*  ಅಭಿಮಾನಿಗಳ ಮನದಲ್ಲಿ ಪುನೀತ್‌ ರಾಜಕುಮಾರ್ ಅಜರಾಮರ*  ಮದುವೆ ಬರ್ತಿನಿ ಎಂದು ಅಭಿಮಾನಿಗೆ ಹೇಳಿದ್ದರಂತೆ ಪುನೀತ್*  ಅಪ್ಪು ನೆನಪಲ್ಲಿ ಕಟೌಟ್‌ ಅವರ ನಿಲ್ಲಿಸಿ ಮದುವೆಯಾದ ಅಭಿಮಾನಿ 

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಮೇ.11): ಅಪ್ಪು ಕೋಟಿ ಕೋಟಿ ಅಭಿಮಾನಿಗಳನ್ನ ಅಗಲಿ ವರ್ಷವೇ ಆಗುತ್ತಲಿದೆ. ಆದ್ರೆ ಅವರ ಅಭಿಮಾನಿಗಳ ಪಾಲಿಗೆ ಅಪ್ಪು ಮಾತ್ರ ಇನ್ನೂ ಜೀವಂತವಾಗಿದ್ದಾರೆ. ಗುಮ್ಮಟನಗರಿ ವಿಜಯಪುರದ(Vijayapura) ಕಟ್ಟಾ ಅಭಿಮಾನಿಯೊಬ್ರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡ್ತಿರೋ ಘಳಿಗೆಯಲ್ಲೂ ಅಪ್ಪು ಕಟೌಟ್ ಸಾಕ್ಷಿಯಾಗಿವೆ. ನಿಮ್ಮ ಮದುವೆಗೆ ಬರ್ತಿನಿ ಎಂದಿದ್ದ ಅಪ್ಪು ನೆನಪಲ್ಲೇ ಅಭಿಮಾನಿ ವಿಶಿಷ್ಟ ರೀತಿಯಲ್ಲಿ ಮದುವೆ ಮಾಡಿಕೊಂಡಿದ್ದಾನೆ.

ಅಪ್ಪು ಕಟೌಟ್‌ ನಿಲ್ಲಿಸಿ ಮದುವೆಯಾದ ಅಭಿಮಾನಿ

ಕಟ್ಟಾ ಅಪ್ಪು ಅಭಿಮಾನಿಯೊಬ್ಬ ವಿಜಯಪುರದಲ್ಲಿಂದು ವಿಶೇಷವ ರೀತಿಯಲ್ಲಿ ಮದುವೆಯಾಗಿದ್ದಾನೆ(Marriage). ತನ್ನ ಮದುವೆ ಸ್ಟೇಜ್ ಮೇಲೆ ಅಪ್ಪುವಿನ ಬೃಹತ್ ಭಾವಚಿತ್ರಗಳ ಕಟೌಟ್ ಹಾಕಿ ಮದುವೆಯಾಗಿರೋದು ವಿಶೇಷವಾಗಿತ್ತು. ವಿಜಯಪುರ ನಗರ ನಿವಾಸಿ ಬಸವರಾಜ ಕಕ್ಕಳಮೇಲಿ(Basavaraj Kakkalameli) ಎಂಬುವವರೇ ಪವರ್ ಸ್ಟಾರ್ ಪುನೀತರಾಜಕುಮಾರ್(Puneeth Rajkumar) ಕಟ್ಟಾ ಅಭಿಮಾನಿಯಾಗಿದ್ದಾರೆ. ಮೊದಲಿನಿಂದಲೂ ಕಟ್ಟಾ ಅಭಿಮಾನಿಯಾಗಿರೋ ಬಸವರಾಜ್ ಪುನೀತ್‌ ರಾಜಕುಮಾರರ ಕಟೌಟ್‌ ನಿಲ್ಲಿಸಿ ಮದುವೆಯಾಗಿದ್ದಾರೆ. ಸ್ಮೈಲಿ ಪೋಸ್‌ ನಲ್ಲಿದ್ದ ಅಪ್ಪು ಪೋಟೋಗಳನ್ನ ನೋಡಿದ ಪ್ರತಿಯೊಬ್ಬರು ಭಾವುಕರಾಗಿದ್ದು ವಿಶೇಷ. 

ಈಜುವ ಬೆಟ್ಟಿಂಗ್ ಕಟ್ಟಿ ಇಹಲೋಕ ತ್ಯಜಿಸಿದ ಆಸಾಮಿ: ಬೆಟ್ಟಿಂಗ್ ನೆಪದಲ್ಲಿ ಕೊಂದೆ ಬಿಟ್ಟರಾ ಗೆಳೆಯರು?

ಅಂದು ಪೋನ್‌ ಮಾಡಿ ಮದುವೆ ಬರ್ತೀನಿ ಎಂದಿದ್ದ ಅಪ್ಪು

2006ರಲ್ಲಿ ನಗುಮುಖದ ಒಡೆಯ ಪುನೀತ್‌ ರಾಜಕುಮಾರರನ್ನ ಬಸವರಾಜ್‌ ಭೇಟಿಯಾಗಿದ್ರಂತೆ. ಅಂದಿನಿಂದಲೂ ಸಹ ಅಪ್ಪುವಿನ ಫೋನ್ ಸಂಪರ್ಕದಲ್ಲಿ ಇದ್ರಂತೆ. ಅಪ್ಪು ಅಭಿಮಾನಿಗಳ ಜೊತೆಗೆ ಅದೆಷ್ಟು ನಿಕಟ ಸಂಪರ್ಕದಲ್ಲಿ ಇರ್ತಿದ್ರು ಅನ್ನೋದಕ್ಕೆ ಇದೆ ಬಸವರಾಜ್‌ ಉದಾಹರಣೆ. ಕಳೆದ ವರ್ಷ ಜೂನ್ ನಲ್ಲಿ ಬಸವರಾಜ ಬರ್ತಡೆ ದಿನ ಸ್ವತಃ ಅಪ್ಪು ಅವರೇ ತಮ್ಮ ಕಟ್ಟಾ ಅಭಿಮಾನಿ ಬಸವರಾಜ್‌ ಗೆ ಕರೆಮಾಡಿ ವಿಶ್ ಮಾಡಿದ್ರಂತೆ. ಜೊತೆಗೆ ಮದುವೆಯಾವಾಗ ಅಂತೆಲ್ಲ ವಿಚಾರಿಸಿದ್ದರಂತೆ. ಮದುವೆ ಸಮಯದಲ್ಲಿ ಹೇಳಿ, ನಿಮ್ಮ ಮದುವೆಗೆ ಬರ್ತೀನಿ ಎಂದು ಭರವಸೆಯನ್ನೂ ನೀಡಿದ್ರಂತೆ.

ಮೊದಲು ಅಪ್ಪು ಸಮಾಧಿ ಮೇಲೆ ಲಗ್ನಪತ್ರಿಕೆ ಇಟ್ಟು ಪೂಜೆ

ತಮ್ಮ ಮದುವೆ ನಿಶ್ಚಯ ಆದಕೂಡಲೇ ಲಗ್ನ ಪತ್ರಿಕೆಯ ಜೊತೆಗೆ ನೇರವಾಗಿ ತೆರಳಿದ್ದು ಅಪ್ಪು ಸಮಾಧಿ(Grave) ಕಡೆಗೆ. ಮದುವೆಯ ಮೊದಲ ಕಾರ್ಡ್ ನ್ನ ಅಪ್ಪುವಿನ ಸಮಾಧಿ ಮೇಲೆ ಇರಿಸಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕಣ್ಣಂಚಲ್ಲಿ ನೀರು ತಂದ ಅಭಿಮಾನಿ ಬಸವರಾಜ್‌ ರನ್ನ ಯುವರಾಜಕುಮಾರ ಸಂತೈಸಿದ್ದರಂತೆ. ಇಂದು ಮದುವೆಗೆ ಬಂದಿದ್ದವರೆಲ್ಲರಿಗೂ ಅಪ್ಪು ಭಾವಚಿತ್ರ ನೋಡಿ, ಪುನೀತ್ ಇಲ್ಲೇ ನಮ್ಮ ಜೊತೆಗೆ ಇದ್ದಾರೆ ಅನ್ನೋ ಭಾವನೆ ಮೂಡಿಬಂದಿತ್ತು.

Vijayapura: ಇಡೀ ದಿನ ಕರೆಂಟ್‌ ಇಲ್ಲದೆ ಪರದಾಡಿದ ವಿಜಯಪುರ ಜನ!

ಅಪ್ಪು ನೆನಪಲ್ಲೆ ನೆರವೇರಿದ ಅಭಿಮಾನಿ ಮದುವೆ

ಅಪ್ಪು ಮದುವೆ ಬರ್ತಿನಿ ಅಂದಿದ್ದರು, ವಿಧಿ ಆಟ ಮಾತ್ರ ಹಾಗಾಗಿರಲಿಲ್ಲ. ಹೀಗಾಗಿ ಅಪ್ಪು ಇಲ್ಲ ಅನ್ನೋ ಕೊರಗು ಕಾಡಬಾರದು, ಅವರು ನಮ್ಮ ಜೊತೆಗಿದ್ದಾರೆ ಅನ್ನೋ ಭಾವನೆಯಿಂದ ಅವರ ಭಾವಚಿತ್ರದ ಎದುರು ಹಸೆಮಣೆ ಏರಿದ್ದಾರೆ. ದೊಡ್ಡ ದೊಡ್ಡ ಕಟೌಟ್‌ ಗಳನ್ನ ಮದುವೆ ವೇದಿಕೆ ಮೇಲಿಟ್ಟು ಅಪ್ಪು ಆಶೀರ್ವಾದದ ಜೊತೆಗೆ ಮದುವೆಯಾಗಿದಾರೆ. ಇನ್ನು ಮ್ಯಾರೇಜ್ ಹಾಲ್ ತುಂಬೆಲ್ಲ ಪುನೀತ್ ಅವರ ಹಾಡುಗಳ ಹವಾ ಜೋರಾಗಿತ್ತು. ಗೊಂಬೆ ಹೇಳುತೈತೆ.. ಬಾನದಾರಿಯಲ್ಲಿ ಸೂರ್ಯ ಜಾರಿದ.. ಸೇರಿದಂತೆ ಅಪ್ಪು ಹಾಡುಗಳೇ ಮದುವೆಯಲ್ಲಿ ಮೇಳೈಸಿದ್ದವು..!

ಅಪ್ಪು ಸಿನಿಮಾದ ಮೊದಲ ಟಿಕೇಟ್‌, ಮೊದಲ ಶೋ

ಬಂಗಾರದ ಮನುಷ್ಯ ಸೇರಿದಂತೆ ಪುನೀತ ರಾಜಕುಮಾರ್ ಅವರ ಯಾವುದೇ ಚಿತ್ರ ಬಿಡುಗಡೆಯಾದಾಗಲೂ ಮೊದಲ ಶೋ ನೋಡಿ ಸಂಭ್ರಮಿಸುತ್ತಿದ್ರು. ಪುನೀತ್ ಇನ್ನಿಲ್ಲ ಅಂದಾಗ ಅಕ್ಷರಶಃ ಕುಗ್ಗಿ ಹೋಗಿದ್ರು. ಈಗ ತನ್ನ ಆರಾಧ್ಯ ದೈವನಿಗೆ ಬಸವರಾಜ್‌ ಕಟೌಟ್‌ ನಿಲ್ಲಿಸಿ ಮದುವೆಯಾಗಿ ಮನದಲ್ಲಿ ಅಪ್ಪುರನ್ನ ಅಮರವಾಗಿಸಿಕೊಂಡಿದ್ದಾರೆ.