೊಂದಲು ಅವಕಾಶ ಮಾಡಿಕೊಡುತ್ತದೆ. ನಮ್ಮ ಜೀವನದಲ್ಲಿ ಮಾನಸಿಕ ಶಾಂತಿ ಹೊಂದಲು, ಶಾಂತಿಯುತ ನೆರೆಹೊರೆ, ಉತ್ತಮ ರಾಷ್ಟ್ರ ಮತ್ತು ವಿಶ್ವಕ್ಕಾಗಿ ಯೋಚಿಸಲು ಹೆಚ್ಚು ಅವಕಾಶ ಕಲ್ಪಿಸುತ್ತದೆ. ಪ್ರತಿ ಮನೆಯೂ ಸಂಘರ್ಷ ಮುಕ್ತವಾಗಿರಬೇಕು ಎನ್ನುವುದು ತಮ್ಮ ಆಶಯ ಎಂದು ಕೃತಿಯ ಲೇಖಕಿ ರಮೇಶ್‌ ರಜಿನಿ ಹೇಳಿದರು.  

ಲೇಖಕ, ವಾಗ್ಮಿ ಹಾಗೂ ಶಿಕ್ಷಣ ತಜ್ಞರಾಗಿರುವ ಡಾ. ಗುರುರಾಜ ಕರ್ಜಗಿ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಮಕ್ಕಳನ್ನು ಬೆಳೆಸುವಾಗ ಪಾಲಕರು ಮಕ್ಕಳೊಂದಿಗೆ ಸಂಘರ್ಷಕ್ಕೆ ಇಳಿಯದೇ, ಶಾಂತ ಮನೋಭಾವದಿಂದ ಅವರಲ್ಲಿ ಜೀವನ ಕೌಶಲ್ಯಗಳನ್ನು ಹಾಗೂ ನಿತ್ಯ ಜೀವನಕ್ಕೆ ಬೇಕಾದ ಶಿಸ್ತನ್ನು ಹೇಗೆ ಅಳವಡಿಸಿಕೊಳ್ಳುವಂತೆ ಮಾಡಬೇಕು ಎನ್ನುವುದನ್ನು ರಜಿನಿ ಪುಸ್ತಕದಲ್ಲಿ ವಿವರಿಸಿದ್ದಾರೆ. ಕೋವಿಡ್‌ ಸಮಯದಲ್ಲಿ ಮನೆಯಲ್ಲೇ ಕೆಲಸ ಮಾಡುತ್ತಿದ್ದಾಗ ಮಕ್ಕಳಲ್ಲಿ ಶಿಸ್ತು ಮೂಡಿಸುವಾಗ ಆದ ಅನುಭವ ಮತ್ತು ತಮ್ಮ ಕೌನ್ಸೆಲಿಂಗ್‌ ಅನುಭವಗಳನ್ನು  ಸೇರಿಸಿ ರಜಿನಿ ಅವರು ಈ ಪುಸ್ತಕ ಬರೆದಿದ್ದು, ಕಲಾವಿದ ಯತೀಶ್ ಸಿದ್ದಕಟ್ಟೆಯವರ ಚಿತ್ರಗಳು ಪುಸ್ತಕಕ್ಕೆ ಮೆರುಗು ನೀಡಿವೆ.

ಜ್ಞಾನ, ಕೌಶಲಗಳಿಂದ ಬದುಕು ರೂಪಿಸಿಕೊಳ್ಳಬೇಕು: ನಟಿ ಪ್ರೇಮಾ

ಸಮಾರಂಭದಲ್ಲಿ ಅತಿಥಿಗಳಾಗಿ ಸಂಗೀತಗಾರ ವಿಶ್ವೇಶ್ ಭಟ್, ಕಲಾವಿದ ಯತೀಶ್ ಸಿದ್ದಕಟ್ಟೆ, ಲಯನ್ಸ್ ಬ್ಲಡ್ ಬ್ಯಾಂಕ್ ಮಾಲೀಕರಾದ ಮನೋಜ್‌ ರನ್ನೋರೆ, ವೈದ್ಯ ಡಾ. ಉಮಾಕಾಂತ್ ಅಡಿಗ ಹಾಗೂ ಶ್ರೀನಿವಾಸ್ ಪಾರ್ಥಸಾರಥಿ ಉಪಸ್ಥಿತರಿದ್ದರು. ʻವೈಟ್‌ ಫಾಲ್ಕನ್‌ ಪಬ್ಲಿಷಿಂಗ್‌ʼ ಈ ಪುಸ್ತಕವನ್ನು ಪ್ರಕಟಿಸಿದೆ. 192 ಪುಟಗಳ ಈ ಪುಸ್ತಕ ಇಂಗ್ಲಿಷ್‌ ಭಾಷೆಯಲ್ಲಿದ್ದು, ಬೆಲೆ 297 ರೂಪಾಯಿಗಳು. ಅಮೆಜಾನ್, ಫ್ಲಿಪ್‌ಕಾರ್ಟ್‌ ಹಾಗೂ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಈ ಪುಸ್ತಕ ಲಭ್ಯವಿದೆ.

Follow Us:
Download App:
  • android
  • ios