Asianet Suvarna News Asianet Suvarna News

ಕೊಡಗಿನಲ್ಲೊಬ್ಬ ಹೆಣದಲ್ಲೂ ಹಣ ಕಿತ್ತು ತಿನ್ನುವ ವೈದ್ಯ: ನೋಟಿಸ್ ಜಾರಿ ಮಾಡಿದ ಡಿಎಚ್ಓ

ರಾತ್ರಿ ಶವ ಪರೀಕ್ಷೆ ಮಾಡುವುದಕ್ಕೆಂದು ಮೃತನ ಕುಟುಂಬದವರಿಂದ ಮೂರು ಸಾವಿರ ಲಂಚ ಪಡೆದ ಕೊಡಗು ಜಿಲ್ಲೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಮೂಳೆ ರೋಗ ವೈದ್ಯ ಡಾ. ಶ್ರೀನಿವಾಸ ಮೂರ್ತಿಗೆ ನೋಟಿಸ್ ನೀಡಲಾಗಿದೆ. 

doctor demands bribe for post mortem in kodagu gvd
Author
First Published Sep 15, 2023, 10:43 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.15): ರಾತ್ರಿ ಶವ ಪರೀಕ್ಷೆ ಮಾಡುವುದಕ್ಕೆಂದು ಮೃತನ ಕುಟುಂಬದವರಿಂದ ಮೂರು ಸಾವಿರ ಲಂಚ ಪಡೆದ ಕೊಡಗು ಜಿಲ್ಲೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಮೂಳೆ ರೋಗ ವೈದ್ಯ ಡಾ. ಶ್ರೀನಿವಾಸ ಮೂರ್ತಿಗೆ ನೋಟಿಸ್ ನೀಡಲಾಗಿದೆ. ಕೊಡಗು ಡಿಎಚ್ಓ ಸತೀಶ್ ಕುಮಾರ್ ಅವರು ಲಂಚ ಪಡೆದ ವೈದ್ಯ ಶ್ರೀನಿವಾಸ್ ಮತ್ತು ಆಸ್ಪತ್ರೆಯ ವೈದ್ಯ ಆಡಳಿತಾಧಿಕಾರಿ ಹೇಮಪ್ರಿಯಾ ಅವರಿಗೆ ಉತ್ತರ ನೀಡುವಂತೆ ನೋಟಿಸ್ ಮಾಡಿದ್ದಾರೆ. ಅಲ್ಲದೆ ಕೊಡಗು ಡಿಎಚ್ಓ ಸತೀಶ್ ಕುಮಾರ್, ಕುಟುಂಬ ಕಲ್ಯಾಣ ಅಧಿಕಾರಿ ಆನಂದ್, ಆರೋಗ್ಯ ಇಲಾಖೆ ಸೂಪರಿಡಿಂಟೆಂಡ್ ಲೀನಾ ಅವರ ನೇತೃತ್ವದ ತಂಡ ತನಿಖೆಯನ್ನು ಮಾಡುತ್ತಿದೆ. ಗುರುವಾರ ಗೋಣಿಕೊಪ್ಪಲಿನ ಗೋವಿಂದಚಾರಿ ಎಂಬಾತ ವಿಷ ಸೇವಿಸಿದ್ದರು. 

ಚಿಕಿತ್ಸೆಗಾಗಿ ಆತನ ಕುಟುಂಬಸ್ಥರು ವಿರಾಜಪೇಟೆ ಅಸ್ಪತ್ರೆಗೆ ಕರೆತಂದಿದ್ದರು. ಆದರೆ ಆತ ಚಿಕಿತ್ಸೆಗೂ ಮೊದಲೇ ಸಾವನ್ನಪ್ಪಿದ್ದ. ಅಷ್ಟೊತ್ತಿಗಾಗಲೇ ರಾತ್ರಿಯಾಗಿದ್ದರಿಂದ ರಾತ್ರಿಯೇ ಶವವನ್ನು ಊರಿಗೆ ಕೊಂಡೊಯ್ಯುವುದಕ್ಕಾಗಿ ಕುಟುಂಬಸ್ಥರು ವೈದ್ಯ ಶ್ರೀನಿವಾಸ್ ಬಳಿ ಕೇಳಿಕೊಂಡಿದ್ದರು. ಆದರೆ ವೈದ್ಯ ಶ್ರೀನಿವಾಸ್ ಅವರು ಅದಕ್ಕಾಗಿ ಮೂರು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಕುಟುಂಬದವರು ಎರಡು ಸಾವಿರ ನೀಡಿದ್ದರಂತೆ, ಇದಕ್ಕೆ ಒಪ್ಪದ ವೈದ್ಯ ಶ್ರೀನಿವಾಸ್ ಇನ್ನೂ ಒಂದು ಸಾವಿರ ಕೊಡುವಂತೆ ಕೇಳಿದ್ದ ಎನ್ನಲಾಗಿದೆ. ಹೀಗೆ ಮತ್ತೊಂದು ಸಾವಿರ ಹಣವನ್ನು ಪಡೆಯುವಾಗ ಮೃತ ಗೋವಿಂದ ಕುಟುಂಬದವರು ಹಣ ಕೊಡುವುದನ್ನು ವೀಡಿಯೋ ಮಾಡಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. 

ಕೊಡಗು ಜಿಲ್ಲೆಯಲ್ಲಿ ನಿಪಾ ವೈರಸ್ ಆತಂಕ: ಕಟ್ಟೆಚ್ಚರ ವಹಿಸಿದ ಜಿಲ್ಲಾಡಳಿತ

ಹೀಗಾಗಿ ಕೊಡಗು ಡಿಎಚ್ಓ ವೈದ್ಯನಿಗೆ ನೋಟಿಸ್ ನೀಡಿ 12 ಗಂಟೆಯ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಇಲಾಖೆ ತನಿಖೆಯನ್ನು ಆರಂಭಿಸಿದ್ದಾರೆ. ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಗೋಣಿಕೊಪ್ಪಲಿನಿಂದ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯದಲ್ಲಿ ಗೋವಿಂದಾಚಾರಿ ಮೃತಪಟ್ಟಿದ್ದರಿಂದ ಅವರ ಪುತ್ರ  ವಿರಾಜಪೇಟೆ  ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಮೃತಪಟ್ಟಿರೋದು ದೃಢವಾಗಿತ್ತು. ಶವಗಾರದಲ್ಲಿ ಇರಿಸಲಾಗಿ ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಲು ಪುತ್ರ  ಚೇತನ್ ವೈದ್ಯಧಿಕಾರಿ ಶ್ರೀನಿವಾಸ್ ಮೂರ್ತಿ ಅವರನ್ನು ಕೋರಿಕೊಂಡಾಗ ಅವರು ರೂ. 3000  ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. 

ಪುತ್ರ ಚೇತನ್ ಹಾಗೂ ಅವರ ಸಂಗಡಿಗರು ಹಣ ನೀಡುವಾಗ ವಿಡಿಯೋ ರೆಕಾರ್ಡನ್ನು ಮಾಡಿ ನಂತರ ಮರಣೋತ್ತರ ಪರೀಕ್ಷೆ ಆದ ನಂತರ ಗೋಣಿಕೊಪ್ಪಲಿಗೆ ಮೃತ ದೇಹವನ್ನು ತಂದ ನಂತರ ವಿಡಿಯೋವನ್ನು ವೈರಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಯಾರದ್ದೇ ಮರಣೋತ್ತರ ಪರೀಕ್ಷೆ ಇದ್ದರೆ ತಲಾ ಎರಡರಿಂದ ಮೂರು ಸಾವಿರ ರೂಪಾಯಿ ಹಣವನ್ನುಇವರು ಪಡೆಯುತ್ತಿದ್ದರು ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮೃತ ಗೋವಿಂದಾಚಾರಿ ಮೂಲತಃ ಗುಂಡ್ಲುಪೇಟೆಯ ತೆರಕಣಾಂಬಿಯವರು. ಮರಣೋತ್ತರ ಪರೀಕ್ಷೆಗೆ ಲಂಚ ಪ್ರಕರಣ ವಿಡಿಯೋ ಬಯಲಾಗುತ್ತಿದ್ದಂತೆ ಶಾಸಕರಾದ ಎ. ಎಸ್ ಪೊನ್ನಣ್ಣನವರು ವೈದ್ಯರನ್ನು ಅಮಾನತ್ತಿನಲ್ಲಿ ಇಡುವಂತೆ ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಕಲ್ಗುಡಿ ಬ್ರಾಂಡ್ 'ಗನ್' ಕೊಡಗಿನ ಮಾರುಕಟ್ಟೆಗೆ ಎಂಟ್ರಿ: ಈ ಗನ್‌ನ ಸ್ಪೆಷಾಲಿಟಿ ಏನು?

ಕಾನೂನಿನಂತೆ ವಿಷ ಸೇವಿಸಿದ ಮೃತ ದೇಹವನ್ನು ರಾತ್ರಿ ಮರಣೋತ್ತರ ಪರೀಕ್ಷೆಗೆ  ಒಳಪಡಿಸುವಂತಿಲ್ಲ. ಆದರೆ ಜಿಲ್ಲೆಯಲ್ಲಿ ಕೆಲವು ವೈದ್ಯರು ಹಣ ಪಡೆದು ರಾತ್ರಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಹಗಲು ಹೊತ್ತಿನ ಸಮಯವನ್ನು ನಮೂದಿಸುತ್ತಾರೆ ಎಂದು ಹೇಳಲಾಗುತ್ತಿದೆ. ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಯ ವಿರುದ್ಧ, ಅಲ್ಲಿನ ಸಿಬ್ಬಂದಿ ಒಬ್ಬರು ಹಣ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ  ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ತದನಂತರ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿ 15 ದಿನಗಳು ಆದರೂ ಯಾವುದೇ ಕ್ರಮ ಆಗದಿರುವ ಬೆನ್ನೆಲೆ ಇದೀಗ ಮತ್ತೊಂದು ಭ್ರಷ್ಟಾಚಾರದ ಪ್ರಕರಣ ಬೆಳಕಿಗೆ ಬಂದಿರುವುದು ವಿಪರ್ಯಾಸ.

Follow Us:
Download App:
  • android
  • ios