ದಕ್ಷಿಣ ಕನ್ನಡದ ಕೇಪು ಗ್ರಾಮದಲ್ಲಿ ನಡೆದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಾಸಕ ಅಶೋಕ್ ಕುಮಾರ್ ರೈ ಸೇರಿ 26 ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಬೆಂಗಳೂರು (ನ.5): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೇಪು ಗ್ರಾಮದಲ್ಲಿ ನಡೆದಿದ್ದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಹಾಗೂ ಇತರರಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಬಿಗ್ ರಿಲೀಫ್ ನೀಡಿದೆ: ಶಾಸಕರು ಸೇರಿದಂತೆ ಒಟ್ಟು 26 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಾಗೂ ಕಾನೂನು ಪ್ರಕ್ರಿಯೆಗಳನ್ನು ನ್ಯಾಯಾಲಯ ಸಂಪೂರ್ಣವಾಗಿ ರದ್ದುಗೊಳಿಸಿ (Quashed) ಆದೇಶ ಹೊರಡಿಸಿದೆ.
ಡಿಸೆಂಬರ್ 2025 ರಲ್ಲಿ ಕೇಪು ಗ್ರಾಮದ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಮುರಳೀಧರ ರೈ ಎಂಬುವರ ಗದ್ದೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕವನ್ನು ಆಯೋಜಿಸಲಾಗಿತ್ತು. ಕೋಳಿ ಅಂಕಕ್ಕೆ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ವಿಟ್ಲ ಠಾಣೆಯ ಪೊಲೀಸರು ದಾಳಿ ನಡೆಸಿ, ಕೋಳಿ ಅಂಕಕ್ಕೆ ತಡೆಯೊಡ್ಡಿದ್ದರು.
ಸ್ಥಳಕ್ಕೆ ಧಾವಿಸಿ ಪೊಲೀಸರನ್ನು ಪ್ರಶ್ನಿಸಿದ್ದ ಶಾಸಕ ಅಶೋಕ್ ರೈ
ಪೋಲಿಸರು ಅಡ್ಡಿಪಡಿಸುತ್ತಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ, ಜನರ ಪರವಾಗಿ ನಿಂತು ಪೊಲೀಸರನ್ನು ನೇರವಾಗಿ ಪ್ರಶ್ನಿಸಿದ್ದರು. 'ಇದು ಯಾವುದೇ ಜೂಜು ಅಲ್ಲ. ಬೆಟ್ಟಿಂಗ್ ಹಾಗೂ ಕುದುರೆ ರೇಸ್ಗಳಂತಹ ಕ್ರೀಡೆಗಳಿಗೇ ಅನುಮತಿ ನೀಡಲಾಗುತ್ತದೆ. ಆದರೆ ಕರಾವಳಿಯ ತುಳುನಾಡಿನಲ್ಲಿ ಕೋಳಿ ಅಂಕ ಎಂಬುದು ದೈವಾರಾಧನೆಗೆ ಹಾಗೂ ಧಾರ್ಮಿಕ ಪರಂಪರೆಗೆ ಸಂಬಂಧಿಸಿದ ಸಾಂಪ್ರದಾಯಿಕ ಕ್ರೀಡೆಯಾಗಿದೆ. ದೈವಸ್ಥಾನದ ಉತ್ಸವದ ಭಾಗವಾಗಿ ನಡೆಯುತ್ತಿರುವ ಕೋಳಿ ಅಂಕವನ್ನು ನಡೆಸಿದರೆ ತಪ್ಪೇನು?' ಎಂದು ಪ್ರಶ್ನಿಸಿ, ಕೋಳಿ ಅಂಕವನ್ನು ಮುಂದುವರಿಸಲು ಜನರಿಗೆ ಪ್ರೇರೇಪಿಸಿದ್ದರು.
ಆದರೆ, ಕಾನೂನಾತ್ಮಕವಾಗಿ ಪೂರ್ವಾನುವಮತಿ ಇಲ್ಲದ ಕಾರಣ ವಿಟ್ಲ ಪೊಲೀಸ್ ನಿರೀಕ್ಷಕರು ಸ್ಥಳದಲ್ಲಿ ಭದ್ರತೆ ಏರ್ಪಡಿಸಿ 6 ಜನರನ್ನು ವಶಕ್ಕೆ ಪಡೆದು, 22 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳುಗಳನ್ನು (ಕತ್ತಿ) ವಶಕ್ಕೆ ಪಡೆದುಕೊಂಡಿದ್ದರು.
ಪೋಲೀಸರಿಂದ ಭಾರಿ ಪ್ರಕರಣ ದಾಖಲು (FIR)
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಕಾನೂನುಬಾಹಿರವಾಗಿ ಕೋಳಿ ಅಂಕ ನಡೆಸಲು ಜನರಿಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ, ಶಾಸಕ ಅಶೋಕ್ ರೈ ಹಾಗೂ ಜಾಗದ ಮಾಲೀಕ ಮುರಳೀಧರ ರೈ ಸೇರಿದಂತೆ ಒಟ್ಟು 16 ರಿಂದ 26 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 190/2025 ರಂತೆ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 189(2), 49, 221, 223, 190 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆ-1960 (PCA Act) ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಶಾಸಕರು ಕರಾವಳಿಯ ಸಾಂಪ್ರದಾಯಿಕ ಆಚರಣೆ ಮತ್ತು ಜನರ ಪರವಾಗಿ ಧೈರ್ಯವಾಗಿ ನಿಂತಿದ್ದಾರೆ ಎಂದು ಒಂದು ವರ್ಗ ಬೆಂಬಲಿಸಿದರೆ, ಮತ್ತೊಂದೆಡೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸರಿಯೇ ಎಂಬ ಪ್ರಶ್ನೆಗಳು ಎದ್ದಿದ್ದವು.
ಹೈಕೋರ್ಟ್ನಿಂದ ರದ್ದಾಯ್ತು ಎಫ್ಐಆರ್
ಈ ಎಫ್ಐಆರ್ ಹಾಗೂ ಕಾನೂನು ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸಾಂಪ್ರದಾಯಿಕ ಧಾರ್ಮಿಕ ಹಿನ್ನೆಲೆಯ ಈ ಪ್ರಕರಣದಲ್ಲಿ ಶಾಸಕ ಅಶೋಕ್ ರೈ ಸೇರಿದಂತೆ ಎಲ್ಲಾ 26 ಆರೋಪಿಗಳ ಮೇಲಿದ್ದ ಎಫ್ಐಆರ್ ಹಾಗೂ ಎಲ್ಲಾ ಕಾನೂನು ಕ್ರಮಗಳನ್ನು ರದ್ದುಗೊಳಿಸಿ (Quash) ತೀರ್ಪು ನೀಡಿದೆ. ಹೈಕೋರ್ಟ್ನ ಈ ಆದೇಶದಿಂದಾಗಿ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕೋಳಿ ಅಂಕದ ವಿಷಯದಲ್ಲಿ ಶಾಸಕ ಅಶೋಕ್ ರೈ ಅವರ ಹೋರಾಟಕ್ಕೆ ನೈತಿಕ ಹಾಗೂ ನ್ಯಾಯಾಂಗದ ದೊಡ್ದ ಜಯ ಸಿಕ್ಕಂತಾಗಿದ್ದು, ಪುತ್ತೂರು ಕ್ಷೇತ್ರದ ಕಾರ್ಯಕರ್ತರು ಹಾಗೂ ದೈವಾರಾಧಕರಲ್ಲಿ ಹರ್ಷ ವ್ಯಕ್ತವಾಗಿದೆ.






