ಅಪೌಷ್ಟಿಕತೆ ಸಮಸ್ಯೆ ಶಮನಕ್ಕೆ ಪೌಷ್ಟಿಕಯುಕ್ತ ಸಿರಿಧಾನ್ಯ ಲಡ್ಡು ವಿತರಣೆ ರಾಯಚೂರು ಜಿಲ್ಲಾಡಳಿತ ಪ್ಲಾನ್
ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ನೂರಾರು ಮಕ್ಕಳು ಬಳಲುತ್ತಿದ್ದಾರೆ. ಇಂತಹ ಅಪೌಷ್ಟಿಕತೆ ದೂರ ಮಾಡಬೇಕು ಎಂಬ ಮಹಾ ಉದ್ದೇಶದಿಂದ ಜಿಲ್ಲಾಡಳಿತ ಪ್ರಾಯೋಗಿಕವಾಗಿ ಅಂಗನವಾಡಿ ಮಕ್ಕಳಿಗೆ ಲಡ್ಡು ವಿತರಣೆ ಪ್ಲಾನ್ ಮಾಡಿಕೊಂಡಿದ್ದಾರೆ.
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಸೆ.19): ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ನೂರಾರು ಮಕ್ಕಳು ಬಳಲುತ್ತಿದ್ದಾರೆ. ಈ ಅಪೌಷ್ಟಿಕತೆ ಸಂಪೂರ್ಣ ನಿವಾರಣೆ ಮಾಡಲು ಆಗದೇ ಹತ್ತಾರು ಯೋಜನೆಗಳು ಬಂದ್ರೂ ಸವಾಲಾಗಿಯೇ ಉಳಿದಿದೆ. ಇಂತಹ ಅಪೌಷ್ಟಿಕತೆ ದೂರ ಮಾಡಬೇಕು ಎಂಬ ಮಹಾ ಉದ್ದೇಶದಿಂದ ರಾಯಚೂರು ಜಿಲ್ಲಾಡಳಿತ ಪ್ರಾಯೋಗಿಕವಾಗಿ ಅಂಗನವಾಡಿ ಮಕ್ಕಳಿಗೆ ಲಡ್ಡು ವಿತರಣೆ ಪ್ಲಾನ್ ಮಾಡಿಕೊಂಡಿದ್ದಾರೆ. ಬಿಸಿಲುನಾಡು ರಾಯಚೂರು ಜಿಲ್ಲೆಗೆ ಅಪೌಷ್ಟಿಕತೆ ಎಂಬುವುದು ಕಪ್ಪು ಚುಕ್ಕೆಯಾಗಿದೆ. ಸರ್ಕಾರದ ಹತ್ತಾರು ಯೋಜನೆಗಳು ಇದ್ರೂ ಸಹ ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆ ಮಾತ್ರ ಹಾಗೇ ಉಳಿಯುತ್ತಿದೆ. ಇದಕ್ಕೆ ಕಾರಣಗಳು ಸಹ ಹತ್ತಾರು ಇವೆ. ಅದರಲ್ಲಿ ಮುಖ್ಯವಾಗಿ ನೋಡುವುದಾದರೇ ಹಿಂದುಳಿದ ಪ್ರದೇಶದ ಜನರಲ್ಲಿ ಆರೋಗ್ಯ ಸಂಬಂಧಿ ಜಾಗೃತಿ ಕೊರತೆ, ಪೌಷ್ಟಿಕ ಆಹಾರ ಸೇವನೆ ಕಡೆಗೆ ಗಮನ ನೀಡದೇ ಇರುವುದು.ತಾಯಂದಿರ ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವನೆ ಮಾಡದೇ ಇರುವುದು. ಹೆರಿಗೆ ವೇಳೆ ಮಗುವಿನ ಮತ್ತು ತಾಯಿಯ ಹಾರೈಕೆ ಸರಿಯಾಗಿ ಮಾಡದೇ ಇರುವುದು, ಮತ್ತೆ ಅಂಗನವಾಡಿ ಆಹಾರ ಪದಾರ್ಥಗಳು ಸರಿಯಾಗಿ ನೀಡದೇ ಇರುವುದು ಸಹ ಅಪೌಷ್ಟಿಕತೆ ಹೆಚ್ಚಳಕ್ಕೆ ಕಾರಣವಾಗಿದೆ. ಇಂತಹ ಸಮಸ್ಯೆಗಳಿಂದ ಎಚ್ಚತ್ತುಕೊಂಡ ರಾಯಚೂರು ಜಿಲ್ಲಾಡಳಿತ ಜಿಲ್ಲೆಯಲ್ಲಿ ಇರುವ 35 ಸಾವಿರ ಅಂಗನವಾಡಿ ಮಕ್ಕಳಿಗೆ ಸಿರಿಧಾನ್ಯ ಗಳಿಂದ ತಯಾರಿಸಿದ ಲಡ್ಡು ವಿತರಿಸಲು ಮುಂದಾಗಿದೆ.
ಎನ್ ಆರ್ ಸಿ ಸೆಂಟರ್ ಗಳು ಖಾಲಿ ಖಾಲಿ :
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ರಾಯಚೂರು ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಯಲ್ಲಿ ಎನ್ ಆರ್ ಸಿ ಸೆಂಟರ್ (Nutrition Rehabilitation Center) ಆರಂಭಿಸಲಾಗಿದೆ. ಈ ಸೆಂಟರ್ ನಲ್ಲಿ ಮಕ್ಕಳಿಗೆ 15 ದಿನಗಳ ಕಾಲ ಆರೈಕೆ ಮಾಡಿ ಪೌಷ್ಟಿಕ ಆಹಾರ ನೀಡುತ್ತಾರೆ. ಅಷ್ಟೇ ಅಲ್ಲದೆ ಮಗುವಿನ ತಾಯಿಗೆ ನಿತ್ಯ 275 ರೂ. ಕೂಲಿ ನೀಡಿ ಪೌಷ್ಟಿಕ ಆಹಾರ ಮಗುವಿಗೆ ಹೇಗೆ ನೀಡಬೇಕು ಎಂಬುವುದು ನೂರಿತ ವೈದ್ಯರು ತಿಳಿಸಿಕೊಡುತ್ತಾರೆ. ಆದ್ರೂ ಅಪೌಷ್ಟಿಕ ಮಕ್ಕಳ ಪೋಷಕರು ಮಾತ್ರ ಕುಟುಂಬ ಬಿಟ್ಟು ಎನ್ ಆರ್ ಸಿ ಸೆಂಟರ್ ಗಳಿಗೆ ಬಂದಲು ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಪೌಷ್ಟಿಕತೆ ಮಾತ್ರ ಹಾಗೇ ಮಕ್ಕಳಲ್ಲಿ ಕಾಡುತ್ತಿದೆ.
ಸಿಎಸ್ ಆರ್ ಫಂಡ್ ಬಳಸಿ ಲಡ್ಡು ವಿತರಣೆ:
ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ತೀವ್ರ ಮತ್ತು ಸಾಮಾನ್ಯ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಲಾಗಿದೆ. ಒಂದು ಅಂದಾಜಿನ ಪ್ರಕಾರ 35 ಸಾವಿರ ಮಕ್ಕಳು ಇದ್ದು, ಆ ಮಕ್ಕಳಿಗೆ ಧಾರವಾಡ ಮೂಲದವರು ತಯಾರಿಸಿದ ಪೌಷ್ಟಿಕ ಆಹಾರ ಹೊಂದಿರುವ ಲಡ್ಡು ವಿತರಣೆ ಸಿದ್ಧತೆ ನಡೆದಿದೆ. ಅದರ ಜೊತೆಗೆ ಅಂಗನವಾಡಿ ಕೇಂದ್ರಗಳಿಗೆ ಆಗಮಿಸುವ ಮಕ್ಕಳು ಹಾಗೂ ತಾಯಿಂದಿರಿಗೆ ಆರೋಗ್ಯ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ.
ರಾಯಚೂರು: ಲಿಂಗಸೂಗೂರು , ದೇವದುರ್ಗ ತಾಲೂಕಿನಲ್ಲಿ ಕಾಡುತ್ತಿದೆ ಅತೀ ಹೆಚ್ಚು ಅಪೌಷ್ಟಿಕತೆ
ಮಕ್ಕಳಿಗೆ ಈಗ ನೀಡುತ್ತಿರುವ ಮೊಟ್ಟೆ, ಪೌಷ್ಟಿಕ ಆಹಾರದ ಜೊತೆಗೆ ಅತೀ ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿದ ಸಿರಿಧಾನ್ಯ ಬಳಸಿ ತಯಾರಿಸಿದ ಲಡ್ಡು ನೀಡಲು ಯೋಜನೆ ಸಿದ್ದಪಡಿಸಲಾಗಿದೆ. ಸದ್ಯ 4-5 ತಿಂಗಳಗಳ ಕಾಲ ಲಡ್ಡು ವಿತರಣೆಗಾಗಿ 2.50ಕೋಟಿ ರೂಪಾಯಿ ವೆಚ್ಚ ಆಗಬಹುದು ಅಂತ ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸದ್ಯ ಟೆಂಡರ್ ಕೂಡ ಕರೆಯಲಾಗಿದ್ದು, ಧಾರವಾಡ ಮೂಲದವರು ಈ ಲಡ್ಡು ವಿತರಣೆ ಮುಂದಾಗಿದ್ದಾರೆ.
ಅಪೌಷ್ಟಿಕತೆ ನಿರ್ಮೂಲನೆಗೆ ಮನೆಗೊಂದು ತೋಟ: ವಿಜಯನಗರದಲ್ಲಿ ವಿನೂತನ ಕಾರ್ಯ..!
ಒಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಶತಮಾನದಿಂದ ಕಾಡುತ್ತಿರುವ ಅಪೌಷ್ಟಿಕತೆ ದೂರು ಮಾಡಲು ರಾಯಚೂರು ಜಿಲ್ಲಾಡಳಿತ ಲಡ್ಡು ಮೊರೆ ಹೋಗಿದೆ. ಈ ಲಡ್ಡು ಸೇವಿಸಿದ ಮಕ್ಕಳಲ್ಲಿ ಅಪೌಷ್ಟಿಕತೆ ದೂರವಾಗಿ ಪೌಷ್ಟಿಕ ಮತ್ತು ಸದೃಢ ಮಕ್ಕಳ ಬೆಳವಣಿಗೆ ಆಗಲಿ ಎಂಬುವುದೇ ನಮ್ಮ ಆಶಯ.