ಚಿಕ್ಕೋಡಿ (ಸೆ.14): ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಸ್ಥಾನ ಸ್ಥಾನ ಅಲಂಕರಿಸುವ ವಿಚಾರದಲ್ಲಿ ಬೆಳಗಾವಿ ಜಿಲ್ಲೆ ರಾಯಬಾಗದ ಶಾಸಕ ದುರ್ಯೋಧನ ಐಹೊಳೆ ಈಗ ಉಲ್ಟಾಹೊಡೆದಿದ್ದಾರೆ. ತಮಗೆ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಬಿಟ್ಟು ಬೇರಿನ್ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಅಧ್ಯಕ್ಷ ಸ್ಥಾನ ಸ್ವೀಕರಿಸಿಲ್ಲ, ನನಗೆ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಅಧ್ಯಕ್ಷ ಸ್ಥಾನ ಬೇಡ. ಈ ನಿಗಮದಲ್ಲಿ ಅನುದಾನ ಇಲ್ಲ, ಹೀಗಾಗಿ ಜನರ ಕೆಲಸ ಮಾಡಲೂ ಆಗಲ್ಲ. ಇದರ ಬದಲು ನಮ್ಮ ಭಾಗದ ಜನರಿಗಾಗಿ ಕೆಲಸ ಮಾಡುವ ಯಾವುದಾದರೂ ನಿಗಮ ಕೊಡಿ ಎಂದು ತಿಳಿಸಿದ್ದಾರೆ.

ಶಾಸಕ ದುರ್ಯೋಧನ ದರ್ಪ: ರಾತ್ರಿಯಿಡೀ ಬಯಲಲ್ಲೇ ಇದ್ದ ತಹಶೀಲ್ದಾರ್ ಭಜಂತ್ರಿ

ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನೇನು ಮಂತ್ರಿ ಸ್ಥಾನ ಕೊಡಿ ಎಂದು ಕೇಳಿಲ್ಲ. ಬೇರೆ ನಿಗಮ, ಮಂಡಳಿ ಕೊಡಿ ಎಂದಷ್ಟೇ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ. ನಾಲ್ಕು ದಿನ ಕಾಲಾವಕಾಶ ಕೊಡಿ ಎಂದು ಅವರು ಹೇಳಿದ್ದಾರೆ. ಹೀಗಾಗಿ ಇನ್ನೂ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಸ್ಥಾನ ಸ್ವೀಕರಿಸಿಲ್ಲ ಎಂದು ದುರ್ಯೋಧನ ಐಹೊಳೆ ತಿಳಿಸಿದ್ದಾರೆ.

ಈ ಹಿಂದೆ ಸರ್ಕಾರ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಘೋಷಣೆ ಮಾಡಿದಾಗ ದುರ್ಯೋಧನ ಐಹೊಳೆ ಸಂತಸ ವ್ಯಕ್ತಪಡಿಸಿದ್ದರು. ಈ ನಿಗಮ ಪುನಃಶ್ಚೇತನ ಮಾಡುವುದಾಗಿ ತಿಳಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಧನ್ಯವಾದವನ್ನೂ ತಿಳಿಸಿದ್ದರು. ಆದರೆ, ಇದೀಗ ಯೂಟರ್ನ್‌ ಹೊಡೆದಿರುವುದು ಅಚ್ಚರಿ ಮೂಡಿಸಿದೆ.