Asianet Suvarna News Asianet Suvarna News

ಕಾರವಾರ: ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ

ಕಾರವಾರಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವ ತಿರಸ್ಕೃತ, ಶಾಸಕಿ ರೂಪಾಲಿಗೆ ಮಾತನಾಡಲು ಅವಕಾಶ ಕೊಡದ ಬಗ್ಗೆ ವ್ಯಾಪಕ ಟೀಕೆ

Public Outrage on Social Media Against the Government for Super Specialty Hospital  grg
Author
First Published Sep 17, 2022, 6:23 AM IST

ವಸಂತಕುಮಾರ ಕತಗಾಲ

ಕಾರವಾರ(ಸೆ.17):  ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸುತ್ತಿದ್ದಂತೆ ಜಿಲ್ಲೆಯ ಯುವ ಜನತೆ ಆಸ್ಪತ್ರೆ ಪರವಾಗಿ ಧ್ವನಿ ಎತ್ತಿದ ರೂಪಾಲಿ ನಾಯ್ಕ ಅವರನ್ನು ಪ್ರಶಂಸಿಸಿ, ಸರ್ಕಾರ ಹಾಗೂ ಜಿಲ್ಲೆಯ ಶಾಸಕರ ವಿರುದ್ಧ ಮುಗಿಬಿದ್ದಿದ್ದಾರೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ತಾರಕಕ್ಕೇರಿರುವಾಗಲೇ ಆರ್ಥಿಕ ಇಲಾಖೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಜಿಲ್ಲೆಯ ಜನತೆಯನ್ನು ಕೆರಳಿಸಿದೆ. ಜನರ ಅಸಮಾಧಾನ ಸಾಮಾಜಿಕ ಜಾಲತಾಣಗಳ ಮೂಲಕ ಸ್ಫೋಟಗೊಂಡಿದೆ.

ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಮಾತನಾಡುತ್ತಿದ್ದಾಗ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಲಿಲ್ಲ ಎಂದು ಕಾಗೇರಿ ಅವರ ವಿರುದ್ಧ ನೆಟ್ಟಿಗರು ಮುಗಿಬಿದ್ದಿದ್ದಾರೆ. ಹಾಗೆಯೇ ಆಸ್ಪತ್ರೆಯ ಪರವಾಗಿ ಧ್ವನಿ ಎತ್ತಿದ ರೂಪಾಲಿ ನಾಯ್ಕ ಅವರ ಬಗ್ಗೆ ಮೆಚ್ಚುಗೆಯ ಮಾತುಗಳು ಹರಿದುಬರುತ್ತಿವೆ.

ಉ.ಕನ್ನಡಕ್ಕಿಲ್ಲ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಶಾಸಕಿ ರೂಪಾಲಿ ನಾಯ್ಕ್‌ ಆಕ್ರೋಶ

ಒಬ್ಬ ಮಹಿಳೆಯಾಗಿ ರೂಪಾಲಿ ನಾಯ್ಕ ಆಸ್ಪತ್ರೆ ಬೇಕೆಂದು ವಾದಿಸುತ್ತಿದ್ದರೂ ಜಿಲ್ಲೆಯವರೇ ಆದ ಆರ್‌.ವಿ. ದೇಶಪಾಂಡೆ, ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ, ಸುನೀಲ ನಾಯ್ಕ ಮಾತನಾಡದೇ ಕುಳಿತಿದ್ದರು ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡದ ಬಿಜೆಪಿ ಸರ್ಕಾರದ ವಿರುದ್ಧವೂ ಜನತೆಯ ಆಕ್ರೋಶ ತಿರುಗಿದೆ. ಆಸ್ಪತ್ರೆ ಬಗ್ಗೆ ಧ್ವನಿ ಎತ್ತದ ಜನಪ್ರತಿನಿಧಿಗಳಿಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಮತದಾನವನ್ನೇ ಬಹಿಷ್ಕರಿಸೋಣ ಎಂಬೆಲ್ಲ ಅಭಿಪ್ರಾಯಗಳು ಹರಿದಾಡುತ್ತಿವೆ.

ಉತ್ತರ ಕನ್ನಡದಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದವರನ್ನು ದೇವರೇ ಬದುಕಿಸಬೇಕು..!

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಮತ್ತೆ ಪ್ರಸ್ತಾವನೆ ಸಲ್ಲಿಸಿ, ಮಂಜೂರು ಮಾಡಲು ಕ್ರಮ ಕೈಗೊಳ್ಳದಿದ್ದಲ್ಲಿ ಅದರ ಪರಿಣಾಮವನ್ನು ರಾಜ್ಯ ಬಿಜೆಪಿ ಸರ್ಕಾರ ಎದುರಿಸಬೇಕಾದೀತು ಎಂಬ ಎಚ್ಚರಿಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ.

ಅ.2ಕ್ಕೆ ಕಾರವಾರದಿಂದ ಹೊನ್ನಾವರಕ್ಕೆ ಪಾದಯಾತ್ರೆ

ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಆಗ್ರಹಿಸಿ ವಿವಿಧ ಸಂಘಟನೆಗಳ ನೆರವಿನೊಂದಿಗೆ ಅ.2ರಂದು ಕಾರವಾರದಿಂದ ಹೊನ್ನಾವರ ತನಕ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ. ಶಿರೂರು ಟೋಲ್‌ಗೇಟ್‌ನಲ್ಲಿ ಮೃತಪಟ್ಟ ಕುಟುಂಬದವರ ಮನೆ ತನಕ ಪಾದಯಾತ್ರೆ ನಡೆಸುವುದಾಗಿ ರಾಘು ನಾಯ್ಕ ಹೇಳಿದ್ದಾರೆ. ಈ ಹಿಂದೆ ಅವರ ನೇತೃತ್ವದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಆಗ್ರಹಿಸಿ ಪ್ರಧಾನಿ ಅವರಿಗೆ ರಕ್ತದಲ್ಲಿ ಪತ್ರ ಬರೆಯಲಾಗಿತ್ತು.
 

Follow Us:
Download App:
  • android
  • ios