ನರಗುಂದ(ಜ.09): ಹುಬ್ಬಳ್ಳಿಯಲ್ಲಿ ವಿವಿಧ ರಾಜಕೀಯ ಪಕ್ಷದ ನಾಯಕರು ಸಭೆ ನಡೆಸಿ, ಮಹದಾಯಿ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಆದರೆ, ರಾಜಕಾರಣಿಗಳು ಮಹದಾಯಿ ಹೋರಾಟಗಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ರೈತ ಸೇನೆ ಕೋಶಾಧ್ಯಕ್ಷ ಎಸ್‌.ಬಿ. ಜೋಗಣ್ಣವರ ಆರೋಪಿಸಿದ್ದಾರೆ.

1637ನೇ ದಿನದ ನಿರಂತರ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಅವರು, ಈ ಭಾಗದ ರೈತರು 20 ವರ್ಷಗಳಿಂದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಈ ವರೆಗೂ ರಾಜಕಾರಣಿಗಳು ನಿರ್ಲಕ್ಷ್ಯ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿಯೇ ಯೋಜನೆ ಈ ವರೆಗೆ ಜಾರಿಯಾಗಿಲ್ಲ. ಐದು ವರ್ಷಗಳಿಂದ ವಿರೇಶ ಸೊಬರದಮಠ ನೇತೃತ್ವದಲ್ಲಿ ರೈತ ಸೇನೆ ಹೋರಾಟ ನಡೆಸುತ್ತಿದೆ. ಅದರ ಪರಿಣಾಮ ಈಗ ಯೋಜನೆ ಜಾರಿ ಹಂತಕ್ಕೆ ಬಂದಿದೆ. ಹೋರಾಟದ ಖ್ಯಾತಿ ರೈತರಿಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ರಾಜಕಾರಣಿಗಳು ಇಂತಹ ಸಭೆ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಚಿವ ಜಗದೀಶ ಶೆಟ್ಟರ್‌, ಶಾಸಕ ಬಸವರಾಜ ಹೊರಟ್ಟಿ, ಶಂಕರ ಪಾಟೀಲ್‌ ಮುನೇನಕೊಪ್ಪ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಇತರ ನಾಯಕರು ಕುತಂತ್ರ ನಡೆಸಿ, ಸಭೆಗೆ ರೈತರನ್ನು ಬಿಡದೆ, ಈ ಭಾಗದ ಮಹದಾಯಿ ಹೋರಾಟಗಾರರ ದಾರಿ ತಪ್ಪಿಸುವ ಪಿತೂರಿ ಮಾಡಿದ್ದಾರೆ. ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ಮಹದಾಯಿ ಹೋರಾಟಗಾರರು ಈ ಕುತಂತ್ರ ರಾಜಕಾರಣಿಗಳ ಮೋಸಕ್ಕೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.

ರೈತ ಸೇನೆ ಸದಸ್ಯ ಲಕ್ಷ್ಮಣ ಮನನೇಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮಲಿಂಗಪ್ಪ ಆಯಿಟ್ಟಿ, ಅರ್ಜುನ ಮಾನೆ, ಮಲ್ಲೇಶಪ್ಪ ಅಣ್ಣೆಗೇರಿ, ಎ.ಪಿ. ಪಾಟೀಲ, ಅಡಿಯಪ್ಪ ಕೋರಿ, ಜಗನ್ನಾಥ ಮುಧೋಳೆ, ಸುಭಾಸ ಗಿರಿಯಣ್ಣವರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಹನುಮಂತ ಸರನಾಯ್ಕರ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಬಸವ್ವ ಪೂಜಾರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪುರ, ಕೆ.ಎಚ್‌. ಮೊರಬದ, ನಾಗರತ್ನಾ ಸವಳಭಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ ಇದ್ದರು.