ದಕ್ಷಿಣ ಕನ್ನಡದ ವಿಟ್ಲದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಉಡುಪಿಯಲ್ಲಿ ಯುವಕನೊಬ್ಬ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹೈಡ್ರಾಮಾ ಸೃಷ್ಟಿಸಿದರೆ, ಬಂಟ್ವಾಳದಲ್ಲಿ ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ: ವಿಟ್ಲ ಠಾಣೆ ವ್ಯಾಪ್ತಿಯ ಕೊಡಂಗಾಯಿ ಕೆರೆಯಲ್ಲಿ ವಿದ್ಯಾರ್ಥಿನಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಕೊಡಂಗಾಯಿ ಬಳಿಯ ಮೂರುಕಜೆ ಎಂಬಲ್ಲಿನ ಮೈತ್ರೆಯಿ ಗುರುಕುಲ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿ, ಬೆಂಗಳೂರು ಮೂಲದ ವೈಗ ಲಕ್ಷ್ಮಿ ಆತ್ಮ*ಹತ್ಯೆ ಮಾಡಿಕೊಂಡವರು. ಅವರು ಫೆ. 22ರಿಂದ ನಾಪತ್ತೆಯಾಗಿದ್ದರು. ಅವರಿಗಾಗಿ ವಿವಿಧೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಸೋಮವಾರ ಪಕ್ಕದಲ್ಲಿರುವ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿದರು. ಕೆರೆಯಲ್ಲಿದ್ದ ವಿದ್ಯಾರ್ಥಿನಿಯ ಮೃತದೇಹವನ್ನು ಫ್ರೆಂಡ್ಸ್ ವಿಟ್ಲದ ಮುರಳೀಧರ ಅವರ ತಂಡ ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಯುವಕ !

ಗದಗ ಜಿಲ್ಲೆಯಿಂದ ಉಡುಪಿಗೆ ಬಂದಿದ್ದ ಯುವಕನೊಬ್ಬ ಇಲ್ಲಿನ ಕಲ್ಸಂಕ ವೃತ್ತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹೈಡ್ರಾಮ ನಡೆಸಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಮಾಡಿದ ಘಟನೆ ಸೋಮವಾರ ನಡೆದಿದೆ.

ಈ ವಿಕೃತ ಕೃತ್ಯ ನಡೆಸಿದ ಯುವಕ ಜೊತೆಯಲ್ಲಿದ್ದ ಪತ್ನಿಯೊಂದಿಗೆ ರಸ್ತೆಯಲ್ಲಿಯೇ ಜಗಳವಾಡುತ್ತಿದ್ದ, ನಂತರ ರಸ್ತೆ ಮಧ್ಯೆ ಹೋಗಿ ಅವಾಚ್ಯ ಬೈಯ್ಯುತ್ತಾ ತಾನು ಬಾಟಲಿಯಲ್ಲಿ ತಂದಿದ್ದ ಪೆಟ್ರೋಲನ್ನು ತೋರಿಸಿ ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಬೊಬ್ಬೆ ಹೊಡೆದ. ತಕ್ಷಣ ಸಂಚಾರಿ ಪೊಲೀಸರು ಆತನಿಂದ ಬಾಟಲಿಯನ್ನು ಕಿತ್ತುಕೊಂಡು ಅಲ್ಲಿಂದ ಓಡಿಸಿದರು.

ಪ್ಯಾಂಟ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ

ಸ್ವಲ್ಪ ಹೊತ್ತಿನ ನಂತರ ಮತ್ತೇ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದು ಮತ್ತೇ ಹೈಡ್ರಾಮ ಮಾಡಲಾರಂಭಿಸಿದ, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಡೆಯಲೆತ್ನಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಮೇಲೆಯೂ ಪೆಟ್ರೋಲ್ ಹಾಕುವುದಾಗಿ ಬೆದರಿಸಿದ.

ನಂತರ ತನ್ನು ಪ್ಯಾಂಟ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ, ಬೆಂಕಿ ಸುಡಲಾರಂಭಿಸಿದಾಗ ರಸ್ತೆ ಪಕ್ಕಕ್ಕೆ ಓಡಿ ಬಂದು ಬೆಂಕಿ ನಂದಿಸುವಂತೆ ಕೂಗಿಕೊಂಡ. ನಂತರ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಮನವೊಲಿಸಿ ಗದಗಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.

ಇದನ್ನೂ ಓದಿ: ಲೂಡೊ ಕಾಯಿ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು; ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕೋನ್ ಪತ್ತೆ

ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿ ಸವಾರ ಸಾವು

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಬ್ರಹ್ಮರಕೂಟ್ಲು ಎಂಬಲ್ಲಿ ನಡೆದಿದೆ. ತಾಲೂಕಿನ ನರಿಕೊಂಬು ಮರ್ದೊಳಿ ನಿವಾಸಿ ಸಂತೋಷ್ ಮೃತರು. ಅವರು ಬೆಳಗ್ಗೆ ಮನೆಯಿಂದ ಮಂಗಳೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬ್ರಹ್ಮರಕೂಟ್ಲು ಎಂಬಲ್ಲಿ ಟಯರ್ ಬ್ಲಾಸ್ಟ್ ಆಗಿದ್ದ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ.ಬಂಟ್ವಾಳ ಟ್ರಾಫಿಕ್ ಎಸ್ ಐ ಅದರ್ಶ್ ಅವರು ಭೇಟಿ ನೀಡಿದ್ದು,‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಎಂಜಿನಿಯರಿಂಗ್ ಕಾಲೇಜು ಕಟ್ಟಡದ 4ನೇ ಮಹಡಿಯ ಕಿಟಕಿಯಿಂದ ಧುಮುಕಿದ ಮು‍‍ಳ್ಳು ಹಂದಿ ಸಾವು