Asianet Suvarna News Asianet Suvarna News

ದಶಕದ ಕನಸು : ದಾವಣಗೆರೆ ನೇರ ರೈಲ್ವೆ ಮಾರ್ಗಕ್ಕೆ ಒತ್ತಾಯ

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿಯನ್ನು ಜರೂರು ಕೈಗೊಳ್ಳಬೇಕು. ನೇರ ರೈಲ್ವೆ ಮಾರ್ಗವು ಮಧ್ಯ ಕರ್ನಾಟಕವಷ್ಟೇ ಅಲ್ಲ, ಉತ್ತರ ಕರ್ನಾಟಕದ ಜನರ ಬಹು ವರ್ಷದ ಬೇಡಿಕೆಯೂ ಆಗಿದೆಯೆಂದು ರೈಲ್ವೆ ಪ್ರಯಾಣಿಕರ ಸಂಘ ಆಗ್ರಹಿಸಿದೆ. 

Railway Passengers Organization Urges For Tumkur Davangere Train
Author
Bengaluru, First Published Jan 21, 2020, 11:19 AM IST
  • Facebook
  • Twitter
  • Whatsapp

ದಾವಣಗೆರೆ [ಜ.21]:  ಮಂದಗತಿಯಲ್ಲಿ ಸಾಗುತ್ತಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗ ಕಾಮಗಾರಿಯನ್ನು ಇನ್ನಾದರೂ ತ್ವರಿತಗತಿಯಲ್ಲಿ ಆರಂಭಿಸುವಂತೆ ನೈರುತ್ಯ ರೈಲ್ವೆ ಪ್ರಯಾಣಿಕರ ಸಂಘ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ರನ್ನು ಒತ್ತಾಯಿಸಿದೆ.

ಉದ್ದೇಶಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿಯನ್ನು ಜರೂರು ಕೈಗೊಳ್ಳಬೇಕು. ನೇರ ರೈಲ್ವೆ ಮಾರ್ಗವು ಮಧ್ಯ ಕರ್ನಾಟಕವಷ್ಟೇ ಅಲ್ಲ, ಉತ್ತರ ಕರ್ನಾಟಕದ ಜನರ ಬಹು ವರ್ಷದ ಬೇಡಿಕೆಯೂ ಆಗಿದೆಯೆಂದು ಅಜಯ್‌ಸಿಂಗ್‌ಗೆ ಬರೆದ ಪತ್ರದಲ್ಲಿ ಸಂಘ ತಿಳಿಸಿದೆ.

ಮೂರೂ ಜಿಲ್ಲೆಗಳ ಜನರ ಬಹು ದಶಕಗಳ ಬೇಡಿಕೆಯಾದ ಉದ್ದೇಶಿತ ನೇರ ರೈಲ್ವೆ ಮಾರ್ಗಕ್ಕೆ ಬಾಲಗ್ರಹ ಪೀಡೆ ಬಡಿದಂತಾಗಿದೆ. ಕೇಂದ್ರ ಸರ್ಕಾರವು ಈ ಮಾರ್ಗಕ್ಕಾಗಿ 100 ಕೋಟಿ ಘೋಷಣೆ ಮಾಡಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಉದ್ದೇಶಿತ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಕಾರ್ಯ ಆರಂಭವಾದರೆ, ಯೋಜನೆಗೆ ಚಾಲನೆ ಸಿಕ್ಕಂತಾಗುತ್ತದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರವು ಉದ್ದೇಶಿತ ರೈಲ್ವೆ ಮಾರ್ಗದ ಭೂ ಸ್ವಾಧೀನ ಕಾರ್ಯಕ್ಕೆ ಅಧಿಸೂಚನೆ ಹೊರಡಿಸಿದೆ. ದಾವಣಗೆರೆಯಲ್ಲಿ ಸುಮಾರು 237.36 ಎಕರೆ ಜಮೀನು ಯೋಜನೆಗೆ ಅಗತ್ಯವಿದೆ ಎಂದು ಹೇಳಲಾಗಿದೆ. ಈ ಮಾರ್ಗ ಕಾರ್ಯ ರೂಪಕ್ಕೆ ಬಂದಲ್ಲಿ ಬೆಂಗಳೂರು-ದಾವಣಗೆರೆ-ಹುಬ್ಬಳ್ಳಿ ಮಧ್ಯೆ ಇರುವ ಅಂತರವೂ ಸುಮಾರು 65 ಕಿಮೀನಷ್ಟುಕಡಿಮೆಯಾಗಲಿದೆ.

ಪೀಠ ಬಿಟ್ಟು ಇಳಿಯಿರಿ : ವಚನಾನಂದ ಸ್ವಾಮೀಜಿ ವಿರುದ್ಧ ಆಕ್ರೊಶ...

ಉದ್ದೇಶಿತ ರೈಲ್ವೆ ಮಾರ್ಗದ ಅಂತಿಮ ಸರ್ವೇ ಕಾರ್ಯವೂ ಪೂರ್ಣಗೊಂಡಿದೆ. ಬೆಂಗಳೂರಿನಿಂದ ಚಿತ್ರದುರ್ಗದ ಅಂತರ 110 ಕಿಮೀ ಕಡಿಮೆಯಾಗುತ್ತದೆ. ಅಲ್ಲದೇ, ಸಿರಾ, ಹಿರಿಯೂರು ಹೊಸ ಸ್ಥಳಗಳು ರೈಲ್ವೆ ಸಂಪರ್ಕ ಪಡೆದಂತೆ ಆಗುತ್ತದೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದ ರೈಲು ಸಂಚಾರದಲ್ಲಿ ಶೇ.50ರಷ್ಟುಕಡಿಮೆಯಾಗಲಿದೆ ಎಂದು ಸಂಘ ಮಾಹಿತಿ ನೀಡಿದೆ.

ಹೆಣ್ಣು ಕೂಸು ಮಾರಾಟ : ಹೆತ್ತವರೂ ಸೇರಿ 7 ಜನ ಬಂಧನ...

ಶಿವಮೊಗ್ಗ-ಬೆಂಗಳೂರು ಮಧ್ಯೆ ಹೆಚ್ಚು ಪ್ರಯಾಣಿಕರ ರೈಲುಗಳ ಸಂಚಾರ ಆರಂಭಿಸಬಹುದು. ಅಲ್ಲದೇ, ಬೆಂಗಳೂರು-ದಾವಣಗೆರೆ-ಬೆಳಗಾವಿ-ವಿಜಯಪುರ ನಡುವೆ ಅಸ್ತಿತ್ವದಲ್ಲಿರುವ ಮಾರ್ಗದಲ್ಲೂ ಶೇ.35ರಷ್ಟುರೈಲು ಸಂಚಾರ ಕಡಿಮೆ ಆಗಲಿದೆ. ಇದರಿಂದ ಹರಿಹರ-ಬೀರೂರು-ಅರಸೀಕೆರೆ ಮಾರ್ಗದಲ್ಲಿ ರೈಲು ಸಂಚಾರ ದಟ್ಟಣೆಯೂ ಕಡಿಮೆಯಾಗಿ, ಹೆಚ್ಚಿನದಾಗಿ ಸರಕು ಸಾಗಾಣಿಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ.

ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಮಧ್ಯೆ ಇರುವ ರೈಲ್ವೆ ಮಾರ್ಗದ ಅಂತರವು ಕಡಿಮೆಯಾಗುವುದರಿಂದ ಇಂಧನ, ಪ್ರಯಾಣಿಕರ ಅಮೂಲ್ಯ ಸಮಯ ಉಳಿಸಬಹುದು. ಹಾಗೇ ನೋಡಿದರೆ ನಿತ್ಯವೂ ಸಾವಿರಾರು ಮಾನವ ಗಂಟೆಗಳನ್ನು ಉದ್ದೇಶಿತ ರೈಲ್ವೆ ಮಾರ್ಗ ಉಳಿಸಲಿದೆ.

ಐತಿಹಾಸಿಕ ಚಿತ್ರದುರ್ಗ ಕೋಟೆ ನೋಡಲು ದೇಶ, ವಿದೇಶದಿಂದ ಬರುವ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ಅಲ್ಲದೇ, ಮೂರೂ ಜಿಲ್ಲೆಗಳ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬರುವವರ ಸಂಖ್ಯೆಯೂ ಹೆಚ್ಚಾಗಿ, ಜಿಲ್ಲೆಗಳ ಆರ್ಥಿಕ ಸುಧಾರಣೆಗೂ ಸಹಕಾರಿಯಾಗಲಿದೆ. ಅಲ್ಲದೇ, ದಾವಣಗೆರೆ, ಆನಗೋಡು, ಹೆಬ್ಬಾಳ್‌, ಭರಮಸಾಗರ, ಸಿರಿಗೆರೆ ಕ್ರಾಸ್‌, ಐಮಂಗಲ, ಹಿರಿಯೂರು, ಸಿರಾ, ಊರಕೇರೆಗೆ ರೈಲು ಸಂಪರ್ಕ ಸಿಕ್ಕಂತಾಗುತ್ತದೆ ಎಂದು ಸಂಘದ ಕಾರ್ಯದರ್ಶಿ ರೋಹಿತ್‌ ಎಸ್‌.ಜೈನ್‌ ನೈರುತ್ಯ ರೈಲ್ವೆ ವಲಯ ಜಿಎಂಗೆ ಬರೆದ ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.

Follow Us:
Download App:
  • android
  • ios