Asianet Suvarna News Asianet Suvarna News

ಮಡಿಕೇರಿಗೆ ಸ್ವಾಗತ ಕೋರುತ್ತವೆ ರಸ್ತೆ ಗುಂಡಿಗಳು, ಇಲ್ಲಿ ರೋಡ್‌ ಎಲ್ಲಿದೆ ಅಂತ ಹುಡುಕಬೇಕು..!

ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿರುವ ಮಡಿಕೇರಿ ದಸರಾಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಈಗಾಗಲೇ ಮಡಿಕೇರಿ ದಸರಾ ಕಾರ್ಯಚಟುವಟಿಕೆಗಳಿಗೂ ಚಾಲನೆ ನೀಡಲಾಗಿದೆ. ಆದರೂ ಮಡಿಕೇರಿ ನಗರಕ್ಕೆ ಎಂಟ್ರಿ ಆಗುತ್ತಿದ್ದಂತೆ ರಸ್ತೆಯಲ್ಲಿ ನಿಮಗೆ ದೊಡ್ಡ ದೊಡ್ಡ ಗುಂಡಿಗಳು ಸ್ವಾಗತ ಕೋರುತ್ತವೆ. ಕನಿಷ್ಠ ಬೈಕನ್ನು ಕೂಡ ಓಡಿಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿ ನಗರದ ಯಾವುದೇ ರಸ್ತೆಗಳಿಗೆ ಹೋದರು ದೊಡ್ಡ ಹೊಂಡಗಳೇ ನಿರ್ಮಾಣವಾಗಿವೆ. 

Potholes Problems at Madikeri in Kodagu grg
Author
First Published Sep 21, 2023, 1:30 AM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಸೆ.21): ಕೊಡಗು ಎಂದ ಕೂಡಲೇ ಪ್ರಾಕೃತಿಕ ಸೌಂದರ್ಯದ ಜಿಲ್ಲೆ ಅಂತ ನೆನಪಿಗೆ ಬಂದು ಬಿಡುತ್ತೆ. ಆದರೆ ಈ ಪ್ರಾಕೃತಿಕ ಸೌಂದರ್ಯದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರಸ್ತೆಗಳನ್ನು ಹುಡುಕಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಹೌದು, ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿರುವ ಮಡಿಕೇರಿ ದಸರಾಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಈಗಾಗಲೇ ಮಡಿಕೇರಿ ದಸರಾ ಕಾರ್ಯಚಟುವಟಿಕೆಗಳಿಗೂ ಚಾಲನೆ ನೀಡಲಾಗಿದೆ. ಆದರೂ ಮಡಿಕೇರಿ ನಗರಕ್ಕೆ ಎಂಟ್ರಿ ಆಗುತ್ತಿದ್ದಂತೆ ರಸ್ತೆಯಲ್ಲಿ ನಿಮಗೆ ದೊಡ್ಡ ದೊಡ್ಡ ಗುಂಡಿಗಳು ಸ್ವಾಗತ ಕೋರುತ್ತವೆ. ಕನಿಷ್ಠ ಬೈಕನ್ನು ಕೂಡ ಓಡಿಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿ ನಗರದ ಯಾವುದೇ ರಸ್ತೆಗಳಿಗೆ ಹೋದರು ದೊಡ್ಡ ಹೊಂಡಗಳೇ ನಿರ್ಮಾಣವಾಗಿವೆ. 

ಮಳೆ ಬಂತೆಂದರೆ ಗುಂಡಿಗಳಿಗೆ ನೀರು ತುಂಬಿಕೊಳ್ಳುವುದರಿಂದ ವಾಹನಗಳ ಚಾಲನೆ ಇನ್ನೂ ದುಸ್ಥರ. ಮಡಿಕೇರಿ ದಸರಾಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಎಷ್ಟು ಚಾಲಕರು ಅಪಘಾತಕ್ಕೆ ಒಳಗಾಗುತ್ತಾರೋ ಗೊತ್ತಿಲ್ಲ. ಪ್ರತೀ ವರ್ಷ ದಸರಾ ಸಂದರ್ಭದಲ್ಲಿ ರಸ್ತೆಗಳ ಗುಂಡಿಗಳನ್ನು ಮುಚ್ಚುತ್ತಾರೆ. ದಸರಾ ಸಂದರ್ಭದ ವೇಳೆ ಮಳೆ ಮುಗಿಯದೇ ಇರುವುದರಿಂದ ಅನಿವಾರ್ಯವಾಗಿ ಮಳೆಯಲ್ಲೇ ಗುಂಡಿಗಳನ್ನು ಮುಚ್ಚುತ್ತಾರೆ. ಇದರಿಂದ ದಸರಾ ಮುಗಿದು ಒಂದೆರಡು ತಿಂಗಳು ಎನ್ನುವಷ್ಟರಲ್ಲಿಯೇ ಗುಂಡಿಗಳು ಬಾಯ್ದೆರೆಯುತ್ತವೆ. ನಂತರ ಉಳಿದ ಏಳೆಂಟು ತಿಂಗಳು ಬರೀ ಗುಂಡಿಗಳದ್ದೇ ರಾಜ್ಯಭಾರ. 

ಮಡಿಕೇರಿ: ವ್ಯಕ್ತಿಯ ಅಪಹರಣ ಐದು ಲಕ್ಷಕ್ಕೆ ಬೇಡಿಕೆ ಇಟ್ಟ ನಟೋರಿಯಸ್ ಗ್ಯಾಂಗ್!

ಇದೀಗ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದರೂ ರಸ್ತೆಗಳ ರಿಪೇರಿಗೆ ಮಾತ್ರ ನಗರಸಭೆ ಮುಂದಾಗಿಲ್ಲ. ಈಗಾಗಲೇ ಮಡಿಕೇರಿ ದಸರಾ ಜನೋತ್ಸವ ಸಮಿತಿ ದಸರಾಕ್ಕಾಗಿ ಎರಡು ಕೋಟಿ ರೂಪಾಯಿ ಅನುದಾನ ಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಇದೇ ಹಣದಲ್ಲಿ ರಸ್ತೆಯನ್ನು ಸರಿ ಮಾಡಿಸೋಣ ಎನ್ನುವ ಚಿಂತನೆಯಲ್ಲಿ ಮಡಿಕೇರಿ ನಗರಸಭೆ ಇದೆ. ಆದರೆ ಕಳೆದ ನಾಲ್ಕೈದು ತಿಂಗಳಿನಿಂದಲೂ ಮಡಿಕೇರಿ ರಸ್ತೆಗಳು ಗುಂಡಿಮಯವಾಗಿದ್ದು ಈ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗದೆ ಜನರು ಮಡಿಕೇರಿ ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. 

ಮಡಿಕೇರಿ ನಗರಸಭೆ ಸತ್ತಿದೆ, ಅದರ ಅಂತ್ಯ ಸರ್ಕಾರ ಮಾಡುವುದು ಬಾಕಿ ಇದೆ ಅಷ್ಟೆ. ನಗರಸಭಾಧ್ಯಕ್ಷರು ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಸ್ತೆಗಳು ಈ ರೀತಿ ಆಗುವುದಕ್ಕೆ ಇಂದಿನ ಶಾಸಕರು, ಸರ್ಕಾರವೇ ಕಾರಣ ಎಂದು ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ಹೊರ ಹಾಕಿದ್ದಾರೆ. 

ಕೊಡಗಿನಲ್ಲೊಬ್ಬ ಹೆಣದಲ್ಲೂ ಹಣ ಕಿತ್ತು ತಿನ್ನುವ ವೈದ್ಯ: ನೋಟಿಸ್ ಜಾರಿ ಮಾಡಿದ ಡಿಎಚ್ಓ

ನಾವು ಶಾಸಕರಾಗಿದ್ದಾಗ ನಮ್ಮ ಸರ್ಕಾರದಿಂದ ಕೋಟಿ ಲೆಕ್ಕದಲ್ಲಿ ಅನುದಾನ ತರುತ್ತಿದ್ದೆವು. ಕನಿಷ್ಠ ಐದು ಕೋಟಿ ಹತ್ತು ಕೋಟಿ ಅನುದಾನ ತಂದು ರಸ್ತೆಗಳನ್ನು ಮಾಡಿಸುತ್ತಿದ್ದೆವು. ಪ್ರತೀ ವರ್ಷ ಮಳೆಗಾಲದಲ್ಲಿ ರಸ್ತೆ ಬದಿಯ ಚರಂಡಿಗಳನ್ನು ಸರಿಪಡಿಸಿ, ಕಾಡು ಕಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿಸುತ್ತಿದ್ದೆವು. ಇದರಿಂದ ರಸ್ತೆಗಳು ಹಾಳಾಗುತ್ತಿರಲಿಲ್ಲ. ಆದರೆ ಈಗ ಸಿದ್ದರಾಮಯ್ಯನವರು ಪ್ರತೀ ಶಾಸಕರಿಗೆ 56 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಈ ಅನುದಾನ ಕಡ್ಲೆಪುರಿ ತಿನ್ನುವುದಕ್ಕಾ ಎಂದು ಪ್ರಶ್ನಿಸಿದ್ದಾರೆ. 

ಅಲ್ಲದೆ ಈಗಿನ ಶಾಸಕರು ಅನುದಾನ ತರುವ ಮಾತಿರಲಿ ಕನಿಷ್ಠ ನಮ್ಮ ಕಾಲದಲ್ಲಿ ಆಗಿರುವ ರಸ್ತೆಗಳನ್ನಾದರೂ ಸರಿಯಾಗಿ ಇಟ್ಟುವ ಕೆಲಸ ಮಾಡಲಿ ಎಂದು ಕುಟುಕಿದ್ದಾರೆ. ಒಟ್ಟಿನಲ್ಲಿ ದಸರಾ ಜನೋತ್ಸವಕ್ಕೆ ಸಿದ್ಧಗೊಳ್ಳಬೇಕಾಗಿರುವ ಮಡಿಕೇರಿ ರಸ್ತೆಗಳೇ ಸರಿಯಿಲ್ಲದೆ ಜನರು ಪರದಾಡುತ್ತಿದ್ದಾರೆ.

Follow Us:
Download App:
  • android
  • ios