ನಾನು ರಾಜಕೀಯ ಪ್ರವೇಶ ಮಾಡಿರುವುದೇ ಈ ಉದ್ದೇಶದಿಂದ ಹೀಗೆಂದು ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ಹೇಳಿದ್ದಾರೆ. 

ಹೊಸಕೋಟೆ (ಸೆ.14):  ದೇವರು ನನಗೆ ಸಾಕಷ್ಟುಆಸ್ತಿ, ಅಂತಸ್ತು ಎಲ್ಲವನ್ನೂ ನೀಡಿದ್ದು, ಜನಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಹೊರತು ಹಣ ಮಾಡಲು ಅಲ್ಲ. ಹಣ ಮಾಡುವ ಆಸೆಯೂ ನನಗಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ತಿಳಿಸಿದರು.

ತಾಲೂಕಿನ ತರಬಹಳ್ಳಿ ಗ್ರಾಮದಲ್ಲಿ ಆಯುಷ್ಮಾನ್‌ ಭಾರತ ಕಾರ್ಡ್‌ ವಿತರಣೆ ಹಾಗೂ ಸ್ವಾಭಿಮಾನ ಪಕ್ಷ ತೊರೆದ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಚ್ಚೇಗೌಡರ ಕುಟುಂಬ ಕೇವಲ ಲಾಭಕ್ಕಾಗಿ ರಾಜಕಾರಣ ಮಾಡುತ್ತಿದ್ದು, ಜೆಡಿಯು, ಜೆಡಿಎಸ್‌, ಬಿಜೆಪಿ ಸೇರಿದಂತೆ ಸ್ವಾಭಿಮಾನವಾಗಿ ಸ್ಪರ್ಧೆ ಮಾಡಿದ್ದಾಯ್ತು. ಈಗ ಕಾಂಗ್ರೆಸ್‌ ಕದತಟ್ಟಲು ಸನ್ನದ್ದರಾಗಿದ್ಧಾರೆ. ರಾಜಕೀಯವಾಗಿ ಹೊಸಕೋಟೆಗೆ ನಾನು ಪಾದಾರ್ಪಣೆ ಮಾಡಿದಾಗಿನಿಂದ ಈ ಗ್ರಾಮದಲ್ಲಿ ಮತದಾರರು ನಿರ್ಭೀತಿಯಿಂದ ಮತ ಚಲಾವಣೆ ಮಾಡುವಂತೆ ಆಗಿದೆ. ಅದಕ್ಕೂ ಮೊದಲು ಮೋಸದಿಂದ ಜನರನ್ನು ಬೆದರಿಸಿ ಬಚ್ಚೇಗೌಡರ ಬೆಂಬಲಿಗರು ಮತ ಹಾಕಿಕೊಳ್ಳುತ್ತಿದ್ದರು.

ಇವರು ತಾಲೂಕಿನಲ್ಲಿ ದಲಿತರ ಭೂಮಿ ಕಬಳಿಕೆ ಮಾಡಿರುವ ಹಗರಣಗಳ ದಾಖಲೆ ನನ್ನ ಬಳಿ ಇದೆ. ಅದರ ವಿರುದ್ಧ ಕಾನೂನು ಹೋರಾಟ ಕೂಡ ನಡೆಯುತ್ತಿದೆ. ಅತಿ ಜರೂರಾಗಿ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದ್ದು ಇವರ ಮುಖವಾಡ ಕಳಚಲಿದೆ. ಆದರೆ ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಾ ಕೆಣಕಿದರೆ, ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಎಂದು ಬಚ್ಚೇಗೌಡರ ಕುಟುಂಬದ ವಿರುದ್ಧ ಕಿಡಿಕಾರಿದರು.

ಶಿರಾ ಭಿನ್ನಮತ ಕಾಂಗ್ರೆಸ್‌ಗೆ ತಲೆನೋವು ...

ಸಚಿವನಾಗಿ ಮತ್ತಷ್ಟು ಅಭಿವೃದ್ಧಿ: ಸಿಎಂ ಬಿಎಸ್‌ವೈ ಅವರು ನನ್ನನ್ನು ಮಂತ್ರಿ ಮಾಡುವ ಭರವಸೆ ನೀಡಿದ್ಧಾರೆ. ಅಧಿವೇಶನಕ್ಕೂ ಮೊದಲೇ ಸಚಿವ ಸಂಪುಟ ವಿಸ್ತರಣೆ ಮಾಡುವ ಮುನ್ಸೂಚನೆ ಇದೆ. ಮಂತ್ರಿ ಆಗಿ ತಾಲೂಕನ್ನು ಮತ್ತಷ್ಟುಅಭಿವೃದ್ಧಿಪಡಿಸುತ್ತೇನೆ. ತರಬಹಳ್ಳಿ ಗ್ರಾಮಸ್ಥರಿಗೆ ನಿವೇಶನ ಹಂಚಲು 10 ಎಕರೆ ಜಾಗವನ್ನು ಗುರ್ತಿಸಿದ್ದು, ಮಂತ್ರಿ ಆದ ನಂತರ ಕಾರ್ಯಗತಗೊಳಿಸಿ ಪಕ್ಷಾತೀತವಾಗಿ ಬಡವರಿಗೆ ನಿವೇಶನ ಹಂಚಿಕೆ ಮಾಡುತ್ತೇನೆ. ಎಂದರು.

ಬಿಜೆಪಿ ತಾಲೂಕು ಮಾಜಿ ಕಾರ್ಯದರ್ಶಿ ಟಿ.ವೈ. ಮಂಜುನಾಥ್‌ ಮಾತನಾಡಿ, ತಾಲೂಕಿನಲ್ಲಿ ದಶಕಗಳ ಕಾಲ ಆಡಳಿತ ಮಾಡಿದವರು ಗ್ರಾಮವನ್ನು ಕಡೆಗಣಿಸಿ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದ್ದರು. ಆದರೆ ಎಂಟಿಬಿ ನಾಗರಾಜ್‌ ಅವರು ಶಾಸಕರಾದ ಮೇಲೆ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ಆದರೆ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಮುದಾಯದವರಿದ್ದು, ಸಾಕಷ್ಟುಕುಟುಂಬಗಳು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ಅವರನ್ನು ಗುರ್ತಿಸಿ ನಿವೇಶನ ನೀಡಿ, ಸೂರು ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಉಲ್ಟಾ ಹೊಡೆದು ಮತ್ತೊಂದು ಹುದ್ದೆಗೆ ಪಟ್ಟು ಹಿಡಿದ ಶಾಸಕ ..

ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಲಿಂಗಾಪುರ ಮಂಜು, ಮುಖಂಡರಾದ ತಿಂಡ್ಲು ಶಂಕರ್‌, ಮುನೇಗೌಡ, ಹೇಮಣ್ಣ, ಅರುಣ್‌ ಕುಮಾರ, ಚಂದ್ರಶೇಖರ್‌, ಗಿರೀಶ್‌, ಕಿರಣ್‌ಕುಮಾರ್‌, ಮಂಜು, ರಮೇಶ್‌ಬಾಬು, ಅಪ್ಪಯ್ಯ, ಕಾರ್ತಿಕ್‌ ಕುಮಾರ್‌, ರಾಜಪ್ಪ, ಮುನಿಕೃಷ್ಣ, ದೊಡ್ಡಬೀರಪ್ಪ, ಟಿ.ನಾಗರಾಜ್‌, ಮುರುಗೇಶನ್‌, ಜಯಂತ್‌, ಸುಧಾಕರ್‌, ಚಂದ್ರಶೇಖರ್‌, ಟಿ.ಎಂ.ಮುನಿಕೃಷ್ಣ, ಆಂಜಿ ಸೇರಿದಂತೆ ಹಲವರು ಹಾಜರಿದ್ದರು.