ರಾಯಚೂರಿನ ಓಪೆಕ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯ ತಲೆಯಲ್ಲಿ ಹುಳುಗಳು ಬೆಳೆದಿವೆ. ಮೂರು ದಿನಗಳಿಂದ ಐಸಿಯುನಲ್ಲಿದ್ದರೂ ಸರಿಯಾದ ಚಿಕಿತ್ಸೆ ನೀಡದ ಕಾರಣ ಈ ಅಮಾನವೀಯ ಘಟನೆ ನಡೆದಿದೆ.
ರಾಯಚೂರು (ಅ.13):ರಾಯಚೂರು ಜಿಲ್ಲೆಯ ಹಳ್ಳಿ ರೈತಾಪಿ ಬಡಜನರ ಕಷ್ಟ ಯಾರಿಗೂ ಬೇಡ. ಅಪಘಾತವಾದರೆ ತಕ್ಷಣದ ಚಿಕಿತ್ಸೆ ಆಸ್ಪತ್ರೆಗಳಿಲ್ಲ, 50 ಕಿಮೀ ದೂರದ ಜಿಲ್ಲಾಸ್ಪತ್ರೆಗೆ ತೆರಳಿದರೆ ತಕ್ಷಣ ಚಿಕಿತ್ಸೆ ಸಿಗುತ್ತೆ ಎಂಬ ಗ್ಯಾರಂಟಿಯೂ ಇಲ್ಲ. ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯ ಪದೇಪದೆ ಬಹಿರಂಗವಾಗುತ್ತಿದೆ. ಆದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಯಾವುದೇ ಕ್ರಮ ಜರುಗಿಸಿದಂತೆ ಕಾಣುತ್ತಿಲ್ಲ. ಇದರ ಪರಿಣಾಮವಾಗಿ ಓಪೆಕ್ ಆಸ್ಪತ್ರೆ (Raichur OPEC Hospital)ಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ ಎನ್ನಲಾಗಿದೆ.
ಯಾದಗಿರಿ ಮೂಲದ ಮಹೇಶ್ವರಿ (30) ಅಕ್ಟೋಬರ್ 9ರಂದು ಅಪಘಾತದಲ್ಲಿ ಗಾಯಗೊಂಡಿದ್ದು, ಅದೇ ದಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರು ದಿನಗಳಿಂದ ಐಸಿಯುಗೆ ದಾಖಲಾದ್ರೂ ಗಾಯಾಳು ಮಹಿಳೆಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಮಹೇಶ್ವರಿ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಡ್ರೆಸ್ಸಿಂಗ್ ಮಾಡದೆ ನಿರ್ಲಕ್ಷ್ಯ ತೋರಿದರೇ ಆಸ್ಪತ್ರೆ ಸಿಬ್ಬಂದಿ?
ಶುಕ್ರವಾರ ರಾತ್ರಿ ತಲೆಗೆ ಬ್ಯಾಂಡೇಜ್ ಮಾಡಿದ್ದ ಸಿಬ್ಬಂದಿ, ಆ ಬಳಿಕ ರೋಗಿಗೆ ಡ್ರೆಸ್ಸಿಂಗ್ ಮಾಡಿಲ್ಲ. ಸಿಬ್ಬಂದಿ ನಿರ್ಲಕ್ಷ್ಯ ದಿಂದಾಗಿ ಐಸಿಯುವಿನಲ್ಲಿ ಇದ್ದ ರೋಗಿಗೆ ತಲೆತುಂಬಾ ಹುಳು ಬಂದಿವೆ. ನಿನ್ನೆ ಸ್ಕ್ಯಾನಿಂಗ್ ವೇಳೆ ತಲೆಯಿಂದ ರಾಶಿ ರಾಶಿ ಹುಳುಗಳು ಹೊರಬಂದಿವೆ ಎಂದು ಆಘಾತಕ್ಕೊಳಗಾಗಿರುವ ಕುಟುಂಬಸ್ಥರು ಮಗಳನ್ನು ಉಳಿಸಿಕೊಡುವಂತೆ ಅಂಗಲಾಚುತ್ತಿದ್ದಾರೆ.
ಇಲ್ಲಿಗೆ ಬಂದರೆ ಸಾವೇ ಗತಿ!
ತಜ್ಞ ವೈದ್ಯರು ಬರುತ್ತಾರೆ, ಈಗ ಬರುತ್ತಾರೆ ಎಂದು ಮೂರು ದಿನಗಳಿಂದ ಕಾಯಿಸುತ್ತಿದ್ದಾರೆ. ಗ್ಲುಕೋಸ್ ಹಾಕುವುದನ್ನು ಬಿಟ್ಟರೆ ಸೂಕ್ತ ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆಯಲ್ಲಿ ಎಂಥ ಅವಸ್ಥೆ ಎಂದರೆ ಸ್ಕ್ಯಾನಿಂಗ್‌ಗೆ ಬರೋ ರೋಗಿಗಳಿಗೆ ಸ್ಟ್ರೆಚರ್, ವೀಲ್‌ಚೇರ್‌ನಲ್ಲಿ ಕ್ಯೂ ನಿಲ್ಲಬೇಕು. ಮನೆಯವರೇ ರೋಗಿಗಳಿಗೆ ಸೀರೆಯಿಂದ ಗಾಳಿ ಬೀಸೋ ದುಸ್ಥಿತಿ ಇದೆ. ಈ ಸ್ಥಿತಿಯನ್ನು ಕಂಡು ಆತಂಕಗೊಂಡಿರುವ ಅವರು, ‘ಇಲ್ಲಿ ಆಸ್ಪತ್ರೆಗೆ ಬಂದರೆ ಸಾವೇ ಗತಿ ಎಂಬಂತಾಗಿದೆ. ನಮ್ಮವರನ್ನು ಉಳಿಸಿಕೊಡಿ’ ಎಂದು ಅಂಗಲಾಚುತ್ತಿದ್ದಾರೆ.
ವೈದ್ಯಕೀಯ ಮತ್ತು ಆರೋಗ್ಯ ಸಚಿವರು ಓಪೆಕ್ ಸಿಬ್ಬಂದಿಯ ಈ ನಿರ್ಲಕ್ಷ್ಯ ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಸೂಚನೆ ನೀಡುವಂತೆ, ರಾಯಚೂರು ಟ್ರಾಮಾ ಕೇರ್ ಸೆಂಟರ್‌ನ ಆಸ್ಪತ್ರೆಯ ಈ ನಿರ್ಲಕ್ಷ್ಯಕ್ಕೆ ಕ್ರಮ ಜರುಗಿಸುವಂತೆ ಪೋಷಕರು, ಆಸ್ಪತ್ರೆಯ ರೋಗಿಗಳು ಒತ್ತಾಯಿಸಿದ್ದಾರೆ.


