*   ಪ್ರಕರಣ ಸುಪ್ರೀಂಕೋರ್ಟಲ್ಲಿದೆ*   ಇದನ್ನು ಹೈಕೋರ್ಟಿಗೆ ತಿಳಿಸಿ ಸಮಯಾವಕಾಶ ಪಡೆಯಿರಿ*   ಬಿಬಿಎಂಪಿ ಚುನಾವಣೆ ವಿಳಂಬಕ್ಕೆ ಶಾಸಕ ಟೀಕೆ 

ಬೆಂಗಳೂರು(ಮಾ.27): ನಗರದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳಿಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಇತ್ಯರ್ಥ ಆಗುವವರೆಗೂ ಮಾಲೀಕರಿಗೆ ನೋಟಿಸ್‌ ನೀಡಬಾರದು. ಈ ಸಂಬಂಧ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಸಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ(Ramalinga Reddy) ಒತ್ತಾಯಿಸಿದ್ದಾರೆ.

ಕೆಪಿಸಿಸಿ(KPCC) ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ(Bengaluru) ಸುಮಾರು 20 ಲಕ್ಷಕ್ಕೂ ಅಧಿಕ ಆಸ್ತಿಗಳಿವೆ. ಹಳೆಯ ಕಾಯ್ದೆ ಪ್ರಕಾರ ಪ್ಲಾನ್‌ ತೆಗೆದುಕೊಂಡು ಕಟ್ಟಡ ನಿರ್ಮಿಸುವಾಗ ಶೇ.5ಕ್ಕಿಂತ ಹೆಚ್ಚು ಉಲ್ಲಂಘನೆಯಾಗಿದ್ದರೆ ಸಕ್ರಮ ಮಾಡಲು ಬರುವುದಿಲ್ಲ. ನಂತರ ಈ ಪ್ರಮಾಣ ಹೆಚ್ಚಳ ಮಾಡಲಾಗಿದೆ. ವಿವಾದ(Dispute) ಸದ್ಯ ಸುಪ್ರೀಂ ಕೋರ್ಟ್‌ನಲ್ಲಿದ್ದು, ಹೈಕೋರ್ಟ್‌ಗೆ ಸರ್ಕಾರ ಸಮಾಯಾವಕಾಶ ನೀಡುವಂತೆ ಕೋರಬೇಕು ಎಂದು ಸಲಹೆ ನೀಡಿದರು.

Karnataka Govt :ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಎಚ್ಚರಿಕೆ

ಈ ಹಿಂದೆ ಬಿಜೆಪಿ ಸರ್ಕಾರ(BJP Government) ಇದ್ದಾಗ ವಾಣಿಜ್ಯ ಕಟ್ಟಡದಲ್ಲಿ ಶೇ.15 ಹಾಗೂ ವಸತಿಯಲ್ಲಿ ಶೇ.20ರಷ್ಟು ಉಲ್ಲಂಘನೆಯಾಗಿದ್ದರೂ ಸಕ್ರಮ ಮಾಡಲು ಮುಂದಾಗಿತ್ತು. ಬಳಿಕ ನಮ್ಮ ಸರ್ಕಾರ ಬಂದ ಮೇಲೆ ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ಅಂಗೀಕಾರ ಪಡೆದು ವಸತಿಯಲ್ಲಿ ಶೇ.50 ಹಾಗೂ ವಾಣಿಜ್ಯ ಆಸ್ತಿಯಲ್ಲಿ ಶೇ.25ರಷ್ಟುಮಾಡಲು ತೀರ್ಮಾನಿಸಿ 2014 ಮೇ 25ರಂದು ಮಾರ್ಗಸೂಚಿ ಹೊರಡಿಸಲಾಯಿತು ಎಂದು ವಿವರಿಸಿದರು.

23-3-2015ರಿಂದ 22-3-2016ರವರೆಗೆ ಸಕ್ರಮ ಮಾಡಲು ಅರ್ಜಿ ಸ್ವೀಕರಿಸಬಹುದು ಎಂದು ಆದೇಶ ಮಾಡಲಾಗಿತ್ತು. ನಂತರ ಕೆಲ ಸಂಘ ಸಂಸ್ಥೆಗಳು ಹೈಕೋರ್ಟ್‌(High Court) ಮೆಟ್ಟಿಲೇರಿದವು. ಹೈಕೋರ್ಟ್‌ನಲ್ಲಿ ನಮ್ಮ ಪರ ಆಗಿತ್ತು. ಆದರೆ ಸಂಘ ಸಂಸ್ಥೆಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, 2017ರಿಂದ ವಿಚಾರಣೆ ಬಾಕಿ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಅವಕಾಶ ನೀಡಿ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹೈಕೋರ್ಟ್‌ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ನೋಟಿಸ್‌ ಜಾರಿ ಮಾಡಬೇಕಾಗುತ್ತದೆ. ಹೀಗಾಗಿ ನಿತ್ಯ ಸಾವಿರಾರು ಜನರಿಗೆ ನೋಟಿಸ್‌ ನೀಡಲಾಗುತ್ತಿದೆ. ಇದು ಕಾನೂನುಬದ್ಧವಿದ್ದರೂ ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೂ ನೋಟಿಸ್‌ ನೀಡುವುದನ್ನು ನಿಲ್ಲಿಸಲು ಅನುಮತಿ ಕೋರಬೇಕು ಎಂದು ಮನವಿ ಮಾಡಿದರು. ಮಾಜಿ ಮಹಾಪೌರರಾದ ಎಂ.ಕೆ.ಚಂದ್ರಶೇಖರ್‌, ಜೆ.ಹುಚ್ಚಪ್ಪ, ರಾಮಚಂದ್ರಪ್ಪ, ಸಂಪತ್‌ ರಾಜ್‌, ಜಿ.ಪದ್ಮಾವತಿ, ಗಂಗಾಂಬಿಕೆ, ಮುಖಂಡರಾದ ಜಿ.ಶೇಖರ್‌, ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.

ಬಿಬಿಎಂಪಿ ಚುನಾವಣೆ ವಿಳಂಬಕ್ಕೆ ಶಾಸಕ ಟೀಕೆ

ಈ ಹಿಂದೆ ಎಸ್‌.ಎಂ.ಕೃಷ್ಣ, ಸಿದ್ದರಾಮಯ್ಯ ಅವರು ಕಾಂಗ್ರೆಸ್‌(Congress) ಆಡಳಿತದಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಸಮಯಕ್ಕೆ ಸರಿಯಾಗಿ ಬಿಬಿಎಂಪಿಗೆ(BBMP) ಚುನಾವಣೆ ನಡೆಸಿದ್ದೆವು. ಆದರೆ ಬಿಜೆಪಿಯವರು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಟೀಕಿಸಿದರು. ವಾರ್ಡ್‌ ಪುನರ್‌ ವಿಂಗಡಣೆಗೆ ಹೊಸ ಕಾಯ್ದೆ ತರುತ್ತೇವೆ ಎಂದು ಹೇಳಿದಾಗ ನಾವು ಅದಕ್ಕೂ ಸಹಕಾರ ನೀಡಿದೆವು. ಆದರೆ ಚುನಾವಣೆ ಮಾಡಲು ಸಬೂಬು ಹೇಳುತ್ತಿದ್ದಾರೆ. ಇನ್ನಾದರೂ ಚುನಾವಣೆ ನಡೆಸಲಿ ಎಂದು ಒತ್ತಾಯಿಸಿದರು.

ಅಧಿಕಾರ ಕೊಡಿ ಬೆಂಗ್ಳೂರಿನ ಗುಂಡಿಗಳನ್ನ ನಾವೇ ಮುಚ್ತೇವೆ: ಕಾಂಗ್ರೆಸ್‌

ಬಿಜೆಪಿ ಶಾಸಕರ ಕ್ಷೇತ್ರಕ್ಕೆ 5 ಪಟ್ಟು ಹೆಚ್ಚು ಅನುದಾನ:

ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿರುವ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಮಾಡುತ್ತಿರುವ ತಾರತಮ್ಯವನ್ನು ಮುಖ್ಯಮಂತ್ರಿಯವರು ಕೂಡಲೇ ಸರಿಪಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆಗ್ರಹಿಸಿದ್ದರು. 

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಶಾಸಕರ 15 ಕ್ಷೇತ್ರಗಳಿಗೆ ಒಟ್ಟು 9888 ಕೋಟಿ ರುಪಾಯಿಗಳಷ್ಟು ಅನುದಾನ(Grants) ನೀಡಿದೆ. ಆದರೆ, ಕಾಂಗ್ರೆಸ್‌ ಶಾಸಕರ 12 ಕ್ಷೇತ್ರಗಳಿಗೆ 2,186.48 ಕೋಟಿ ರು. ನೀಡಿದೆ. ಜೆಡಿಎಸ್‌ ಶಾಸಕರು ಇರುವ ದಾಸರಹಳ್ಳಿಗೆ 288.5 ಕೋಟಿ ರು. ಕೊಡಲಾಗಿದೆ. ಆ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗಿಂತ 5 ಪಟ್ಟು ಹೆಚ್ಚಿನ ಅನುದಾನವನ್ನು ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಕೊಡಲಾಗಿದೆ ಎಂದು ಮಾಹಿತಿ ನೀಡಿದ್ದರು.