ತೊಗರಿ ಕಣಜ ಕಲಬುರಗಿಯಲ್ಲಿ ಪುನರ್ವಸು ಮಳೆ ಬಿರುಸು

ರೈತರ ಮೊರೆ ಆಲಿಸಿದ ವರುಣದೇವ, ಕಲಬುರಗಿ ಜಿಲ್ಲಾದ್ಯಂತ ಜಡಿಮಳೆಗೆ ಮೂಡಿದೆ ಜೀವಕಳೆ, ತೊಗರಿ ಬಿತ್ತನೆಗೆ ಭರದ ಸಿದ್ಧತೆ

Rain Started in Kalaburagi District grg

ಕಲಬುರಗಿ(ಜು.21): ಜಿಲ್ಲಾದ್ಯಂತ ಕಳೆದ 2 ದಿನದಿಂದ ಜಡಿಮಳೆ ಶುರುವಾಗಿದ್ದು ಅದು ಗುರುವಾರ ಕೂಡಾ ಮುಂದುವರಿದಿದೆ. ದಟ್ಟಮೋಡಕವಿದ ವಾತಾವರಣವಿದ್ದು ನಿರಂತರ ಜಿಟಿಜಿಟಿ ಮಳೆ ಸುರಿಯುತ್ತಿದೆ. ಇದರಿಂದಾಗಿ ನಗರ ಹಾಗೂ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಕಳೆದ 2 ದಿನದಲ್ಲೇ 35 ಮಿಮೀ ಮಳೆ ಸುರಿದಿದೆ. ನಗರದಲ್ಲಂತೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿರೋದರಿಂದ ರಸ್ತೆಗಳೆಲ್ಲವೂ ಜಲಾವೃತಗೊಂಡಿವೆ.

ಕಳೆದ ಒಂದೂವರೆ ತಿಂಗಳಿಂದ ಮಳೆ ಬಂದಿರಲಿಲ್ಲ. ಹೀಗಾಗಿ ಜನತೆ ಆತಂಕದಲ್ಲಿದ್ದರು. ಆದರೀಗ ಕಳೆದ 2 ದಿನದಿಂದ ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಕಂಡಿದೆ. ಜಾನುವಾರುಗಳಿಗೆ ಕುಡಿವ ನೀರು ಸವಲತ್ತು ಒದಗಿದಂತಾಗಿದೆ. ನಿರಂತರ ಮಳೆಗೆ ಹಳ್ಳಕಳ್ಳಲು ತುಂಬಿ ತುಳುಕುತ್ತಿವೆ.

ಕಲಬುರಗಿ: ಸಾಧಾರಣ ಮಳೆ, ಭೀಮಾ ನದಿಗೆ ಹರಿವು ಹೆಚ್ಚಳ

ತೊಗರಿ ಬಿತ್ತನೆಗೆ ರೈತರ ಸಿದ್ಧತೆ:

ಮಳೆ ಕೊರತೆ ಕಾಡಿದ್ದರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಬಿತ್ತನೆಯೇ ಮುಂದುವರಿದಿರಲಿಲ್ಲ. ಆದರೀಗ ಬಿತ್ತನೆಗೆ ರೈತರು ಬೀಜ, ರಸಗೊಬ್ಬರದ ಜೊತೆಗೇ ಸಿದ್ಧರಾಗಿದ್ದಾರೆ. ಆದಾಗ್ಯೂ ಶೇ.30ರಷ್ಟುರೈತರು ಅಲ್ಪ ಮಳೆಯಲ್ಲಿಯೇ ಬಿತ್ತನೆ ಮಾಡಿದ್ದರು. ಅನೇಕ ರೈತರ ಹೊಲಗದ್ದೆಗಳಲ್ಲಿ ಬೀಜ ಮೊಳಕೆಯೊಡೆಯದೆ ತೊಂದರೆ ಆಗಿದೆ. ಇದೀಗ ರೈತರು ಮಳೆ ಯಾವಾಗ ನಿಲ್ಲುವುದೋ, ಅದ್ಯಾವಾಗ ಹೊಲಗದ್ದೆಗಳಲ್ಲಿ ಬಿತ್ತೋಣವೆಂದು ಕಾತರದಲ್ಲಿದ್ದಾರೆ.
ಮುಂಗಾರು ಹಂಗಾಮಿನ ಹೆಸರು, ಉದ್ದು ಬೆಳೆಗಳು ಬಿತ್ತನೆಯಾಗೋದಿಲ್ಲವಾದರೂ ತೊಗರಿ, ಅಲಸಂದಿಯಂತಹ ಬೆಳೆಗಳನ್ನು ಬಿತ್ತಲೂ ಇನ್ನೂ ಅವಕಾಶವಿರೋದರಿಂದ ರೈತರು ತೊಗರಿಗೆ ಮೊರೆ ಹೋಗುವ ಸಾಧ್ಯತೆಗಳು ಈ ಬಾರಿ ಹೆಚ್ಚಾಗಿವೆ.

ತೊಗರಿ ಬಿತ್ತನೆ ಪ್ರದೇಶ ಹೆಚ್ಚಳ ಸಾಧ್ಯತೆ:

ತೊಗರಿ ಬಿತ್ತನೆಗೆ ಇನ್ನೂ ತಿಂಗಳುಗಳ ಕಾಲಾವಕಾಶವಿದೆ. ಹೀಗಾಗಿ ಜಿಲ್ಲೆಯಲ್ಲಿ ಪುನರ್ವಸು ಮಳೆ ಚೆನ್ನಾಗಿ ಸುರಿಯುತ್ತಿರೋದರಿಂದ ರೈತರು ತೊಗರಿಗೆ ಈ ಬಾರಿ ಹೆಚ್ಚಿಗೆ ಮೊರೆ ಹೋಗುವ ಲಕ್ಷಣಗಳಿವೆ. ಕಳೆದ ಬಾರಿ ತೊಗರಿ ನೆಟೆ ರೋಗದಿಂದ ಹಾನಿಗೊಳಗಾಗಿತ್ತು. ಇದರಿಂದ ತೊಗರಿ ರೈತರು ಹಾನಿಗೊಳಗಾಗಿದ್ದರು. ಈ ಬಾರಿ ತೊಗರಿಬೇಡ, ಅಲಸಂದಿ ಬಿತ್ತೋಣವೆಂದು ಸಿದ್ಧವಾಗಿದ್ದರೂ ಮುಂಗಾರು ಕೈಕೊಟ್ಟು ಕಂಗಾಲಾಗಿದ್ದರು. ಆದರೀಗ ಪುನರ್ವಸು ಮಲೆ ತೊಗರಿ ಕಣಜದ ರೈತರ ಮೊರೆ ಆಲಿಸಿದ್ದರಿಂದ ರೈತರು ಮತ್ತೆ ತೊಗರಿಯನ್ನೇ ಬಿತ್ತುವ ಧಾವಂತದಲ್ಲಿ ಸಿದ್ಧರಾಗಿ ಕುಳಿತಿದ್ದಾರೆ.

ಜಿಲ್ಲಾದ್ಯಂತ ಈ ಬಾರಿ 8.87 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು ಇದುವರೆಗೂ 4.75 ಲಕ್ಷ ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಇಲಾಖೆಯ ಯೋಜನೆ ಪ್ರಕಾರ ಇನ್ನೂ 4 ಲಕ್ಷ ಹೆಕ್ಟೇರ್‌ ಬಿತ್ತನೆ ಆಗಿರಲಿಲ್ಲ. ಹಿಂದೆ ನಾಲ್ಕೂವರೆ ಲಕ್ಷ ಹೆಕ್ಟೇರ್‌ ತೊಗರಿ ಬಿತ್ತನೆಯಾಗಿತ್ತಾದರೂ ನೆಟೆ ರೋಗದಿಂದ ಶೇ.60ರಷ್ಟುತೊಗರಿ ಹಾಳಾಗಿ ರೈತರಿಗೆ ಚಿಂತೆಯಲ್ಲಿ ಮುಳುಗಿಸಿತ್ತು. ಈ ಬಾರಿ 5.83 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಈ ಬಾರಿ ಈ ಬಿತ್ತನೆ ಗುರಿ 6 ಲಕ್ಷ ಮೀರುವ ಅಂದಾಜಿದೆ.

ಮರಳು ಮಾಫಿಯಾದಿಂದ ಪೇದೆ ಹತ್ಯೆ: ವಿಧಾನ ಪರಿಷತ್‌ನಲ್ಲಿ ಬಿಜೆಪಿ ಧರಣಿ

ಜಿಲ್ಲೆಯಲ್ಲಿ ಈ ಬಾರಿ 41 ಸಾವಿರ ಹೆಕ್ಟೇರ್‌ ಹೆಸರು ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತಾದರೂ ಇದುವರೆಗೂ ಬಿತ್ತನೆಯಾಗಿರೋದು ಕೇವಲ ಶೇ.30 ಸಾವಿರ ಹೆಕ್ಟೇರ್‌ ಮಾತ್ರ. ಇದಲ್ಲದೆ ಉದ್ದಿನ ಬಿತ್ತನೆಯೂ ಕುಸಿದಿದೆ. ಈ ಪ್ರದೇಶವೆಲ್ಲವೂ ಬರೋ ದಿನಗಳಲ್ಲಿ ತೊಗರಿ ವ್ಯಾಪಿಸಲಿದೆ. ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್‌ ಉದ್ದು ಬಿತ್ತನೆ ಗುರಿ ಇತ್ತಾದರೂ ವಾಸ್ತವದಲ್ಲಿ ಬಿತ್ತನೆಯಾಗಿರೋದು ಕೇವಲ 15 ಸಾವಿರ ಹೆಕ್ಟೇರ್‌. ಹೀಗೆ ಹೆಸರು, ಹಾಗೂ ಉದ್ದಿನ ಉಳಿದ ಪ್ರದೇಶವೆಲ್ಲವೂ ತೊಗರಿ ಬಿತ್ತನೆ ನಡೆಯಲಿದೆ.

ಮುಲ್ಲಾಮಾರಿಗೆ ಭಾರಿ ಪ್ರಮಾಣದಲ್ಲಿ ನೀರು

ಚಿಂಚೋಳಿ ತಾಲೂಕಿನಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಮುಲ್ಲಾಮಾರಿ ನದಿಗೆ 740 ಕ್ಯುಸೆಕ್‌ ನೀರು ಹರಿದು ಬಿಡಲಾಗಿದೆ. ಇದರಿಂದಾಗಿ ಮುಲ್ಲಾಮಾರಿ ನದಿ ತುಂಬಿ ಹರಿಯುತ್ತಿದೆ. ಕುಂಚಾವರಂ ವನ್ಯಜೀವಿ ಧಾಮ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಲಚಮಾಸಾಗರ ಗ್ರಾಮದ ಮಧ್ಯೆ ನಾಲಾ ತುಂಬಿ ಹರಿಯುತ್ತಿದೆ. ಬುಧವಾರ ಹಗಲು ರಾತ್ರಿಎನ್ನದೆ ಮಳೆ ಬೀಳುತ್ತಿದೆ. ಇದು ಗುರುವಾರವೂ ಮುಂದುವರಿದಿದೆ. ಹೀಗಾಗಿ ಚಿಂಚೋಳಿ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

Latest Videos
Follow Us:
Download App:
  • android
  • ios