ಅಂಜನಾದ್ರಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು?
ದಕ್ಷಿಣ ಭಾರತದ ಹಿಂದೂಗಳ ಶಕ್ತಿಕೇಂದ್ರವಾಗಿ ರೂಪುಗೊಳ್ಳುತ್ತಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯ ಅಭಿವೃದ್ಧಿಗಾಗಿ ಈಗಾಗಲೇ ರಾಜ್ಯ ಸರ್ಕಾರ .120 ಕೋಟಿ ಘೋಷಣೆ ಮಾಡಿದ್ದು, ಇದಕ್ಕಾಗಿ ನೀಲನಕ್ಷೆಯೂ ಸಿದ್ಧವಾಗಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಡಿ.12): ದಕ್ಷಿಣ ಭಾರತದ ಹಿಂದೂಗಳ ಶಕ್ತಿಕೇಂದ್ರವಾಗಿ ರೂಪುಗೊಳ್ಳುತ್ತಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯ ಅಭಿವೃದ್ಧಿಗಾಗಿ ಈಗಾಗಲೇ ರಾಜ್ಯ ಸರ್ಕಾರ .120 ಕೋಟಿ ಘೋಷಣೆ ಮಾಡಿದ್ದು, ಇದಕ್ಕಾಗಿ ನೀಲನಕ್ಷೆಯೂ ಸಿದ್ಧವಾಗಿದೆ. ಇದರ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಡಿ. 15ರಂದು ಬಿಜೆಪಿ ಕಾರ್ಯಾಲಯದ ಉದ್ಘಾಟನೆ ನೆರವೇರಿಸಲು ಕೊಪ್ಪಳಕ್ಕೆ ಆಗಮಿಸುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಕುರಿತು ಸ್ಥಳೀಯ ನಾಯಕರು ಪ್ರಸ್ತಾವನೆಯನ್ನು ಸಲ್ಲಿಸಲಿದ್ದಾರೆ.
ಅಯೋಧ್ಯೆ ಮಾದರಿಯಲ್ಲಿಯೇ ಅಂಜನಾದ್ರಿಯನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಬೇಡಿಕೆ ಇದ್ದು, ಅದಕ್ಕೆ ಕೇಂದ್ರ ಸರ್ಕಾರವೇ ಮನಸ್ಸು ಮಾಡಬೇಕಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನ ಮಾಡಿ ಅಯೋಧ್ಯೆ ಮಾದರಿಯಲ್ಲಿಯೇ ಅಭಿವೃದ್ಧಿ ಘೋಷಣೆ ಮಾಡಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆ. ಈಗಾಗಲೇ ಕೇಂದ್ರ ಸರ್ಕಾರ ಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಿರ್ಧರಿಸಿದೆ. ಇದನ್ನು ದಕ್ಷಿಣ ಭಾರತದ ಹಿಂದೂಗಳ ಶಕ್ತಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ. ರಾಮನ ಬಂಟ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಪಡಿಸುವ ಮೂಲಕ ಹಿಂದೂಗಳನ್ನು ಒಗ್ಗೂಡಿಸುವ ಆಲೋಚನೆ ಇದೆ ಎನ್ನಲಾಗಿದೆ.
Koppal: ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ: ವಿಶೇಷ ಪೂಜೆ
ನೀಲನಕ್ಷೆ ಸಿದ್ಧ: ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರವೂ ಉತ್ಸುಕವಾಗಿದೆ. ಬಜೆಟ್‌ನಲ್ಲಿಯೇ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು .100 ಕೋಟಿ ಘೋಷಣೆ ಮಾಡಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು .20 ಕೋಟಿ ಘೋಷಣೆ ಮಾಡಿದ್ದಾರೆ. ಇದನ್ನು ಒಳಗೊಂಡು ಅಭಿವೃದ್ಧಿ ಮಾಡುವುದಕ್ಕೆ ಈಗಾಗಲೇ ರಾಜ್ಯ ಸರ್ಕಾರ ಮುಂದಾಗಿ, ಭೂಸ್ವಾಧೀನ ಪ್ರಕ್ರಿಯೆ ಚಾಲನೆ ನೀಡಿದೆ. ಇಲ್ಲಿ ಅಭಿವೃದ್ಧಿ ಮಾಡುವ ಕುರಿತು ನೀಲನಕ್ಷೆ ಸಿದ್ಧ ಮಾಡಲಾಗಿದ್ದು, ಇನ್ನೇನು ಅಡಿಗಲ್ಲು ಹಾಕುವುದಷ್ಟೇ ಬಾಕಿ ಇದೆ.
ಆಹ್ವಾನಕ್ಕೆ ಸಿದ್ಧತೆ: ಈಗಾಗಲೇ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಹಾಗೂ ಸಂಸದ ಸಂಗಣ್ಣ ಕರಡಿ ಅವರು ಸೇರಿದಂತೆ ಸ್ಥಳೀಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಡಿ. 15ರಂದು ಕೊಪ್ಪಳಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿ, ಜನವರಿ ವೇಳೆಗೆ ರಾಜ್ಯಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಿಂದಲೇ ಅಡಿಗಲ್ಲು ಹಾಕಿಸುವಂತೆ ಮನವಿ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದರೆ ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ಚಾಲನೆ ದೊರೆಯುತ್ತದೆ. ಹೀಗಾಗಿ ಅವರನ್ನೇ ಆಹ್ವಾನಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸುತ್ತೇವೆ ಹಾಗೂ ಕೊಪ್ಪಳಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ವಿನಂತಿ ಮಾಡುತ್ತೇವೆ.
-ಸಂಗಣ್ಣ ಕರಡಿ, ಸಂಸದ
ರಾಜ್ಯಪಾಲರ ಆಗಮನದ ವೇಳೆ ಅಂಜನಾದ್ರಿಯಲ್ಲಿ ಪೂಜೆಗೆ ಪಟ್ಟು ಹಿಡಿದ ಅರ್ಚಕ ವಿದ್ಯಾದಾಸ ಬಾಬಾ
ಅಂಜನಾದ್ರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರುವ ಪ್ರಯತ್ನ ನಡೆಸಿದ್ದೇವೆ. ಜಿಲ್ಲೆಯ ನಾಯಕರು ರಾಜ್ಯ ನಾಯಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
-ಪರಣ್ಣ ಮುನವಳ್ಳಿ, ಶಾಸಕರು ಗಂಗಾವತಿ