ರಾಮನಗರ ನಗರಸಭೆ ಸದಸ್ಯ ಹಾಗೂ ರೌಡಿಶೀಟರ್ ಅಜ್ಮತ್ ಉಲ್ಲಾ ಖಾನ್ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದಾರೆ. ದಾಳಿಯಿಂದ ಪ್ರಾಣಾಪಾಯದಿಂದ ಪಾರಾದ ಅಜ್ಮತ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಮನೆ ಮುಂದಿದ್ದ ಕಾರನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ.

ರಾಮನಗರ (ಮಾ.27): ಸಿಲ್ಕ್ ಸಿಟಿ ರಾಮನಗರದಲ್ಲಿ ಇಂದು ಹಾಡಹಗಲೇ ಸಿನಿಮೀಯ ಮಾದರಿಯ ಭೀಕರ ಹಲ್ಲೆಯೊಂದು ನಡೆದಿದೆ. ರಾಮನಗರ ನಗರಸಭೆಯ ಸದಸ್ಯ ಹಾಗೂ ರೌಡಿಶೀಟರ್ ಅಜ್ಮತ್ ಉಲ್ಲಾ ಖಾನ್ (40) ಮೇಲೆ ನಾಲ್ವರು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ. ಅದೃಷ್ಟವಶಾತ್ ಅಜ್ಮತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೈಲ್ವೆ ಅಂಡರ್ ಪಾಸ್ ಬಳಿ ನಡೆದ ಘೋರ ಕೃತ್ಯ:

ನಗರದ ರೈಲ್ವೆ ಅಂಡರ್ ಪಾಸ್ ಬಳಿ ಅಜ್ಮತ್ ಉಲ್ಲಾ ಖಾನ್ ಅವರು ತಮ್ಮ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಠಾತ್ತನೆ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಲಾಂಗು, ಮಚ್ಚು ಸೇರಿದಂತೆ ಹರಿತವಾದ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಸಿನಿಮೀಯ ಸ್ಟೈಲ್‌ನಲ್ಲಿ ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಅಜ್ಮತ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಆದರೆ, ಸಮಯಪ್ರಜ್ಞೆ ಮೆರೆದ ಅಜ್ಮತ್ ಕ್ಷಣಾರ್ಧದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಓಡುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆ ಬಳಿ ನುಗ್ಗಿ ಕಾರು ಪುಡಿಪುಡಿ ಮಾಡಿದ ದುಷ್ಕರ್ಮಿಗಳು:

ಹಲ್ಲೆ ನಡೆದ ಬಳಿಕ ಅಜ್ಮತ್ ಅಲ್ಲಿಂದ ಎಸ್ಕೇಪ್ ಆದದ್ದನ್ನು ಕಂಡು ಕೆರಳಿದ ದಾಳಿಕೋರರು ಅಷ್ಟಕ್ಕೆ ಸುಮ್ಮನಾಗಲಿಲ್ಲ. ನೇರವಾಗಿ ಅಜ್ಮತ್ ಉಲ್ಲಾ ಖಾನ್ ಅವರ ಮನೆ ಬಳಿ ನುಗ್ಗಿದ ದುಷ್ಕರ್ಮಿಗಳು, ಮನೆಯ ಮುಂದೆ ನಿಲ್ಲಿಸಲಾಗಿದ್ದ ಬಿಳಿ ಬಣ್ಣದ i20 ಕಾರನ್ನು ಪುಡಿಪುಡಿ ಮಾಡಿದ್ದಾರೆ. ಕಾರಿನ ಗಾಜುಗಳನ್ನು ಹೊಡೆದು ಹಾಕಿದ ಕಿಡಿಗೇಡಿಗಳು ಸ್ಥಳದಲ್ಲಿ ಭಯದ ವಾತಾವರಣ ನಿರ್ಮಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಜಿಲ್ಲಾಸ್ಪತ್ರೆಗೆ ದಾಖಲು - ತನಿಖೆ ಚುರುಕು:

ದಾಳಿಯ ವೇಳೆ ಅಜ್ಮತ್ ಅವರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ರಾಮನಗರ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳ ಮತ್ತು ಅಜ್ಮತ್ ಅವರ ಮನೆ ಬಳಿ ಮಹಜರು ನಡೆಸಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಹಳೆ ದ್ವೇಷ ಅಥವಾ ರಾಜಕೀಯ ವೈಷಮ್ಯ ಈ ದಾಳಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ನಗರದಲ್ಲಿ ಬಿಗುವಿನ ವಾತಾವರಣ:

ನಗರಸಭೆ ಸದಸ್ಯನ ಮೇಲೆ ಹಾಡಹಗಲೇ ಅಟ್ಟಾಡಿಸಿ ಹಲ್ಲೆ ನಡೆಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ರಾಮನಗರದಂತಹ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ರೌಡಿಸಂ ಪ್ರಕರಣಗಳು ಮರುಕಳಿಸುತ್ತಿರುವುದು ಪೋಲಿಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸದ್ಯ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಶಾಂತಿ ಕಾಪಾಡಲು ಕ್ರಮ ವಹಿಸಲಾಗಿದೆ.