ಕೋಲಾರದ ರೈತ ಶಿವಶಂಕರ್ ಅವರು ನೂತನ ಸಾವಯವ ಗುಂಪು ಬಾಳೆ ಕೃಷಿ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಯಾವುದೇ ರಾಸಾಯನಿಕ ಬಳಸದೆ, ಜೈವಿಕ ಉತ್ಪನ್ನಗಳ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಬಹುಬೆಳೆ ಪದ್ಧತಿಯೊಂದಿಗೆ ಅಧಿಕ ಇಳುವರಿ ಮತ್ತು ಆದಾಯ ಗಳಿಸುತ್ತಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಂಡ್ಲಹಳ್ಳಿ ಗ್ರಾಮದ ರೈತರಾದ ಶಿವಶಂಕರ್ (ತಂದೆ ಮುನಿವೆಂಕಟಪ್ಪ) ಅವರು ಕಳೆದ 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ತಮ್ಮ ಜಮೀನಿನಲ್ಲಿ ನೂತನ ಮಾದರಿಯ ಸಾವಯವ ಗುಂಪು ಬಾಳೆ ಕೃಷಿ ಪದ್ಧತಿ ಯಶಸ್ವಿಯಾಗಿ ಅನುಸರಿಸುತ್ತಿದ್ದಾರೆ. ಸಾಮಾನ್ಯ ಬಾಳೆ ಬೇಸಾಯದಲ್ಲಿ ಸಾಲಿನಿಂದ ಸಾಲಿಗೆ ಕಡಿಮೆ ಅಂತರವಿಟ್ಟು ಎಕರೆಗೆ ಸುಮಾರು 1200 ಗಿಡ ನೆಡಲಾಗುತ್ತದೆ. ಆದರೆ ಈ ವಿಶಿಷ್ಟ ಗುಂಪು ಬಾಳೆ ಪದ್ಧತಿಯಲ್ಲಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 20 x 20 ಅಡಿ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ಈ ಅಂತರದ ಲೆಕ್ಕಾಚಾರದಲ್ಲಿ ಒಂದು ಎಕರೆಗೆ ಕೇವಲ 125 ಗುಂಡಿಗಳು ಅಗತ್ಯವಿರುತ್ತವೆ.
ಈ ಎರಡೂ ಹಿಂಡಿ ಅಗತ್ಯ!
ಪ್ರತಿ ಗುಂಡಿಯಲ್ಲಿ ಪ್ರಾರಂಭದಲ್ಲಿ ಒಂದೊಂದೇ ಸಸಿ ನೆಡಲಾಗುತ್ತದೆ. ನಂತರ ಬೆಳೆಯುವ ಸಸಿಗಳಲ್ಲಿ ಪ್ರತಿ ಗುಂಡಿಗೆ 10 ಪ್ರಮುಖ ಮರಿ ಗಿಡಗಳನ್ನು ಉಳಿಸಿಕೊಳ್ಳಲಾಗುತ್ತದೆ. ಇದರಿಂದಾಗಿ 125 ಗುಂಡಿಗಳಿಂದ ಎಕರೆಗೆ ಒಟ್ಟು 1250 ಬಾಳೆ ಗಿಡಗಳು ದೊರೆಯುತ್ತವೆ. ಗಿಡಗಳಿಗೆ ಗಾಯವಾಗಿ ರೋಗ ತಗುಲಬಾರದು ಎಂಬ ಉದ್ದೇಶದಿಂದ ಯಾವುದೇ ಹೆಚ್ಚುವರಿ ಸಸಿಗಳನ್ನು ಬಲವಂತವಾಗಿ ಕತ್ತರಿಸಿ ತೆಗೆಯುವುದಿಲ್ಲ. ಗುಂಡಿಗಳನ್ನು ತೋಡಿದಾಗ ಪ್ರತಿ ಗುಂಡಿಗೆ 20 ಕೆಜಿ ಚೆನ್ನಾಗಿ ಕಳೆದ ಕೊಟ್ಟಿಗೆ ಗೊಬ್ಬರ, 1ರಿಂದ 2ಕೆ.ಜಿ ಬೇವಿನ ಹಿಂಡಿ ಹಾಗೂ ಹೊಂಗೆ ಹಿಂಡಿ ಬೆರೆಸಿ ತುಂಬಲಾಗುತ್ತದೆ.
ಸಾವಯವ ಪೋಷಕಾಂಶ ಮತ್ತು ಮಣ್ಣಿನ ಫಲವತ್ತತೆ ನಿರ್ವಹಣೆ!
ಈ ಕೃಷಿ ಪದ್ಧತಿಯಲ್ಲಿ ಯಾವುದೇ ರೀತಿಯ ರಾಸಾಯನಿಕ ರಸಗೊಬ್ಬರಗಳನ್ನು ಬಳಸದೆ ಸಂಪೂರ್ಣವಾಗಿ ಸಾವಯವ ಗೊಬ್ಬರ ಮತ್ತು ಜೈವಿಕ ಉತ್ಪನ್ನಗಳನ್ನು ಬಳಸಲಾಗಿದೆ. ಕೊಟ್ಟಿಗೆ ಗೊಬ್ಬರವನ್ನು ಜಮೀನಿನಲ್ಲಿಯೇ ತ್ವರಿತವಾಗಿ ಕಳೆಸಲು ಡಾ. ಸೋಯಿಲ್ ಡಿಕಂಪೋಸರ್ ಅನ್ನು ಬಳಸಲಾಗುತ್ತದೆ. ಹೀಗೆ ತಯಾರಾದ ಗೊಬ್ಬರವನ್ನು ೧ ರಿಂದ ೧.೫ ತಿಂಗಳ ನಂತರ ಗಿಡಗಳಿಗೆ ಒದಗಿಸಲಾಗುತ್ತದೆ. ಮಣ್ಣಿನ ಕಠಿಣ ಸ್ವರೂಪವನ್ನು ಸಡಿಲಗೊಳಿಸಲು ಹಾಗೂ ಮಣ್ಣಿನ ಆರೋಗ್ಯವನ್ನು ವೃದ್ಧಿಸಲು ಡಾ. ಸೋಯಿಲ್ ಫರ್ಟಿಲಿಟಿ ಬೂಸ್ಟರ್ ಅನ್ನು ಬಳಸಲಾಗಿದೆ.
ಕೀಟಗಳ ಬಾಧೆಗೆ ಇಲ್ಲಿದೆ ರಾಮಬಾಣ!
ಇದರ ಬಳಕೆಯಿಂದ ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆ ಅಪಾರವಾಗಿ ಹೆಚ್ಚಾಗುತ್ತದೆ ಮತ್ತು ಗಿಡಗಳ ಬಿಳಿ ಬೇರುಗಳು ಆಳವಾಗಿ ಬೆಳೆಯಲು ಅನುಕೂಲವಾಗುತ್ತದೆ. ಪರಿಣಾಮವಾಗಿ ಜಮೀನಿನ ಮಣ್ಣು ಚಹಾ ಪುಡಿಯಂತೆ ಅತ್ಯಂತ ಮೃದು ಹಾಗೂ ಸಡಿಲವಾಗುತ್ತದೆ. ಕೊಯ್ಲಿನ ನಂತರ ಬೆಳೆಯ ತ್ಯಾಜ್ಯಗಳನ್ನು ಸುಡುವುದು ಸಾಮಾನ್ಯ, ಆದರೆ ಇಲ್ಲಿ ಮೊದಲ ಕೊಯ್ಲಿನ ನಂತರದ ಬಾಳೆ ಎಲೆಗಳು ಹಾಗೂ ಮಧ್ಯಂತರ ಬೆಳೆಯಾದ ಸೇವಂತಿಗೆಯ ತ್ಯಾಜ್ಯವನ್ನು ಮಣ್ಣಿನ ಮೇಲೆ ಹೊದಿಕೆಯಾಗಿ ಬಳಸಲಾಗುತ್ತದೆ. ಸೇವಂತಿಗೆ ಬೆಳೆಗಿಂತ ಮೊದಲು ಶಣಬನ್ನು ಬೆಳೆದು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿ, ರೋಗ ಹಾಗೂ ಕೀಟಗಳ ಬಾಧೆ ಕಡಿಮೆಯಾಗುತ್ತದೆ.
ನೀರಿನ ವೈಜ್ಞಾನಿಕ ನಿರ್ವಹಣೆ ಮತ್ತು ಎಲೆಗಳ ಬೆಳವಣಿಗೆ!
ಸಾಮಾನ್ಯವಾಗಿ ರೈತರು ಬಾಳೆಗೆ ಅತಿಯಾದ ನೀರಾವರಿ ಒದಗಿಸುತ್ತಾರೆ, ಆದರೆ ಇಲ್ಲಿ ವೈಜ್ಞಾನಿಕ ನೀರಾವರಿ ಪದ್ಧತಿಯನ್ನು ಅನುಸರಿಸಲಾಗಿದೆ. ಪ್ರತಿ ಗುಂಪು ಗಿಡಗಳ ಎರಡೂ ಬದಿಗಳಲ್ಲಿ ತಲಾ ಒಂದೊಂದರಂತೆ ಒಟ್ಟು 2 ಹನಿ ನೀರಾವರಿ ಲೈನ್ಗಳನ್ನು ಅಳವಡಿಸಲಾಗಿದೆ. ಮೇಲ್ಮೈ ಮಣ್ಣು ಮತ್ತು 6 ಇಂಚು ಆಳದ ಮಣ್ಣು ಎರಡೂ ಒಣಗಿದಾಗ ಮಾತ್ರ ನೀರನ್ನು ಹಾಯಿಸಲಾಗುತ್ತದೆ. ಅತಿಯಾದ ನೀರಾವರಿಯಿಂದ ಮಣ್ಣು ಗಟ್ಟಿಯಾಗಿ, ಗಾಳಿಯಾಡುವಿಕೆ ಕಡಿಮೆಯಾಗಿ ಬಿಳಿ ಬೇರುಗಳು ಕೊಳೆಯುತ್ತವೆ ಹಾಗೂ ರೋಗಗಳು ಹೆಚ್ಚಾಗುತ್ತವೆ. ಸರಿಯಾದ ಜೈವಿಕ ಪೋಷಕಾಂಶ ಮತ್ತು ಮಣ್ಣಿನಲ್ಲಿ ಉತ್ತಮ ಗಾಳಿಯಾಡುವಿಕೆ ಇರುವುದರಿಂದ ಮಧ್ಯಾಹ್ನ 12:30ರ ಕಡು ಬಿಸಿಲಿನಲ್ಲಿಯೂ ಎಲೆಗಳು ಒಣಗದೆ ಕಡು ಹಸಿರು ಬಣ್ಣದಿಂದ ಕಂಗೊಳಿಸುತ್ತವೆ. ಈ ಪದ್ಧತಿಯಲ್ಲಿ ಬಾಳೆ ಎಲೆಯು ಸುಮಾರು 7 ಅಡಿ ಉದ್ದ ಬೆಳೆಯಲಿದ್ದು, ಎಲೆಯ ತೊಟ್ಟು 2 ಇಂಚು ದಪ್ಪವಾಗಿರುತ್ತದೆ. ಎಲೆಯ ಅಗಲ ಮತ್ತು ಗಾತ್ರ ಎಷ್ಟು ದೊಡ್ಡದಾಗಿರುತ್ತದೆ ಎಂದರೆ, ಒಂದೇ ಬಾಳೆ ಎಲೆಯಲ್ಲಿ ಒಂದೇ ಕುಟುಂಬದ 6 ರಿಂದ 7 ಜನರು ಒಟ್ಟಿಗೆ ಕುಳಿತು ಊಟ ಮಾಡಬಹುದಾಗಿದೆ.
ಅಧಿಕ ಇಳುವರಿ, ಗೊನೆ ತೂಕ ಮತ್ತು ಮ್ಯಾಟಾಕಿಂಗ್ ವಿಧಾನ!
ಸಾಮಾನ್ಯ ಪದ್ಧತಿಯಲ್ಲಿ ಬೆಳೆಯುವ ಬಾಳೆಯಲ್ಲಿ ಪ್ರತಿ ಗೊನೆ 10 ರಿಂದ 12 ಕೆಜಿ ತೂಕ ಬಂದರೆ, ಈ ಸಾವಯವ ಗುಂಪು ಬಾಳೆ ಪದ್ಧತಿಯಲ್ಲಿ ಪ್ರತಿ ಗೊನೆಯು 18ರಿಂದ 22 ಕೆಜಿ ಹಾಗೂ ಕೆಲವೊಮ್ಮೆ 24 ಕೆಜಿವರೆಗೆ ತೂಗುತ್ತದೆ. ಒಂದು ಗೊನೆಯಲ್ಲಿ ಸುಮಾರು 18 ಶೀಪುಗಳು ಇರುತ್ತವೆ. ಸಾವಯವ ಕೃಷಿಯಿಂದ ಬೆಳೆದ ಹಣ್ಣುಗಳಲ್ಲಿ ನಾರಿನಂಶ ಹೆಚ್ಚಿದ್ದು, ತಿರುಳು ಅತ್ಯಂತ ಗಟ್ಟಿಯಾಗಿರುತ್ತದೆ. ಏಪ್ರಿಲ್ ೧೫ ರಂದು ಗಿಡ ನೆಟ್ಟ ನಂತರ ೯ ತಿಂಗಳಿಗೆ ಮೊದಲ ಕೊಯ್ಲು ಸಿಗುತ್ತದೆ. ಸಾಮಾನ್ಯ ಬಾಳೆ ಬೆಳೆಯಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಆದಾಯ ಸಿಕ್ಕಿದರೆ, ಈ ಗುಂಪು ಬಾಳೆ ಪದ್ಧತಿಯಲ್ಲಿ ವರ್ಷಪೂರ್ತಿ ನಿರಂತರವಾಗಿ ಕೊಯ್ಲು ಮತ್ತು ಇಳುವರಿ ದೊರೆಯುತ್ತದೆ. ಬಾಳೆ ಗೊನೆ ಕೊಯ್ದ ೩೦ ರಿಂದ ೪೫ ದಿನಗಳ ನಂತರ ತಾಯಿ ಗಿಡದ ಕಾಂಡವನ್ನು ಮ್ಯಾಟಾಕಿಂಗ್ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ತಾಯಿ ಗಿಡದಲ್ಲಿ ಉಳಿದಿರುವ ನೀರು ಮತ್ತು ಪೋಷಕಾಂಶಗಳು ಬೆಳೆಯುತ್ತಿರುವ ಪಕ್ಕದ ಮರಿ ಗಿಡಗಳಿಗೆ ಸುಲಭವಾಗಿ ವರ್ಗಾವಣೆಯಾಗುತ್ತವೆ.
ಬಹುಬೆಳೆ ಪದ್ಧತಿ ಹಾಗೂ ಆರ್ಥಿಕ ಭದ್ರತೆ!
ಬಾಳೆ ಗಿಡಗಳ ನಡುವಿನ 20 x 20 ಅಡಿ ಖಾಲಿ ಜಾಗವನ್ನು ವ್ಯರ್ಥ ಮಾಡದೆ, ಅಲ್ಲಿ 2 ಸಾಲುಗಳಲ್ಲಿ ಸೇವಂತಿಗೆ ಹೂವಿನ ಗಿಡ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕಡಿಮೆಯಿದ್ದರೂ ಸಹ ಸೇವಂತಿಗೆ ರಫ್ತು ಮಾಡಿ 3ರಿಂದ 3.5 ಲಕ್ಷ ರೂಪಾಯಿ ಹೆಚ್ಚುವರಿ ಆದಾಯ ಪಡೆಯಲಾಗಿದೆ. ಇದರೊಂದಿಗೆ ಮನೆ ಬಳಕೆಗೆ ಅಗತ್ಯವಿರುವ ಈರುಳ್ಳಿ ಮಧ್ಯಂತರ ಬೆಳೆಯಾಗಿ ಬೆಳೆಯಲಾಗಿದ್ದು, 10 ಕೆಜಿ ಈರುಳ್ಳಿ ಬೀಜದಿಂದ 2 ಕ್ವಿಂಟಾಲ್ ಈರುಳ್ಳಿ ಇಳುವರಿ ಪಡೆಯಲಾಗಿದೆ.
ಲಾಭ ಗಳಿಸಲು ಇದೇ ಮಾರ್ಗ ಸೂಕ್ತ!
ಒಂದೇ ಬೆಳೆಯನ್ನು ನೆಚ್ಚಿಕೊಳ್ಳುವ ಏಕಬೆಳೆ ಪದ್ಧತಿಯಿಂದ ಮಾರುಕಟ್ಟೆ ದರ ಕುಸಿದಾಗ ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದರೆ ಈ ರೀತಿ ಬಹುಬೆಳೆ ಪದ್ಧತಿಯನ್ನು ಅನುಸರಿಸುವುದರಿಂದ ಒಂದು ಬೆಳೆಯಲ್ಲಿ ದರ ಕಡಿಮೆಯಾದರೂ ಮತ್ತೊಂದು ಬೆಳೆಯಿಂದ ಲಾಭ ಗಳಿಸಿ ಆರ್ಥಿಕ ಭದ್ರತೆ ಪಡೆಯಬಹುದು. ಈ ಸುಸ್ಥಿರ ಸಾವಯವ ಕೃಷಿ ವಿಧಾನಗಳಿಗೆ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಾವಯವ ಕೃಷಿ ತಜ್ಞರಾದ ಡಾ. ಹುಲ್ಲುನಾಚೇಗೌಡ ಅವರ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ.














