ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

ಚಿಂತಾಮಣಿ (ಜೂ.05): ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮಂತ್ರಿ ಮಂಡಲದಲ್ಲಿ ಹೊಸಮುಖಗಳಿಗೆ ಅವಕಾಶವಿಲ್ಲ. ಇರುವುದೆಲ್ಲ ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಕೈವಾರದ ರೆಸಾರ್ಟ್‌ನಲ್ಲಿ 2 ದಿನಗಳಿಂದ ಹಮ್ಮಿಕೊಂಡಿದ್ದ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ -2026 ಕಾರ್ಯಾಗಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ವಿವಿಧ ತಾಲೂಕುಗಳ ನಗರ, ಗ್ರಾಮಾಂತರ, ಎಸ್‌ಸಿ, ಎಸ್‌ಟಿ, ರೈತ ಮೋರ್ಚಾ, ಹಿಂದುಳಿದ ಮೋರ್ಚಾಗಳ ವಿವಿಧ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗ ರಚನೆಯಾಗಿರುವ ಸರ್ಕಾರದಲ್ಲಿ ಯಾವುದೇ ಹೊಸತನವಿಲ್ಲ. ಅದೇ ಹಳೆಯ ಲಾರಿಯಾಗಿದ್ದು ಕೇವಲ ನಂಬರ್ ಪ್ಲೇಟ್ ಬದಲಾಗಿದೆ. ಯಾವುದೇ ಅಭಿವೃದ್ಧಿ ಈಗಿನ ಹೊಸ ಮುಖ್ಯಮಂತ್ರಿಗಳಿಂದ ಸಾಧ್ಯವಿಲ್ಲ, ಏಕೆಂದರೆ ಅದೇ ನುಂಗಣ್ಣನವರು, ಅದೇ ಭಷ್ಟಾಚಾರ, ಅದೇ ಲೂಟಿಕೋರರ ಸರ್ಕಾರವಾಗಿದೆ. ಶೇ.50 ರಷ್ಟು ಮಹಿಳೆಯರಿರುವ ರಾಜ್ಯದಲ್ಲಿ ಒಬ್ಬ ಮಹಿಳೆಗೆ ಮಂತ್ರಿಮಂಡಲದಲ್ಲಿ ಸ್ಥಾನ ಕೊಡಲು ಸಾಧ್ಯವಾಗಿಲ್ಲವೆಂದರು,

ಬೋಗಸ್‌ ಗ್ಯಾರಂಟಿಗಳು: ಹೊಸದಾಗಿ ಗ್ಯಾರಂಟಿ ಘೋಷಣೆ ಮಾಡಿದ್ದು ಹಳೆ ಗ್ಯಾರಂಟಿಗಳನ್ನು ಸರಿಯಾಗಿ ನೀಡಲು ಸಾಧ್ಯವಾಗಿಲ್ಲ, ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ 5 ಸಾವಿರ ಕೋಟಿ, ಅನ್ನಭಾಗ್ಯ ಯೋಜನೆಯಲ್ಲಿ 700 ಕೋಟಿ, ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಸರ್ಕಾರ ಅಧಿಕಾರವನ್ನು ನಡೆಸಲು ಸಶಕ್ತವಾಗಿಲ್ಲ. ಗ್ಯಾರಂಟಿಗೆ ನಾಮ ಹಾಕುವ ಸರ್ಕಾರ ಇದಾಗಿದೆ. ಹೊಸ ಗ್ಯಾರಂಟಿಗಳು ಕೇವಲ ಬೋಗಸ್ ಗ್ಯಾರಂಟಿಗಳಾಗುತ್ತವೆ ಎಂದರು.

ಹೋರಾಟದ ಫಲ

ಹೈಕಮಾಂಡ್ ಅಣತಿಗೆ ತಕ್ಕಂತೆ ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕೇವಲ ರಾಜ್ಯದಿಂದ ಹಣವನ್ನು ಪಡೆಯಲು ಮಾತ್ರ ಡಿಕೆ ಶಿವಕುಮಾರ್‌ರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದು ವ್ಯಂಗ್ಯವಾಡಿದರು. ನಾವು ವಿಪಕ್ಷದಲ್ಲಿದ್ದ ಸಂದರ್ಭದಲ್ಲಿ ನಾವು ನಡೆಸಿದ ಹೋರಾಟದ ಫಲವಾಗಿ ನಾಗೇಂದ್ರ ಜೈಲು ಪಾಲಾದರು, ಮುಡಾ ಹಗರಣದಲ್ಲಿ 14 ನಿವೇಶನಗಳು ವಾಪಸು ಪಡೆಯಲಾಯಿತು, ಮೈಸೂರಿನ ಸಿಲ್ಕ್ ಕಾರ್ಖಾನೆ ಮರುಉತ್ಪಾದನೆಗೆ ಸಹಕಾರವಾಯಿತು ಇವೆಲ್ಲವೂ ನಮ್ಮ ಹೋರಾಟದ ಫಲವಾಗಿದೆ. ನಮ್ಮ ಹೋರಾಟ ಫಲವೇ 2028 ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.