ರಾಸಲೀಲೆ ಪ್ರಕರಣದ ಸಂತ್ರಸ್ತೆ ಬಂದರೆ ಖಂಡಿತ ಸಹಾಯ ಮಾಡುವೆ: ಮುಲಾಲಿ
ಪ್ರಕರಣವನ್ನು ಹಿಂದಕ್ಕೆ ಪಡೆದಿರುವುದರ ಹಿಂದೆ ಷಡ್ಯಂತ್ರ್ಯ| ಕೇಸ್ ವಾಪಸ್ ಪಡೆದಿರುವುದು ನಿಜಕ್ಕೂ ದುರಂತ| ಇದು ಹನಿಟ್ರ್ಯಾಪ್ ಆಗಿದೆಯೋ ಎಂಬುದನ್ನು ಹೇಳಲಾಗದು| ನನ್ನಬಳಿ ಸಿಡಿ ಇವೆ ಎಂದು ನಾನು ಹೇಳಿಲ್ಲ: ರಾಜಶೇಖರ ಮುಲಾಲಿ|
ಹೊಸಪೇಟೆ(ಮಾ.12): ಭಾರೀ ಸಂಚಲನ ಮೂಡಿಸಿರುವ ಮಾಜಿ ಸಚಿವರೊಬ್ಬರ ರಾಸಲೀಲೆ ಪ್ರಕರಣದ ಸಂತ್ರಸ್ತೆ ನನ್ನ ಬಳಿ ಬಂದರೆ ಖಂಡಿತ ಸಹಾಯ ಮಾಡುವೆ. ಯಾವುದೇ ಪ್ರಕರಣವನ್ನು ನಾನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ಸಂತ್ರಸ್ತೆಗೆ ನಿಜಕ್ಕೂ ಅನ್ಯಾಯವಾಗಿದ್ದರೆ ನನ್ನ ಬಳಿ ಬಂದರೆ ಸಹಾಯ ಮಾಡುವೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಅಣ್ಣಾ ಫೌಂಡೇಶನ್ ಮುಖ್ಯಸ್ಥ ರಾಜಶೇಖರ ಮುಲಾಲಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣವನ್ನು ಹಿಂದಕ್ಕೆ ಪಡೆದಿರುವುದರ ಹಿಂದೆ ಷಡ್ಯಂತ್ರ್ಯವಿದೆ ಎಂಬ ಅನುಮಾನ ಮೂಡುತ್ತದೆ. ವಾಪಸ್ ಪಡೆದಿರುವುದು ನಿಜಕ್ಕೂ ದುರಂತ. ಇದು ಹನಿಟ್ರ್ಯಾಪ್ ಆಗಿದೆಯೋ ಎಂಬುದನ್ನು ಹೇಳಲಾಗದು ಎಂದರು.
ರಾಜ್ಯದಲ್ಲಿ ಈ ರೀತಿಯ ಪ್ರಕರಣಗಳು ಹಳ್ಳ ಹಿಡಿದಿವೆ. ಸೂಕ್ತ ತನಿಖೆಯಾಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ. ಯಾವ ಕೇಸ್‌ನಲ್ಲೂ ಶಿಕ್ಷೆಯಾಗಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರೂ ಒಂದೇ. ಉತ್ತರ ಕರ್ನಾಟಕದ ಶಾಸಕರು ಗೋವಾಕ್ಕೆ ಹೆಚ್ಚಾಗಿ ಹೋಗುತ್ತಾರೆ. ಹುಷಾರಾಗಿರಿ ಎಂದು ನಾನೇ ಹೇಳುತ್ತಿರುವೆ. ಕೆಲವರಿಗೆ ಇದೊಂದು ಕೆಟ್ಟಚಾಳಿಯಾಗಿದೆ. ಉತ್ತರ ಕರ್ನಾಟಕದ ನಮ್ಮ ಮಂದಿ ತಾಂತ್ರಿಕವಾಗಿ ಅಷ್ಟೊಂದು ಮುಂದುವರಿದಿಲ್ಲ. ಹೀಗಾಗಿ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಸಿಡಿ ಹಿಂದೆ ಇವರಿದ್ದಾರೆ! ಶ್ರೀರಾಮುಲುಗೆ ದೊಡ್ಡ ಅನುಮಾನ
ನನ್ನ ಬಳಿ ಸಿಡಿ ಇವೆ ಎಂದು ನಾನು ಹೇಳಿಲ್ಲ:
ನನ್ನ ಬಳಿ ಸಿಡಿಗಳಿವೆ ಎಂದು ನಾನು ಹೇಳಿಲ್ಲ. ಮಾಧ್ಯಮಗಳಲ್ಲಿ ಹಾಗೆ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರಲ್ಲದೆ, ಕೆಲ ಸಾಮಾಜಿಕ ಕಾರ್ಯಕರ್ತರು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಟಪಾಲ್ ಗಣೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಶೇಖರ ಮುಲಾಲಿ ಅವರು, ಅವರು ನನ್ನ ಹೆಸರು ಹೇಳಿಲ್ಲ. ನನ್ನ ಹೆಸರು ಹೇಳಿದರೆ ಸೂಕ್ತ ಉತ್ತರ ಕೊಡುತ್ತೇನೆ. ವಿನಾಕಾರಣ ಅವರ ಹೇಳಿಕೆಗೆ ನಾನೇಕೆ ಪ್ರತಿಕ್ರಿಯಿಸಲಿ ? ಎಂದು ಕೇಳಿದರು.
ನನ್ನ ಗುರುಗಳಾದ ಅಣ್ಣಾ ಹಜಾರೆಯವರ ವಿಚಾರಗಳು ಹಾಗೂ ಸಮಾಜಮುಖಿ ಬದ್ಧತೆಯನ್ನು ಇಟ್ಟುಕೊಂಡು ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನದೇ ಆದ ಸೈದ್ಧಾಂತಿಕ ನಿಲುವುಗಳಿವೆ ಎಂದು ಮುಲಾಲಿ ಹೇಳಿದರು.