- Home
- Karnataka Districts
- ಹಾವೇರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಸಿಸೆರಿಯನ್ ಹೆರಿಗೆ ವೇಳೆ ಮಗುವಿನ ತಲೆ ಕೊಯ್ದ ಡಾಕ್ಟರ್!
ಹಾವೇರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಸಿಸೆರಿಯನ್ ಹೆರಿಗೆ ವೇಳೆ ಮಗುವಿನ ತಲೆ ಕೊಯ್ದ ಡಾಕ್ಟರ್!
ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೆರಿಯನ್ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶುವಿನ ತಲೆಗೆ ಬ್ಲೇಡ್ ತಗುಲಿ ಗಾಯವಾಗಿದೆ. ನಾರ್ಮಲ್ ಡೆಲಿವರಿ ಸಾಧ್ಯವಿಲ್ಲವೆಂದು ಹೇಳಿ ಆಪರೇಷನ್ ಮಾಡಲಾಗಿದ್ದು, ಘಟನೆಯ ನಂತರ ವೈದ್ಯರು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ಶಿಶುವಿನ ತಲೆ ಭಾಗಕ್ಕೆ ಬ್ಲೇಡ್
ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶುವಿಗೆ ಗಾಯವಾದ ಗಂಭೀರ ಘಟನೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಂಭವಿಸಿದೆ. ಸಿಜೆರಿಯನ್ ಶಸ್ತ್ರಚಿಕಿತ್ಸೆ ವೇಳೆ ಶಿಶುವಿನ ತಲೆ ಭಾಗಕ್ಕೆ ಬ್ಲೇಡ್ ತಗುಲಿ ಗಾಯವಾಗಿದ್ದು, ಬಳಿಕ “ಏನೂ ಆಗಲ್ಲ” ಎಂದು ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಾವೇರಿ ಜಿಲ್ಲಾ ಆಸ್ಪತ್ರೆ
ಹಾವೇರಿ ನಗರದ ಹೊಸನಗರ ನಿವಾಸಿಗಳಾದ ಮಹ್ಮದ್ ಮುಜಾಯಿದ್ ಮತ್ತು ಬಿಬಿ ಅಪ್ಸಾ ಮುಲ್ಲಾ ದಂಪತಿಗೆ ಸೇರಿದ ನವಜಾತ ಶಿಶುವಿಗೆ ಈ ದುರ್ಘಟನೆ ಸಂಭವಿಸಿದೆ. ಇಂದು ಮಧ್ಯಾಹ್ನ ಗರ್ಭಿಣಿ ಮಹಿಳೆಯನ್ನು ನೋವು ಹೆಚ್ಚಾದ ಹಿನ್ನೆಲೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಾರ್ಮಲ್ ಡಿಲಿವರಿ ಸಾಧ್ಯವಿಲ್ಲ ಎಂದು ಭಯ ಹುಟ್ಟಿಸಿದ ವೈದ್ಯರು
ಗರ್ಭದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ ವೈದ್ಯರು, ನಾರ್ಮಲ್ ಡಿಲಿವರಿ ಸಾಧ್ಯವಿಲ್ಲ, ತಕ್ಷಣ ಸಿಜೆರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಕುಟುಂಬದವರಿಗೆ ಭಯ ಹುಟ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕುಟುಂಬದವರು ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಿದ್ದಾರೆ.
ಆಪರೇಷನ್ ಬಳಿಕ ಹೊರಬಂದ ಶಿಶುವಿನ ತಲೆಗೆ ಗಾಯ
ಆಪರೇಷನ್ ವಾರ್ಡ್‌ನಿಂದ ಶಿಶುವನ್ನು ಹೊರತಂದ ವೇಳೆ, ಮಗುವಿನ ತಲೆ ಭಾಗದಲ್ಲಿ ಸ್ಪಷ್ಟವಾಗಿ ಬ್ಲೇಡ್ ಗಾಯ ಕಂಡುಬಂದಿದೆ. ಇದನ್ನು ಗಮನಿಸಿದ ಪಾಲಕರು ಬೆಚ್ಚಿಬಿದ್ದು ವೈದ್ಯರನ್ನು ಪ್ರಶ್ನಿಸಿದ್ದಾರೆ. “ಮಗುವಿಗೆ ಏನಾಯ್ತು?” ಎಂದು ಕೇಳಿದಾಗ, ವೈದ್ಯೆ ಸ್ವಾತಿ ಅವರು “ಗರ್ಭದಲ್ಲಿ ನೀರು ಕಡಿಮೆ ಇದ್ದ ಕಾರಣ ಶಸ್ತ್ರಚಿಕಿತ್ಸೆ ವೇಳೆ ತಲೆಗೆ ಬ್ಲೇಡ್ ತಗುಲಿದೆ, ಆದರೆ ಏನೂ ಆಗಲ್ಲ” ಎಂದು ಉತ್ತರಿಸಿ ಅಲ್ಲಿಂದ ತೆರಳಿದ್ದಾರೆ ಎಂಬ ಗಂಭೀರ ಆರೋಪ ಪಾಲಕರಿಂದ ಕೇಳಿಬಂದಿದೆ.
ವೈದ್ಯೆ ವಿರುದ್ಧ ಕುಟುಂಬದ ಆಕ್ರೋಶ
ಈ ಘಟನೆಯಿಂದ ಆಕ್ರೋಶಗೊಂಡ ಕುಟುಂಬದವರು, ವೈದ್ಯೆ ಸ್ವಾತಿ ಅವರ ನಿರ್ಲಕ್ಷ್ಯವೇ ಶಿಶುವಿನ ಗಾಯಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. “ನಮ್ಮ ಮಗುವಿಗೆ ಮುಂದೆ ಏನಾದರೂ ಸಮಸ್ಯೆ ಉಂಟಾದರೆ ಅದರ ಹೊಣೆ ಯಾರು ಹೊರುತ್ತಾರೆ?” ಎಂದು ದಂಪತಿ ಕಣ್ಣೀರು ಹಾಕುತ್ತಾ ಪ್ರಶ್ನಿಸಿದ್ದಾರೆ.
ಆರೋಗ್ಯ ಇಲಾಖೆ ಗಮನ ಹರಿಸಬೇಕೆಂದು ಒತ್ತಾಯ
ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ನಿರ್ಲಕ್ಷ್ಯ ನಡೆದು ನವಜಾತ ಶಿಶುವಿಗೆ ಗಾಯವಾಗಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ವೈದ್ಯರ ವಿರುದ್ಧ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಈ ಘಟನೆ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

