ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಒತ್ತಾಯಿಸಿ ರೈಲು ಬಳಕೆದಾರರ ಸಮಿತಿಗಳು ಆನ್‌ಲೈನ್ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿವೆ. ಪ್ರಸ್ತಾವಿತ ತಾತ್ಕಾಲಿಕ ನಿಲುಗಡೆ ಪಟ್ಟಿಯಲ್ಲಿ ಪುತ್ತೂರನ್ನು ಸೇರಿಸದಿರುವುದು ಈ ಅಭಿಯಾನಕ್ಕೆ ಕಾರಣವಾಗಿದೆ.
ಮಂಗಳೂರು: ವಂದೇ ಭಾರತ್ ರೇಕ್ (ರೈಲು ಬೋಗಿಗಳು) ಮಂಗಳೂರಿಗೆ ಯಶಸ್ವಿಯಾಗಿ ತಲುಪಿದ ನಂತರ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಸಂಚಾರ ಆರಂಭಿಸುವ ನಿರೀಕ್ಷೆಯಿದೆ. ಆದರೆ ಪ್ರಸ್ತುತ ಪ್ರಸ್ತಾಪಿಸಲಾದ ನಿಲುಗಡೆ ತಾತ್ಕಾಲಿಕ ಪಟ್ಟಿಯಲ್ಲಿ ಕಬಕ- ಪುತ್ತೂರು ರೈಲು ನಿಲ್ದಾಣವನ್ನು ಸೇರಿಸಲಾಗಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಜಾಲತಾಣದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಶುಕ್ರವಾರ ಮಧ್ಯಾಹ್ನ 1.30 ರಿಂದ ಆರಂಭಿಸಿ ಆ. 24ರ ರಾತ್ರಿ 12 ಗಂಟೆ ವರೆಗೆ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.
‘ಪುತ್ತೂರು, ಸುಳ್ಯ, ಉಪ್ಪಿನಂಗಡಿ, ವಿಟ್ಲ, ಬೆಳ್ಳಾರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ನಿತ್ಯ ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಕಬಕ- ಪುತ್ತೂರಿನಲ್ಲಿ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಬೇಕು ಎಂದು ಒತ್ತಾಯಿಸಿ ನಾವು ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ’ ಎಂದು https://www.change.org/KabakaPutturVandeBharat ಹ್ಯಾಷ್‌ಟ್ಯಾಗ್ ಮೂಲಕ ವಿನಂತಿಸಲಾಗಿದೆ.
ಅರಸೀಕೆರೆಯಲ್ಲಿ ವಂದೇ ಭಾರತ್ ನಿಲುಗಡೆಗೆ ಆಗ್ರಹ
ಅರಸೀಕೆರೆ: ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರಕ್ಕೆ ರೈಲ್ವೆ ಸಂಪರ್ಕದ ಮತ್ತಷ್ಟು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಂದೇ ಭಾರತ್ ರೈಲಿಗೆ ನಗರದ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಹಾಗೂ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರುದ್ರಾಕ್ಷ ಫೌಂಡೇಶನ್ ಆಶ್ರಯದ ಸಮರ್ಪಣಾ ಮತ್ತು ಸಂಕಲ್ಪ ಸಂಸ್ಥೆಗಳ ಪದಾಧಿಕಾರಿಗಳು ರೈಲು ನಿಲ್ದಾಣದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರುದ್ರಾಕ್ಷ ಫೌಂಡೇಶನ್ ಅಧ್ಯಕ್ಷ ಜಯಪ್ರಕಾಶ್ ಗುರೂಜಿ ಮಾತನಾಡಿ, ಅರಸೀಕೆರೆಯಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ವಿವಿಧೆಡೆಗೆ ಪ್ರಯಾಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲಿಗೆ ಇಲ್ಲಿ ನಿಲುಗಡೆ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಹೇಳಿದರು.
ನಿಲುಗಡೆ ಕಲ್ಪಿಸುವ ಕುರಿತು ರೈಲ್ವೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ನಿಲುಗಡೆ ದೊರೆತಲ್ಲಿ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವಿವಿಧ ಕಾರ್ಯಗಳಿಗಾಗಿ ರಾಜ್ಯದ ಬೇರೆ ಬೇರೆ ನಗರಗಳಿಗೆ ತೆರಳುವ ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ ಎಂದು ಮನವಿ ಮಾಡಿದರು.
ನಗರದ ರೈಲು ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಕ್ಕೆ ಆದ್ಯತೆ ನೀಡಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ರೈಲ್ವೆ ಸ್ಟೇಷನ್ ಮ್ಯಾನೇಜರ್ ಮೂಲಕ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಸಮರ್ಪಣಾ ಸಂಸ್ಥೆ ಅಧ್ಯಕ್ಷೆ ವನಜಾಕ್ಷಿ ವಿಜಯಕುಮಾರ್, ಸಂಕಲ್ಪ ಸಂಸ್ಥೆ ಸಂಚಾಲಕಿ ಸರೋಜಮ್ಮ, ಶಾಂತಮ್ಮ ರಾಮಚಂದ್ರು, ರಾಜಣ್ಣ ಪುಟ್ಟಸ್ವಾಮಿ, ಆಶಾ, ಶಾಂತಮ್ಮ, ಮೀನಾಕ್ಷಮ್ಮ ಸೇರಿದಂತೆ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.


