ದಾವಣಗೆರೆ [ಜ.19]:  ಆರು ತಿಂಗಳ ಹೆಣ್ಣು ಶಿಶುವನ್ನು ಮಾರಾಟ ಮಾಡಿದ್ದ ಮಗುವಿನ ಹೆತ್ತವರು, ಖಾಸಗಿ ಆಸ್ಪತ್ರೆ ಆಯಾಗಳೂ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಟ ಹನುಮಂತರಾಯ ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಡಿಸೆಂಬರ್‌ 26ರಂದು ಮಕ್ಕಳ ಸಹಾಯವಾಣಿ ಡಾನ್‌ ಬಾಸ್ಕೋ ಕಾರ್ಮಿಕ ಮಿಷನ್‌ಗೆ ಬಂದ ಅನಾಮಧೇಯ ಕರೆಯ ಜಾಡನ್ನು ಹಿಡಿದು, ಹೆಣ್ಣು ಶಿಶು ಮಾರಾಟ ಪ್ರಕರಣ ಬೇಧಿಸಲಾಗಿದೆ ಎಂದರು. ಇಲ್ಲಿನ ಅಂಬೇಡ್ಕರ್‌ ನಗರ ನಿವಾಸಿ ಕವಿತಾ, ಮಂಜುನಾಥ ದಂಪತಿಗೆ ಜನಿಸಿದ 4ನೇ ಹೆಣ್ಣು ಮಗುವನ್ನು ಕಳೆದ ಜೂನ್‌ನಲ್ಲಿ ರಾಣೆಬೆನ್ನೂರಿನ ದಾಕ್ಷಾಯಣಿ, ಸಿದ್ದಪ್ಪ ದಂಪತಿಗೆ 25 ಸಾವಿರ ರು.ಗೆ ಮಾರಾಟ ಮಾಡಿದ್ದ ಕುರಿತು ತನಿಖೆಯ ಜಾಡು ಹಿಡಿದು ಹೊರಟಾಗ ಈ ಪ್ರಕರಣ ಬೆಳಕಿಗೆ ಬಂತು ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಕವಿತಾ, ತಂದೆ ಮಂಜುನಾಥ, ಮಗುವನ್ನು ಖರೀದಿಸಿದ್ದ ರಾಣೆಬೆನ್ನೂರು ಕುರುಬರಕೇರಿಯ ದಾಕ್ಷಾಯಣಿ, ರವಿ ಅಲಿಯಾಸ್‌ ರವೀಂದ್ರ, ಕರಿಬಸಪ್ಪ, ದಾವಣಗೆರೆ ಖಾಸಗಿ ಆಸ್ಪತ್ರೆಯ ಆಯಾ ಚಿತ್ರಮ್ಮ, ಮಧ್ಯವರ್ತಿ ಕಮಲಮ್ಮ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಮಕ್ಕಳ ಸಹಾಯವಾಣಿಗೆ ಬಂದ ಅನಾಮಧೇಯ ಕರೆ ಆದರಿಸಿ ಅಲ್ಲಿನ ಸಿಬ್ಬಂದಿ ಪ್ರಶಾಂತ ವಿ.ಬೆಳ್ಳುಳ್ಳಿ ಎಂಬುವರು ಅಂಬೇಡ್ಕರ್‌ ನಗರಕ್ಕೆ ತೆರಳಿ, ಕವಿತಾ, ಮಂಜುನಾಥ್‌ರ ಮನೆಯಲ್ಲಿ ಪರಿಶೀಲಿಸಿ, 4ನೇ ಮಗು ಜನಿಸಿದ್ದಕ್ಕೆ ಅಂಗನವಾಡಿ ಕೇಂದ್ರದಿಂದ ದಾಖಲೆ ಪಡೆದಿದ್ದರು. ನಂತರ ಶಿಶು ಮಾರಾಟ ಪ್ರಕರಣದ ತನಿಖೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಜ.8 ರಂದು ಪತ್ರ ಸಲ್ಲಿಸಿದ್ದರು ಎಂದು ವಿವರಿಸಿದರು.

ಮಕ್ಕಳ ರಕ್ಷಣಾಧಿಕಾರಿ (ಅಸಾಂಸ್ಥಿಕ) ಎನ್‌.ಕೆ.ಚಂದ್ರಶೇಖರ, ಆಪ್ತ ಸಮಾಲೋಚಕ ವೈ.ಆರ್‌.ಕಿರಣಕುಮಾರ, ಅಂಗನವಾಡಿ ಕಾರ್ಯಕರ್ತೆಯಿಂದ ಮಾಹಿತಿ ಪಡೆದು, ಮಗುವಿನ ಮನೆ ಪತ್ತೆ ಹಚ್ಚಿದರು. ಇದೇ ವೇಳೆ ಮಗುವಿನ ತಂದೆ ಮಂಜುನಾಥ ಸಿಕ್ಕಿ ಬಿದ್ದಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಮಗೆ 3 ಹೆಣ್ಣು ಮಕ್ಕಳಿದ್ದು, 4ನೇ ಮಗುವೂ ಹೆಣ್ಣಾಗಿದ್ದರಿಂದ ಜೂ.9ರಂದು ರಾಣೆಬೆನ್ನೂರಿನ ದಾಕ್ಷಾಯಣಿ ದಂಪತಿಗೆ ಮಾರಾಟ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ ಎಂದು ಎಸ್ಪಿ ತಿಳಿಸಿದರು.

ಪೀಠ ಬಿಟ್ಟು ಇಳಿಯಿರಿ : ವಚನಾನಂದ ಸ್ವಾಮೀಜಿ ವಿರುದ್ಧ ಆಕ್ರೊಶ...

ತನ್ನ ತಾಯಿ ಕಮಲಮ್ಮ, ರಾಣೆಬೆನ್ನೂರಿನ ರವಿ, ಕರಿಬಸಪ್ಪ, ಅಂಬೇಡ್ಕರ್‌ ನಗರದ ಚಿತ್ರಮ್ಮ, ಕರಿಬಸಪ್ಪ ಸಮಕ್ಷಮ 25 ಸಾವಿರ ರು.ಗೆ ತನ್ನ 4ನೇ ಮಗುವನ್ನು ಮಾರಾಟ ಮಾಡಿದ್ದೆವು ಎಂಬುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಮಗುವಿನ ಹೆತ್ತವರೂ ಸೇರಿದಂತೆ 7 ಜನ ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಟಎಂ.ರಾಜೀವ್‌, ನಗರ ಡಿವೈಎಸ್ಪಿ ಯು.ನಾಗೇಶ ಐತಾಳ್‌ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆ ಇನ್ಸಪೆಕ್ಟರ್‌ ನಾಗಮ್ಮ, ಎಎಸ್‌ಐ ಮಾಳವ್ವ, ಸಿಬ್ಬಂದಿಯಾದ ಪರಶುರಾಮ, ಪ್ರಸನ್ನಕುಮಾರ, ರೇಣುಕಮ್ಮ, ಜಂಷಿದಾ ಬೇಗಂ, ಕವಿತಾ, ಶಿವಲಿಂಗಮ್ಮ ಬಾಗೇವಾಡಿ, ಛಾಯಾ, ಟಿ.ಎಸ್‌.ಕವಿತಾರನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ತಿಳಿಸಿದರು. ಎಎಸ್ಪಿ ಎಂ.ರಾಜೀವ್‌, ಮಹಿಳಾ ಠಾಣೆ ಇನ್ಸಪೆಕ್ಟರ್‌ ನಾಗಮ್ಮ, ಸಿಬ್ಬಂದಿ ಇದ್ದರು.

'ಎರೆಡೆರಡು ಬಾರಿ ಮದುವೆ ಆದ್ರೂ ಮನೆಯವ್ರು ಸಂಸಾರ ಮಾಡೋಕೆ ಬಿಡ್ತಿಲ್ಲ'...

ಮಕ್ಕಳ ಮಾರಾಟದ ಜಾಲದ ಶಂಕೆ

ದಾವಣಗೆರೆಯಲ್ಲಿ ಮಕ್ಕಳ ಮಾರಾಟ ಜಾಲ ಇರುವ ಬಗ್ಗೆ ಅನುಮಾನವಿದ್ದು, ಈ ಪ್ರಕರಣದ ಸಮಗ್ರ ತನಿಖೆ ನಡೆಸುವ ಮೂಲಕ ಇಂತಹ ಜಾಲದ ಬೇರುಗಳನ್ನು ಪತ್ತೆ ಹಚ್ಚಲಾಗುವುದು. ನಗರ, ಜಿಲ್ಲೆಯ ಎಲ್ಲಾ ಹೆರಿಗೆ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್‌ ಹೋಂಗಳಲ್ಲಿ ಕೆಲಸ ಮಾಡುವ ವೈದ್ಯರು, ದಾದಿಯರು, ಆಯಾಗಳ ಸಭೆ ನಡೆಸಿ, ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧವೆಂಬ ಬಗ್ಗೆಯೂ ಇಲಾಖೆಯಿಂದ ಅರಿವು ಮೂಡಿಸಲಾಗುವುದು ಎಂದು ಎಸ್ಪಿ ಹನುಮಂತರಾಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.