Mysuru: ಕೆಆರ್ ನಗರದಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ, ಎಚ್ಡಿಕೆ ಮನವಿಗೆ ರೈಲ್ವೆ ಸಚಿವ ಅಸ್ತು!
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮೈಸೂರಿನ ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿದ ಸಚಿವರು, ಈ ಯೋಜನೆಯಿಂದ ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಹೇಳಿದ್ದಾರೆ.
ನವದೆಹಲಿ (ಜ.7): ಮೈಸೂರಿನ ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಕೇಂದ್ರ (RPF) ಆರಂಭಿಸುವುದಾಗಿ ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ. ನವದೆಹಲಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರ ಮನವಿಗೆ ತತ್ ಕ್ಷಣವೇ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು, ಇದು ಅತ್ಯಂತ ಮಹತ್ವದ ಪ್ರಸ್ತಾವನೆ. ಈ ಬಗ್ಗೆ ಖುದ್ದು ತಾವೇ ಗಮನ ಹರಿಸುವುದಾಗಿ ತಿಳಿಸಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಶಾಲೆ ತೆರೆಯುವಂತೆ ರೇಲ್ವೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದ ಎಚ್ಡಿ ಕುಮಾರಸ್ವಾಮಿ, ರೈಲ್ವೆ ಸುರಕ್ಷತೆಗೆ ಮೈಸೂರು ಭಾಗದಲ್ಲಿ ಹೆಚ್ಚು ಆದ್ಯತೆ ಕೊಡಬೇಕಿದೆ ಹಾಗೂ ಈ ಭಾಗದಲ್ಲಿ ಪ್ರಯಾಣಿಕರ ದಟ್ಟಣೆಯು ಹೆಚ್ಚಾಗಿದೆ ಎಂದು ತಿಳಿಸಿದ್ದರು. ಈ ಬಗ್ಗೆ ತಕ್ಷಣವೇ ಗಮನ ಹರಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಕೆ.ಆರ್.ನಗರದಲ್ಲಿದ್ದ ಹಳೆಯ ರೈಲು ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಹಳೆಯ ನಿಲ್ದಾಣದ ಜಾಗ ಹಾಗೆಯೇ ಖಾಲಿ ಉಳಿದಿದ್ದು, ಭೂಸ್ವಾಧೀನದ ಸಮಸ್ಯೆ ಇಲ್ಲ ಎಂದು ಅಶ್ವಿನಿ ವೈಷ್ಣವ್ ಅವರಿಗೆ ಸಚಿವರು ಮನವರಿಕೆ ಮಾಡಿಕೊಟ್ಟರು.
ರೈಲ್ವೆ ರಕ್ಷಣಾ ಪಡೆಯ ತರಬೇತಿ ಶಾಲೆ ಬಂದರೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಸ್ಥಳೀಯ ಯುವಕರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ದುಡಿಮೆಗೆ ಅವಕಾಶ ಲಭ್ಯವಾಗುತ್ತದೆ. ಮೈಸೂರು ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದರು. ಇದಲ್ಲದೆ, ರಾಜ್ಯದಲ್ಲಿ ಬಾಕಿ ಇರುವ ವಿವಿಧ ರೇಲ್ವೆ ಯೋಜನೆಗಳನ್ನು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸುವ ಬಗ್ಗೆ ಕುಮಾರಸ್ವಾಮಿ ಅವರು ರೇಲ್ವೆ ಸಚಿವರ ಜತೆ ಚರ್ಚಿಸಿದರು.
ರಾಮನಗರ - ಚನ್ನಪಟ್ಟಣ ನಡುವೆ ರೈಲ್ವೆ ಲೆವೆಲ್ ಕ್ರಾಸಿಂಗ್ -44/100-200 ಬಳಿ ರೈಲ್ವೆ ಮೇಲು ಸೇತುವೆ (ಫ್ಲೈ ಓವರ್) ನಿರ್ಮಾಣದ ಬಗ್ಗೆಯೂ ಕುಮಾರಸ್ವಾಮಿ ಅವರು ಸಲ್ಲಿಸಿದ ಮನವಿಗೆ ರೇಲ್ವೆ ಸಚಿವರು ಒಪ್ಪಿಗೆ ನೀಡಿದರು. ಈ ಬಗ್ಗೆಯೂ ಕೂಡಲೇ ಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದರು.
ಬೆಂಗಳೂರು - ಮಂಗಳೂರು ನಡುವಿನ ರೈಲ್ವೆ ಮಾರ್ಗದಲ್ಲಿ ಪ್ರಮುಖದ್ದಾಗಿರುವ ಸಕಲೇಶಪುರ ರೇಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮನವಿಗೂ ಸ್ಪಂದಿಸಿದ ಸಚಿವರು, ಈ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಅತ್ಯಾಧುನಿಕ ರೇಲ್ವೆ ನಿಲ್ದಾಣ ನಿರ್ಮಾಣ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ.
60 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದೇ ಕಾಂಗ್ರೆಸ್ ನಾಯಕ: ಕುಮಾರಸ್ವಾಮಿ
ತರಬೇತಿ ಕೇಂದ್ರಕ್ಕೆ ಕೇಂದ್ರ ಸರ್ಕಾರ ₹150ರಿಂದ 200 ಕೋಟಿ ಹೂಡಿಕೆ ಮಾಡಲಿದೆ. ಪ್ರತೀ ವರ್ಷ 600 ಮಂದಿಗೆ ತರಬೇತಿ ದೊರೆಯಲಿದೆ. ಮೈಸೂರು ಅದರಲ್ಲಿಯೂ ಕೆ ಆರ್ ನಗರ ತಾಲೂಕು ಅಭಿವೃದ್ಧಿಗೆ ದೊಡ್ಡ ಕೊಡುಗೆ ಸಿಕ್ಕಿದಂತೆ ಆಗುತ್ತದೆ. ಸ್ಥಳೀಯರಿಗೆ ಹೆಚ್ಚೆಚ್ಚು ಉದ್ಯೋಗ ಲಭ್ಯವಾಗಲಿದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ತಿಳಿಸಿದ್ದಾರೆ.
ಚಲುವರಾಯಸ್ವಾಮಿಗೆ ಅಧಿಕಾರ, ಹಣದ ಮದ ಬಡವರ ಕಷ್ಟ, ವಾಸ್ತವಾಂಶ ಅರ್ಥವಾಗಲ್ಲ: ಎಚ್ಡಿಕೆ
ರೈಲ್ವೆ ಸಚಿವರಿಗೆ ಹೆಚ್ ಡಿ ಮಾಡಿದ ಮನವಿಗಳು:
- ಚನ್ನಪಟ್ಟಣ - ಬೆಂಗಳೂರು - ಮೈಸೂರು ವಿಭಾಗದಲ್ಲಿ ಪ್ರಮುಖವಾದ ಎಲ್ಲಾ ರೈಲುಗಳ ನಿಲುಗಡೆ.
- ಹಾಸನ, ಮಂಗಳೂರು ಒಳಗೊಂಡ ಮುಂಬೈ - ಬೆಂಗಳೂರು - ಮುಂಬೈ ಮಾರ್ಗದಲ್ಲಿ ಹೊಸ ರೈಲಿಗೆ ಮಂಜೂರು.
- ಮದ್ದೂರು ಮತ್ತು ಮಂಡ್ಯದಲ್ಲಿ ಬೆಂಗಳೂರು - ಮಂಗಳೂರು - ಮುರುಡೇಶ್ವರ ನಡುವೆ ಸಂಚರಿಸುವ 16585 ರೈಲಿನ ನಿಲುಗಡೆ.
- ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್ ಗೇಜ್ ರೈಲು ಮಾರ್ಗಗಳ ಮಂಜೂರಾತಿ.
- ಹೆಜ್ಜಾಲ- ಕನಕಪುರ - ಮಳವಳ್ಳಿ - ಕೊಳ್ಳೇಗಾಲ - ಯಳಂದೂರು - ಚಾಮರಾಜನಗರ ರೈಲು ಮಾರ್ಗಕ್ಕೆ ಶೀಘ್ರ ಅನುಮತಿ.