Narayana Hospital Ramanagara inciden: ರಾಮನಗರದ ಖಾಸಗಿ ಆಸ್ಪತ್ರೆಗೆ ಕೈ ಮೂಳೆ ಮುರಿತದ ಆಪರೇಷನ್‌ಗೆ ದಾಖಲಾಗಿದ್ದ 58 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಇದು ಹೃದಯಾಘಾತದಿಂದಾದ ಸಾವು ಎಂದು ವೈದ್ಯರು ಹೇಳಿದರೆ, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರ ಆರೋಪ.

ರಾಮನಗರ (ಅ.17): ಕೈ ಆಪರೇಷನ್‌ಗೆ ಖಾಸಗಿ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ರಾಮನಗರ ಟೌನ್ ಐಜೂರು ನಾರಾಯಣ ಆಸ್ಪತ್ರೆಯಲ್ಲಿ ನಡೆದಿದೆ.

ವರದರಾಜು(58) ಮೃತ ದುರ್ದೈವಿ. ರಾಮನಗರದ ಬಾಲಗೇರಿ ನಿವಾಸಿಯಾಗಿರುವ ವರದರಾಜು ಕೈ ಮೂಳೆ ಮುರಿತದಿಂದ ನಿನ್ನೆ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದರು. ಕೈಮೂಳೆ ಮುರಿತ ಗಂಭೀರವಾಗಿದೆ ಆಪರೇಷನ್ ಮಾಡಬೇಕು ಎಂದು ವೈದ್ಯರು ಮುಂಚಿತವಾಗಿ ಒಂದು ಲಕ್ಷ ಹಣ ಕಟ್ಟಿಸಿಕೊಂಡಿದ್ದರು.

ಆಪರೇಷನ್ ವೇಳೆ ದಿಢೀರ್ ಸಾವು:

ಆದರೆ ಆಪರೇಷನ್ ವೇಳೆ ದಿಢೀರ್ ಸಾವನ್ನಪ್ಪದ್ದಾರೆ. ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಆಪರೇಷನ್ ಮಾಡವಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಕುಟುಂಬಸ್ಥರು ವೈದ್ಯರ ಹೇಳಿಕೆಯನ್ನ ಒಪ್ಪುತ್ತಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ:

ಮೃತ ವರದರಾಜುಗೆ ಹೃದಯಾಘಾತವಾಗಿಲ್ಲ. ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿ ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಸಿಗುವವರೆಗೆ ಶವ ಪಡೆಯುವುದಿಲ್ಲ ಎಂದು ಆಸ್ಪತ್ರೆ ಎದುರಲ್ಲೇ ಕುಳಿತ ಕುಟುಂಬಸ್ಥರು. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.