ಬೆಂಗಳೂರು (ಸೆ.14):  ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಕಳೆದುಕೊಂಡಿರುವ ಕ್ಷೇತ್ರವನ್ನು ಶತಾಯಗತಾಯ ಮತ್ತೆ ವಾಪಸು ತೆಕ್ಕೆಗೆ ಪಡೆಯಬೇಕು. ಆದರೆ, ಸ್ಥಳೀಯ ಕಾಂಗ್ರೆಸ್‌ ನಾಯಕರಲ್ಲಿ ಭಿನ್ನಮತ ಸ್ಪಷ್ಟವಾಗಿ ಗೋಚರಿಸುತ್ತಿದೆ. ಜತೆಗೆ ಬಿಜೆಪಿ ಹಾಗೂ ಜೆಡಿಎಸ್‌ ತನ್ನ ಚುನಾವಣೆ ಸಿದ್ಧತೆ ಶುರು ಮಾಡಿದೆ. ಹೀಗಾಗಿ ಆದಷ್ಟೂಬೇಗ ಬೆಂಗಳೂರಿನಲ್ಲಿ ಸ್ಥಳೀಯ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಬೇಕು ಎಂದು ನಿರ್ಧರಿಸಿದರು ಎನ್ನಲಾಗಿದೆ.

ಒಂದು ವಾರ ಯಾರೂ ಭೇಟಿಗೆ ಬರಬೇಡಿ: ಡಿ.ಕೆ. ಶಿವಕುಮಾರ್‌ ...

ಕೊರೋನಾ ಸೋಂಕಿನಿಂದ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್‌ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಪಟ್ಟಿರುವುದರಿಂದ ನೇರವಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ. ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರದಲ್ಲಿ ಮತ್ತೆ ನಮ್ಮ ಪಕ್ಷ ಗೆಲ್ಲಬೇಕು. ಅನುಕಂಪದ ಅಲೆ ಮೇಲೆ ಗೆಲ್ಲಲು ಯತ್ನಿಸುತ್ತಿರುವ ಜೆಡಿಎಸ್‌ಗೆ ಹಾಗೂ ಈಗಾಗಲೇ ಸರ್ಕಾರದ ಬೆಂಬಲದೊಂದಿಗೆ ಕಣಕ್ಕಿಳಿದಿರುವ ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಬಾರದು ಎಂದು ಚರ್ಚಿಸಿದರು.

AICCಗೆ ಮೇಜರ್ ಸರ್ಜರಿ: ಕರ್ನಾಟಕದ ನಾಯಕರಿಗೆ ಭರ್ಜರಿ..! ...

ತುಮಕೂರು ಜಿಲ್ಲೆಯ ಕಾಂಗ್ರೆಸ್‌ನ ಪ್ರಮುಖ ನಾಯಕ ಕೆ.ಎನ್‌. ರಾಜಣ್ಣ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ನಮ್ಮ ಸಂಭವನೀಯ ಅಭ್ಯರ್ಥಿ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಕರೆಸಿ ಇಬ್ಬರ ನಡುವಿನ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚಿಸಬೇಕು. ಇಲ್ಲದಿದ್ದರೆ ಕಳೆದ ಉಪ ಚುನಾವಣೆಗಳ ರೀತಿಯಲ್ಲೇ ಕೆಟ್ಟಫಲಿತಾಂಶವನ್ನು ಕಾಣಬೇಕಾಗುತ್ತದೆ. ಕಳೆದ ಚುನಾವಣೆಯಲ್ಲಿನ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು 20 ನಿಮಿಷಗಳ ಸಂಭಾಷಣೆಯಲ್ಲಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.