Asianet Suvarna News Asianet Suvarna News

Tumakur : ವಿದ್ಯುತ್‌ ಕಡಿತ ವಿರೋಧಿಸಿ ಬೆಸ್ಕಾಂಗೆ ಮುತ್ತಿಗೆ

ವಿದ್ಯುತ್‌ ಕಡಿತ ವಿರೋಧಿಸಿ ರಾಜ್ಯ ರೈತ ಸಂಘ ತಾಲೂಕು ಶಾಖೆ ನೂರಾರು ಮಂದಿ ರೈತ ಮುಖಂಡರು ಬೆಸ್ಕಾಂಗೆ ಮುತ್ತಿಗೆ ಹಾಕಿ, ಉಗ್ರ ಪ್ರತಿಭಟನೆ ನಡೆಸಿದರು.

 Raitha sangha Protest Against power cut snr
Author
First Published Oct 11, 2023, 7:12 AM IST

  ಪಾವಗಡ :  ವಿದ್ಯುತ್‌ ಕಡಿತ ವಿರೋಧಿಸಿ ರಾಜ್ಯ ರೈತ ಸಂಘ ತಾಲೂಕು ಶಾಖೆ ನೂರಾರು ಮಂದಿ ರೈತ ಮುಖಂಡರು ಬೆಸ್ಕಾಂಗೆ ಮುತ್ತಿಗೆ ಹಾಕಿ, ಉಗ್ರ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ರೈತ ಸಂಘದ ಅಪಾರ ಸಂಖ್ಯೆಯ ಅನ್ನದಾತರು ಬಳ್ಳಾರಿ ರಸ್ತೆಯಲ್ಲಿ ಜಾಥಾ ತೆರಳಿ ವಿದ್ಯುತ್‌ ಕಡಿತದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೆನ್ನಗೊಂಡ ರಸ್ತೆ ಮೂಲಕ ತೆರಳಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘದ ತಾ. ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ದುರಸ್ತಿ ನೆಪದಲ್ಲಿ ಪ್ರತಿದಿನ ವಿದ್ಯುತ್‌ ಕಡಿತಗೊಳಿಸುವ ಪರಿಣಾಮ ವಿದ್ಯಾರ್ಥಿ ಹಾಗೂ ರೈತಾಪಿ ಮತ್ತು ಗೃಹಬಳಕೆಗೆ ತೀವ್ರ ಸಮಸ್ಯೆ ಎದುರಾಗಿದೆ. ಹಿಂದೆಂದೂ ಕಾಣದಂತಹ ವಿದ್ಯುತ್‌ ಸಮಸ್ಯೆ ಈ ಬಾರಿ ತಾಲೂಕಿನಲ್ಲಿ ಎದುರಾಗಿದೆ. ವಿದ್ಯುತ್‌ ಕಡಿತದ ಪರಿಣಾಮ ರೈತರ ಕೊಳವೆ ಬಾವಿ ಟ್ರಾನ್ಸ್‌ ಫಾರ್ಮರ್‌ ಸುಟ್ಟುಹೋಗುತ್ತಿದ್ದು, ಟ್ರಾನ್ಸ್‌ ಫಾರ್ಮರ್‌ ದುರಸ್ತಿಗೆ ಹಣ ವಸೂಲಾತಿ ಹಾಗೂ ದುರಸ್ತಿ ವಿಳಂಬ ಪರಿಣಾಮ ನೀರಾವರಿ ಬೆಳೆಗಳು ನಷ್ಟಕ್ಕೀಡಾಗುತ್ತಿವೆ ಎಂದು ಆರೋಪಿಸಿದರು.

ಮಳೆ ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದು ಶೋಚನೀಯ ಸ್ಥಿತಿ ಅನುಭವಿಸುತ್ತಿದ್ದಾರೆ. ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋದ ಪರಿಣಾಮ, ಬೆಳೆ ಸಿಗದೆ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಜೀವನ ನಿರ್ವಹಣೆಗೆ, ರೈತರು ಹಾಗೂ ಕೃಷಿ ಕಾರ್ಮಿಕರು ನಗರ ಪ್ರದೇಶಗಳಗೆ ಗುಳೆ ಹೋಗುತ್ತಿದ್ದಾರೆ. ಅಲ್ಪಸ್ವಲ್ಪ ಮಳೆಯಿಂದ ಬೆಳೆ ಸಂರಕ್ಷಣೆ ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಸಾಲಿನ ಮಳೆಯ ಕೊರತೆಯಿಂದ ಫಸಲಿಗೆ ಬಂದ ಬೆಳೆ ಸಂರ್ಪೂಣ ಒಣಗಿ ಹೋಗಿದೆ. ಬೆಳೆಗಾಗಿ ಸಾಲದ ಸುಳಿಗೆ ಸಿಕ್ಕಿ ರೈತ ನರಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.

ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಪಾವಗಡ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದೆ. ದುರಂತವೆಂದರೆ ಇದುವರೆಗೂ ಕೇಂದ್ರ ಅಧ್ಯಯನ ತಂಡ ಪಾವಗಡಕ್ಕೆ ಭೇಟಿ ನೀಡಿಲ್ಲ. ಬರದ ಬಗ್ಗೆ ವರದಿ ಪಡೆದಿಲ್ಲ. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬೆಳೆ ಸಮೀಕ್ಷೆ ನಡೆಸಬೇಕೆಂದು ಕೇಂದ್ರ ಸರ್ಕಾರ ಆದೇಶ ಜಾರಿ ಮಾಡಿದೆ. ಕೇಂದ್ರ ಬರ ತಂಡ ತಾಲೂಕಿಗೆ ಭೇಟಿ ಕೊಟ್ಟಿಲ್ಲ. ಇದು ಅನ್ಯಾಯ. ಇದರಿಂದ ಇಲ್ಲಿನ ರೈತರಿಗೆ ಅಘಾತ ತಂದೊಡ್ಡಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಭೇಟಿ ನೀಡಬೇಕು. ಬೆಳೆ ಸಮೀಕ್ಷೆ ನಡೆಸಿ, ಪ್ರತಿ ಹೆಕ್ಟೇರಿಗೆ ತಲಾ 20ರಿಂದ 25ರು. ಬೆಳೆ ನಷ್ಟ ಘೋಷಿಸಬೇಕು. ಬೆಳೆ ವಿಮೆ ಸೌಲಭ್ಯ ಸೇರಿದಂತೆ ವಿಶ್ವ ಗಮನ ಸೆಳೆದ ಸೌರಶಕ್ತಿ ವಿದ್ಯುತ್‌ ಉತ್ಪಾದನೆಯ ಘಟಕಗಳು ಇಲ್ಲಿ ಕಾರ್ಯರಂಭದಲ್ಲಿದ್ದರೂ ವಿದ್ಯುತ್‌ ಸಮಸ್ಯೆ ಸೃಷ್ಟಿಯಾಗಿದೆ. ಸಮಸ್ಯೆ ಪರಿಶೀಲನೆ ನಡೆಸಿ ವಿದ್ಯುತ್‌ ಸಮಸ್ಯೆ ನಿವಾರಿಸಬೇಕು. ಬೆಳೆ ರಕ್ಷಣೆಗೆ ಸಾಧ್ಯವಾದಷ್ಟು ರೈತರ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಮಾಡಬೇಕು. ಕುಡಿವ ನೀರಿನ ಸಮಸ್ಯೆ ಗೋಶಾಲೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯುತ್‌ ಸರಬರಾಜ್‌ ಮಾಡುವಂತೆ ಆಗ್ರಹಿಸಿದರು. ಪದೇ ಪದೇ ವಿದ್ಯುತ್‌ ಸಮಸ್ಯೆ ಎದುರಾದರೆ, ರೈತ ಸಂಘ, ಜನಪರ ಸಂಘಟನೆಗಳೊಂದಿಗೆ ಬೆಂಗಳೂರು ಕೇಂದ್ರ ಕಚೇರಿಗೆ ನಿಯೋಗ ತೆರಳಿ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ನಂತರ ಗ್ರೆಡ್‌-2 ಶಿರಸ್ತೇದಾರ್‌ ನರಸಿಂಹಮೂರ್ತಿಗೆ ಮನವಿ ಪತ್ರ ಸಲ್ಲಿಸಿದರು.

ಇದೇ ವೇಳೆ ರೈತ ಸಂಘ ತಾಲೂಕು ಶಾಖೆಯ ಕೃಷ್ಣರಾವ್‌, ಸಿದ್ಧಾಪುರ ರಾಮಮೂರ್ತಿ ಸ್ವಾಮೀಜಿ, ಸದಾಶಿವಪ್ಪ, ನಡಪನ್ನ ವೆಂಕಟರಮಣಪ್ಪ, ಚಿತ್ತಪ್ಪ, ಸಿದ್ಧಪ್ಪ, ರೆಹಮಾನ್‌ ಖಾನ್‌, ಸಿದ್ಧಣ್ಣ, ರಂಗಪ್ಪ, ನಾಗರಾಜಪ್ಪ, ಅಂಜಿನಪ್ಪ, ಚಂದ್ರಪ್ಪ, ರಾಮಾಂಜಿನಪ್ಪ, ನಾಗರಾಜಪ್ಪ, ಹನುಮಂತರಾಯಪ್ಪ, ಗೌಡ ಹಾಗೂ ಮಹಿಳಾ ಘಟಕ ಮತ್ತು ನೂರಾರು ಮಂದಿ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios