ವಿಜಯಪುರ ಅಂದ್ರೆನೆ ಬಿಸಿಲ ನಗರಿ, ಬೇಸಿಗೆ ಬಂದ್ರೆ 42 ಡಿಗ್ರಿವರೆಗು ತಾಪಮಾನ ದಾಖಲಾಗುತ್ತೆ. ಇಂಥ ಬೇಸಿಗೆ ಧಗೆಯಿಂದ ಪುಟಾಣಿ ಮಕ್ಕಳು, ನವಜಾತ ಶಿಶುಗಳು, ವೃದ್ಧರು, ಗರ್ಭಿಣಿಯರ ಪಾಡು ಹೇಳತೀರದು. 

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ‌ ನ್ಯೂಸ್, ವಿಜಯಪುರ 

ವಿಜಯಪುರ (ಮೇ.08): ವಿಜಯಪುರ (Vijayapura) ಅಂದ್ರೆನೆ ಬಿಸಿಲ ನಗರಿ, ಬೇಸಿಗೆ ಬಂದ್ರೆ 42 ಡಿಗ್ರಿವರೆಗು ತಾಪಮಾನ ದಾಖಲಾಗುತ್ತೆ. ಇಂಥ ಬೇಸಿಗೆ (Summer) ಧಗೆಯಿಂದ ಪುಟಾಣಿ ಮಕ್ಕಳು, ನವಜಾತ ಶಿಶುಗಳು, ವೃದ್ಧರು, ಗರ್ಭಿಣಿಯರ ಪಾಡು ಹೇಳತೀರದು ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ಬಹುತೇಕರು ಫ್ಯಾನ್‌, ಕೂಲರ್‌, ಎಸಿ ಮೊರೆ ಹೋಗೋದು ಕಾಮನ್‌ ಆದ್ರೆ ಇಂಥ ಟೈಂನಲ್ಲಿ ಕರೆಂಟ್‌ (Power) ಕೈಕೊಟ್ಟರೇ ಏನಾಗಬಾರದು ಹೇಳಿ.

ಇಡೀ ದಿನ ಕರೆಂಟ್‌ ಇಲ್ಲದೆ ಪರದಾಡಿದ ಜನ: ವಿಜಯಪುರ ಇಡಿ ದಿನ ಕರೆಂಟ್‌ ಇಲ್ಲದೆ ಜನರು ಬಳಲಿ ಬೆಂಡಾಗಿದ್ದಾರೆ. ಮೊದಲೇ ಬಿಸಿಲು, ಮನೆಯಲ್ಲಿದ್ರು ಕಾಡುವ ಧಗೆ. ಹೀಗಾಗಿ ಪ್ರತಿ ಮನೆಯಲ್ಲು ಫ್ಯಾನ್‌, ಕೂಲರ್‌ ಬಳಕೆ ಮಾಡಿ ಕೊಂಚ ಮಟ್ಟಿಗೆ ಬಿಸಿಲ ಧಗೆಯಿಂದ ತಪ್ಪಿಸಿಕೊಳ್ತಾರೆ. ಆದ್ರೆ ವಿಜಯಪುರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇಡೀ ದಿನ ಕರೆಂಟ್‌ ಇಲ್ಲದೆ ಜನರು ಪರದಾಡಿದ್ದಾರೆ. ಬಿಸಿಲ ತಾಪಕ್ಕೆ ಅಯ್ಯೋ ಶಿವನೇ ಎಂದು ಗೋಳಾಡಿದ್ದಾರೆ.

Vijayapura: ವಿಶ್ವವಿಖ್ಯಾತ ಗೋಳಗುಮ್ಮಟದಲ್ಲಿ ಜೈ ಶ್ರೀರಾಮ್‌ ಘೋಷಣೆ: ಶುರುವಾದ ಹೊಸ ವಿವಾದ

ಮನೆಯಿಂದ ಅಂಗಳಕ್ಕೆ ಶಿಫ್ಟ್‌ ಆದ ಜನ: ಮಧ್ಯಾಹ್ನದ ಬಿಸಿಲು ಏರುತ್ತಿದ್ದಂತೆ ಮನೆಯ ಒಳಗೂ ಧಗೆ ಏರೋದಕ್ಕೆ ಶುರುವಾಗಿದೆ. ಕರೆಂಟ್‌ ಇಲ್ದೆ ಇರೋದ್ರಿಂದ ಫ್ಯಾನ್‌, ಕೂಲರ್‌, ಎಸಿಗಳು ಇದ್ದು ಇಲ್ಲದಂತೆ ಜನರಿಗೆ ಭಾಸವಾಗಿವೆ. ಇನ್ನು ಮನೆಯ ಒಳಗೆ ಕೂರೋಕೆ ಆಗದೇ ಬಹುತೇಕ ಜನರು ಅಂಗಳಕ್ಕೆ ಶಿಪ್ಟ್‌ ಆಗಿದ್ದಾರೆ. ಆದ್ರೆ ವಿಜಯಪುರ ನಗರ ಸೇರಿದಂತೆ ತಾಲೂಕಾ ಕೇಂದ್ರಗಳಲ್ಲಿ ಜನರು ಒಳಗೂ ಕೂರಲಾಗದೇ, ಹೊರಗು ಹೋಗಿ ಕೂರಲಾಗದೆ ಪರದಾಡಿದ್ದಾರೆ.

ಶಿಶುಗಳನ್ನ ಸಂತೈಸಲು ಪರದಾಡಿದ ಅಮ್ಮಂದಿರು: ಇಡೀ ದಿನ ಕರೆಂಟ್‌ ಇಲ್ಲದೆ ಇದ್ದಿದ್ದರಿಂದ ಫ್ಯಾನ್‌, ಕೂಲರ್‌, ಎಸಿಗಳು ಬಂದ್‌ ಆಗಿದ್ವು. ಬಿಸಿಲ ತಾಪ ತಾಳಲಾರದೆ ಮಕ್ಕಳು, ವೃದ್ಧರ ಪಟ್ಟ ಪಾಡು ಅಯ್ಯೋ ಪಾಪ ಎನ್ನುವಂತಾಗಿತ್ತು. ಅದರಲ್ಲು ನವಜಾತ ಶಿಶುಗಳು, ಪುಟಾಣಿ ಮಕ್ಕಳು ಕಿರುಚಾಡಿ ಅಳುತ್ತಿದ್ದ ದೃಶ್ಯಗಳು ಮನೆಗಳಲ್ಲಿ ಸಾಮಾನ್ಯವಾಗಿತ್ತು. ಮಕ್ಕಳನ್ನ ಸಂತೈಸಲು ತಾಯಂದಿರು ಮಕ್ಕಳನ್ನ ಮನೆಯಿಂದ ಹೊರಗೆ ತಂದು ಅಂಗಳಲ್ಲಿ ಕೂತು ಸಮಾಧಾನ ಪಡೆಸಿದ್ದಾರೆ. ಬಿಸನಿಕೆಯಿಂದ ಬೀಸಿ ಸಮಾಧಾನ ಪಡೆಸಲು ಹರಸಾಹಸವನ್ನೆ ಪಟ್ಟಿದ್ದಾರೆ. ಇನ್ನು ಅನಾರೋಗ್ಯದಿಂದ ಮನೆಯಲ್ಲಿ ಹಾಸಿಗೆ ಹಿಡಿದ ವೃದ್ಧರ ಪಾಡು ಅಯೋಮಯ ಎನ್ನುವಂತಾಗಿತ್ತು.

ಬೆಳಿಗ್ಗೆ ಹೋದ ಕರೆಂಟ್‌ ಬಂದಿದ್ದು ಮುಸ್ಸಂಜೆ: ಬೆಳಿಗ್ಗೆ ಸರಿಯಾಗಿ 8 ಗಂಟೆ ಸುಮಾರಿಗೆ ಕರೆಂಟ್‌ ಕಟ್‌ ಮಾಡಲಾಗಿತ್ತು. ಸಂಜೆ 4 ಗಂಟೆಗೆ ಕರೆಂಟ್‌ ವಾಪಾಸ್‌ ಬರುತ್ತೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದ್ರೆ ಕರೆಂಟ್‌ ವಾಪಾಸ್‌ ಬಂದಿದ್ದು ಸಂಜೆ 6.20ಕ್ಕೆ. ಇಡೀ ದಿನ 10 ತಾಸುಗಳ ಕಾಲ ಕರೆಂಟ್‌ ಇಲ್ಲದೆ ಜನರು ಅಕ್ಷರಶಃ ಪರದಾಡಿದರು.

ಮೌಲ್ಯಾಧಾರಿತ ರಾಜಕಾರಣಿ, ವಿಜಯಪುರದ ಮೊದಲ ಸಂಸದ ರಾಮಪ್ಪ ಬಿದರಿ ಗ್ರಂಥ ಬಿಡುಗಡೆ!

10 ಗಂಟೆ ಕರೆಂಟ್‌ ಹೋಗಿದ್ಯಾಕೆ?: ಕರೆಂಟ್‌ ಹೋಗಿದ್ದು ಕೂಡ ಏಕಾಏಕಿ ಏನಲ್ಲ. ಕರೆಂಟ್‌ ಪುರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ದಿನಾಂಕ 6 ರಂದೆ ಹೆಸ್ಕಾಂ ಮಾಹಿತಿ ನೀಡಿತ್ತು. ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗು ತಾಂತ್ರಿಕ ಕಾರಣಗಳಿಂದ ಕರೆಂಟ್‌ ಪೂರೈಕೆಯಾಗೊಲ್ಲ. ಜನರು ಸಹಕರಿಸಬೇಕು ಅಂತ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು. 220 ಕೆವಿ ಇಂಡಿ ಲೈನ್‌ 1 & 2, 110 ಕೆವಿ ಮತ್ತು ಕೆಐಎಡಿಬಿ ಕೇಂದ್ರಗಳ ಅಡಿಯಲ್ಲಿ ಬರುವ ನಗರ/ಗ್ರಾಮೀಣ/ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 11 ಕೆವಿ ಮಾರ್ಗಗಳ ವ್ಯಾಪ್ತಿಯ, 15 ವಿದ್ಯುತ್‌ ಕೇಂದ್ರಗಳಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.