Shivamogga: ಜ್ಞಾನ, ಕೌಶಲಗಳಿಂದ ಬದುಕು ರೂಪಿಸಿಕೊಳ್ಳಬೇಕು: ನಟಿ ಪ್ರೇಮಾ
ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯು ಶಿಕ್ಷಣದ ಮೂಲ ಗುರಿಯಾಗಿದೆ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವಂತರಾಗಿ, ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಪ್ರೇಮಾ ಹೇಳಿದರು.
ಶಿಕಾರಿಪುರ (ಡಿ.12): ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯು ಶಿಕ್ಷಣದ ಮೂಲ ಗುರಿಯಾಗಿದೆ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವಂತರಾಗಿ, ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಪ್ರೇಮಾ ಹೇಳಿದರು. ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಕುಮದ್ವತಿ ಉತ್ಸವ-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವು ಬದುಕಿನಲ್ಲಿ ಹಾಗೂ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣದ ಮಹತ್ವವನ್ನು ಅರಿತು ವಿದ್ಯಾರ್ಥಿಗಳು ಮುನ್ನಡೆಯಬೇಕು. ಜ್ಞಾನ ಮತ್ತು ಕೌಶಲ್ಯಗಳ ಸಹಾಯದಿಂದ ಬದುಕನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದೃಷ್ಟಿಕೋನಗಳನ್ನು ವಿಸ್ತರಿಸಲು ಮತ್ತು ಸುತ್ತಲಿನ ಪ್ರಪಂಚವನ್ನು ನೋಡಲು ಸಾಧ್ಯವಾಗುವಂತ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗಬೇಕು. ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣವೇ ಪ್ರಧಾನ.ನಾವು ಕಲಿಯುವ ಶಿಕ್ಷಣದಿಂದ ಬೌದ್ಧಿಕ ವಿಕಾಸವಾಗಿ ಸಂಸ್ಕೃತಿ ವೃದ್ಧಿಯಾಗುತ್ತದೆ. ಸಂಸ್ಕಾರ ಮತ್ತು ಸಂಸ್ಕೃತಿ ಇಲ್ಲದ ಶಿಕ್ಷಣ ನಿರರ್ಥಕ ಎಂದು ಹೇಳಿದರು.
ಎಲ್ಲ ಸರ್ಕಾರಿ ಆಸ್ಪತ್ರೆ ಒಂದೇ ಆಡಳಿತ ವ್ಯವಸ್ಥೆಗೆ?: ಸಿಎಂ ತೀರ್ಮಾನ ಬಾಕಿ
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ, ಸಂಸದ ರಾಘವೇಂದ್ರ ಮಾತನಾಡಿ, ಶಿಕ್ಷಣ, ಸಂಸ್ಕಾರ ಹಾಗೂ ಕಲೆ ಯಶಸ್ವಿ ಬದುಕಿನ ಮೂಲ ಮಂತ್ರಗಳು. ಶಿಕ್ಷಣ ಎಂದಿಗೂ ವ್ಯಕ್ತಿಯನ್ನು ಎಡವಲು ಬಿಡುವುದಿಲ್ಲ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಲೆಯಲ್ಲೂ ತೊಡಗಿಸಿಕೊಂಡು ಸಂಸ್ಕಾರವಂತರಾಗಬೇಕು. ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿಯನ್ನು ಸಾಧಿಸಬಹುದು. ಜೀವನ ಪ್ರೀತಿಯಿಂದ ಅಂತರಂಗ ಗಟ್ಟಿಗೊಳ್ಳುತ್ತದೆ. ವಿದ್ಯಾರ್ಥಿಗಳು ಜೀವನ ಪ್ರೀತಿಯನ್ನು ಮೈಗೂಡಿಸಿಕೊಂಡು ಸಮಾಜ, ದೇಶದ ಆಸ್ತಿಯಾಗಬೇಕು ಎಂದರು.
ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಯಶಸ್ಸು ಸಾಧ್ಯ. ಯುವಕರು ದೇಶದ ವರ್ತಮಾನ ಹಾಗೂ ಭವಿಷ್ಯವನ್ನು ನಿರ್ಧರಿಸುವವರು. ವಿಶ್ವದಲ್ಲಿ ನಡೆಯುವಂಥ ಮಹತ್ವಪೂರ್ಣ ಬದಲಾವಣೆಗಳು ಯುವಜನರ ತ್ಯಾಗ ಮತ್ತು ಶ್ರಮದ ಫಲವಾಗಿದೆ. ಇದನ್ನು ಅರಿತು ದೇಶ ಕಟ್ಟುವ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.
ಪೋಷಕರು ಮಕ್ಕಳ ಶಿಕ್ಷಣದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು, ಮಕ್ಕಳ ಸಹಜ ಪ್ರತಿಭೆಯ ವಿಕಾಸಕ್ಕೆ ಸಹಕಾರಿಯಾದ ಪ್ರೋತ್ಸಾಹವನ್ನು ನೀಡಬೇಕು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಶಕ್ತಿಯುತವಾದ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವತ್ತ ಹೆಜ್ಜೆ ಇಡುತ್ತಿದೆ. ವಿವಿಧ ತರಬೇತಿ, ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಿದೆ ಎಂದು ಹೇಳಿದರು.
ಒಗ್ಗಟ್ಟಿನಿಂದ ಶ್ರಮಿಸಿ ಜೆಡಿಎಸ್ ಅಧಿಕಾರಕ್ಕೆ ತನ್ನಿ: ಎಚ್.ಡಿ.ದೇವೇಗೌಡ
ಸಂಸ್ಥೆ ಅಧ್ಯಕ್ಷ ಎಂ.ಬಿ. ಶಿವಕುಮಾರ, ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ, ಝಾನ್ಸಿ ಕಿಯಾ ಶೋ ರೂಂ ಕಾರ್ಯನಿವಾಹಕ ನಿರ್ದೇಶಕ ಸುಭಾಶ್ ಬಿ.ಆರ್., ಸಂಸ್ಥೆಯ ಆಡಳಿತ ಸಲಹೆಗಾರ ಕುಬೇರಪ್ಪ, ವಿದ್ಯಾಶಂಕರ ಹಾಗೂ ಅಂಗ ಸಂಸ್ಥೆಯ ಎಲ್ಲ ಮುಖ್ಯಸ್ಥರು ಮತ್ತು ಪ್ರಾಚಾರ್ಯರು ಉಪಸ್ಥಿತರಿದ್ದರು. ಪ್ರಾಚಾರ್ಯ ದಯಾನಂದ್ ಸ್ವಾಗತಿಸಿ, ಡಾ.ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ನಳಿನ ಪಾಟೀಲ್ ನಿರೂಪಿಸಿ, ಡಾ.ವೀರೇಂದ್ರ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗಗಳಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.