ವಿಜಯಪುರ(ನ.05): ಬಹುಶಃ ರಾಜಕೀಯ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಎನ್ನುವುದಾದರೆ ಅದು ಕೇವಲ ಬಿಜೆಪಿಯಲ್ಲಿ ಮಾತ್ರ ಎಂದು ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಹೇಳಿದ್ದಾರೆ. ನಗರದ ರುಕ್ಮಾಂಗ ಪಂಡಿತರ ಸಮಾದಿಯಲ್ಲಿ ಸೋಮವಾರ ಬಿಜೆಪಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಶಿಕ್ಷಣ ಪ್ರಕೋಷ್ಠ ಪ್ರಮುಖರ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಅನುಭವ ಹೊಂದಿರತಕ್ಕಂತ ಕಾರ್ಯಕರ್ತರೇ ನಾವು ಇಲ್ಲಿ ಇದ್ದೇವೆ. ಪ್ರತಿ ಮೂರು ವರ್ಷಕ್ಕೆ ಒಂದು ಬಾರಿ ಪದಾಧಿಕಾರಿಗಳ ನೇಮಕ ಮಾಡುತ್ತೇವೆ. ಪದಾಧಿಕಾರಿಗಳನ್ನು ನೇಮಕ ಮಾಡಿ ಅಭ್ಯಾಸವರ್ಗಗಳನ್ನು ಏರ್ಪಡಿಸುತ್ತೇವೆ. ಬಹುಶಃ ರಾಜಕೀಯ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಎನ್ನುವುದಾದರೆ ಅದು ಕೇವಲ ಬಿಜೆಪಿಯಲ್ಲಿ ಮಾತ್ರ ಇದೆ ಎಂದರು.

ರಾಷ್ಟ್ರ ಮಟ್ಟದಲ್ಲಿ ತಮ್ಮ ಪದಾಧಿಕಾರಿಗಳು, ಸಂಸದರು, ಮಂತ್ರಿಗಳು, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ಮಂಡಲ ಮಟ್ಟದಲ್ಲಿ ನಡೆಯುತ್ತದೆ. ಇದನ್ನು ಪ್ರತಿ ಬೂತ್‌ಮಟ್ಟದಲ್ಲೂ ನಡೆಸಬೇಕೆನ್ನುವ ಹಂಬಲ ಇದೆ. ಕಾರ್ಯಕರ್ತರು ಪದಾಧಿಕಾರಿಗಳು ವೈಯಕ್ತಿಕವಾಗಿ, ವೈಚಾರಿಕವಾಗಿ, ಭೌತಿಕವಾಗಿ ಗಟ್ಟಿಗೊಳ್ಳಬೇಕು ಎಂದರು.

ವಿಜಯಪುರ: ಬೈಕ್‌ ಮುಖಾಮುಖಿ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

ಜಪಾನ ನಮ್ಮ ನಂತರ ಸ್ವತಂತ್ರ ಪಡೆದುಕೊಂಡಿದೆ. ಆದರೆ ನಮಗಿಂತ ಮುಂದೆ ಸಾಗಿದೆ. ಆದರೆ ನಮ್ಮ ದೇಶ ಹಿಂದುಳಿದೆ. ಕೇವಲ ಸ್ವ ಹಿತಾಸಕ್ತಿಗಾಗಿ ದೇಶದ ಹಿತವನ್ನು ಬಲಿಕೊಟ್ಟಿದ್ದಾರೆ. ಕೇವಲ ಸ್ವ ಹಿತಾಸಕ್ತಿಗಾಗಿ ಕಳೆದ 60 ವರ್ಷವನ್ನು ಆಳಿದ ಪಕ್ಷ ಯಾವ ಮಟ್ಟಕ್ಕೆ ದೇಶವನ್ನು ತೆಗೆದುಕೊಂಡು ಬಂದಿದ್ದಾರೆ ಎಂದರು.

ಅಟಲ್‌ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿಯವರು ದೇಶದ ಹಿತಕ್ಕಾಗಿ ಶ್ರಮಿಸಿದ್ದಾರೆ. ವಾಜಪೇಯಿ ಪ್ರಧಾನಿಯಾದ ನಂತರ ದೇಶದ ಜನತೆಗೆ ಹತ್ತಿರವಾಗಿದ್ದರು. ಮೋದಿಯವರ ಆಡಳಿತದಲ್ಲಿ ದೇಶ ಸದೃಢವಾಗಿದೆ. ನರೇಂದ್ರ ಮೋದಿಯವರನ್ನು ದೇಶದ ಜನ ನೆಚ್ಚಿಕೊಂಡು 2ನೇ ಬಾರಿಗೆ ಆರಿಸಿ ತಂದಿದ್ದಾರೆ. ಕಳೆದ 6 ವರ್ಷ ಅವಧಿಯಲ್ಲಿ ಯಾವ ರೀತಿಯಾಗಿ ದೇಶವನ್ನು ಮುನ್ನಡೆಸಿಕೊಂಡು ಹೋಗಿದ್ದಾರೆ ಎನ್ನುವುದು ಪ್ರತಿಯೊಬ್ಬ ಜನಸಾಮಾನ್ಯರಿಗೆ ತಿಳಿಸಬೇಕು ಎಂದರು.

ಬಾಗಲಕೋಟೆ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಚಿದಾನಂದ ಚಲವಾದಿ ಮಾತನಾಡಿದರು. ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಬೆಳಗಾವಿ ವಿಭಾಗದ ಸಹ ಪ್ರಭಾರಿ ಬಸವರಾಜ ಯಂಕಂಚಿ, ಅನೀಲ ಜಮಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.