ಶಂಕರ ಕುದರಿಮನಿ 

ಬಾದಾಮಿ(ಡಿ.07): ನಗರ ಸುಂದರವಾಗಬೇಕು ಎಂಬ ಅಭಿಲಾಸೆಯಿಂದ ರಸ್ತೆಗಳನ್ನು ನಿರ್ಮಾಣ ಮಾಡಿ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಆದರೆ, ನಿರ್ಮಾಣವಾದ ವಿಭಜಕಗಳಿಗೆ ಸೂಕ್ತ ಬೆಳಕಿನ ಸೌಕರ್ಯ ಹಾಗೂ ರೇಡಿಯಂ ಅಂಟಿಸದ ಕಾರಣ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಚಾಲನೆ ಮಾಡುವಂತಾಗಿದೆ. 

ಕೆಸಿಪ್ ರಸ್ತೆ ಕಾಮಗಾರಿ ಮುಗಿದ ಮೇಲೆ ಸಂಚಾರ ಸುಗಮವಾಗಿ ಆರಂಭವಾಗಿದ್ದು ರಸ್ತೆಯಲ್ಲಿ ವಿಭಜಕ ನಿರ್ಮಿಸಿ ನಗರವನ್ನು ಸುಂದರವಾಗುವಂತೆ ಮಾಡುವಲ್ಲಿ ಅನೇಕ ಸಂಘ ಸಂಸ್ಥೆಗಳ ಬೇಡಿಕೆಯಂತೆ ಡಿವೈಡರ್ ನಿರ್ಮಿಸಲಾಯಿತು. ಪುರಸಭೆ, ಪಿಡಬ್ಲ್ಯೂಡಿ ಹಾಗೂ ಕೆಶಿಪ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಭಜಕಕ್ಕೆ ಬೆಳಕಿನ ವ್ಯವಸ್ಥೆಯಾಗಲಿ, ಡಿವೈಡರ್ ಕಾಣುವಂತೆ ರೇಡಿಯಂ ಅಂಟಿಸುವುದಾಗಲಿ ಅಪಾಯವಿರುವ ವಲಯದಲ್ಲಿ ಫಲಕ ನಿರ್ಮಿಸುವುದಾಗಲಿ ಮಾಡಿಲ್ಲ. ಇದರಿಂದಾಗಿ ನಗರದ ಹೊರ ವಲಯದಲ್ಲಿ ಕಳೆದ ಒಂದು ತಿಂಗಳಲ್ಲಿ ಮೂರು ವಾಹನಗಳು ಅಪಘಾತಕ್ಕೆ ಒಳಗಾಗಲು ಕಾರಣವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿ.2ರಂದು ಬೆಳಗಿನ ಜಾವ ಈರುಳ್ಳಿ ತೆಗೆದುಕೊಂಡು ಹೋಗುತ್ತಿದ್ದ ಲಾರಿಯೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆ ಮಧ್ಯದಲ್ಲಿ ಉರುಳಿ ಬಿದ್ದಿದೆ. ಇದರಿಂದ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದರೆ, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂಬುವುದೇ ಸಮಾಧಾನಕರ ಸಂಗತಿ. 

ನಗರದಲ್ಲಿ ಕೆಶಿಪ್ ರಸ್ತೆ ನಿರ್ಮಿಸಿದ್ದರೂ ಪ್ರಜ್ಞಾವಂತರು, ಹೋರಾಟ ಸಮಿತಿಯವರು ಕಳೆದ ಎರಡು ವರ್ಷಗಳ ಹಿಂದೆ ಮುಖ್ಯರಸ್ತೆಯಲ್ಲಿ ವಿಭಜಕ ಹಾಕಬೇಕು ಎಂದು ಸರ್ಕಾರಕ್ಕೆ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಅರ್ಪಿಸಿದ್ದರು. ಹೀಗಾಗಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳ ಮೂಲಕ ಜನರ ಮನವಿ ಮೇರೆಗೆ ರಸ್ತೆ ವಿಭಜಕ ನಿರ್ಮಿಸುವಂತೆ ಪುರಸಭೆಯ ಮುಖ್ಯಾಧಿಕಾರಿಗಳ ಮೇಲ್ವಿಚಾರಣೆಯ ಲ್ಲಿ ಅಧಿಕಾರಿಗಳಿಗೆ ಆದೇಶ ನೀಡಿದ್ದರು. 

ನಗರದಲ್ಲಿ ಕೋಣಮ್ಮನ ದೇವಸ್ಥಾನದವರೆಗೆ ವಿಭಜಕ ಕಲ್ಪಿಸಿದ್ದರಿಂದ ರಸ್ತೆ ಅಪಘಾತಗಳು ಕಡಿಮೆಯಾಗಿವೆ. ಆಟೋ, ಬೈಕ್, ಕಾರುಗಳು ರಸ್ತೆ ಮಧ್ಯೆ ಏಕಾಏಕಿ ಅಡ್ಡಾದಿಡ್ಡಿ ಬರುವುದು ತಪ್ಪಿದ್ದರಿಂದ ಅಪಘಾತಗಳು ನಗರದ ಹೃದಯ ಭಾಗದಲ್ಲಿ ಸಂಭವಿಸಿಲ್ಲ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಆದರೆ ಈ ಅಪಘಾತಗಳು ಹೆಚ್ಚು ಸಂಭವಿಸಿದ್ದು ವಿಭಜಕ ಪ್ರಾರಂಭದ ಸ್ಥಳದಲ್ಲಿ. ಈ ಹಿಂದೆ ವೈದ್ಯರು ಹಾಗೂ ಪೊಲೀಸ್ ಇಲಾಖೆ ಯವರು ಕೋಣಮ್ಮನ ದೇವಸ್ಥಾನದಲ್ಲಿ ಮುಕ್ತಾಯ ವಾಗಿರುವ ವಿಭಜಕ ರಾತ್ರಿ ಸಮಯದಲ್ಲಿ ಬೆಳಕು ಹಾಗೂ ರೇಡಿಯಂ ಇರದ ಕಾರಣ ವೇಗವಾಗಿ ಬಂದ ವಾಹನಗಳು ವಿಭಜಕಕ್ಕೆಇದ್ದಿದ್ದು ಗೊತ್ತಾಗದೆ ಡಿಕ್ಕಿ ಹೊಡೆಯುತ್ತಿದ್ದನ್ನು ಗಮನಿಸಿದ ನಗರದ ಖ್ಯಾತ ವೈದ್ಯರು ರಸ್ತೆ ವಿಭಜಕ ಕಲ್ಲಿಗೆ ರೇಡಿಯಂ ಹಚ್ಚಿದ್ದರಿಂದ ಅಪಘಾತವಾಗಿರಲಿಲ್ಲ. ಆದರೆ ಮಳೆಯಿಂದ ವಿಭಜಕಕ್ಕೆ ಹಚ್ಚಿದ ರೇಡಿಯಂ ಕಿತ್ತು ಹೋಗಿದ್ದರಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ. ಆದರೆ, ವಿಭಜಕ ನಿರ್ಮಿಸಿ ಅದಕ್ಕೆ ಸೂಕ್ತ ಬೆಳಕಿನ ವ್ಯವಸ್ಥೆ, ರೇಡಿಯಂ ವ್ಯವಸ್ಥೆ ಮಾಡದಿದ್ದರಿಂದ ಬೇರೆ ಕಡೆಯಿಂದ ಬರುವ ವಾಹನಗಳಿಗೆ ವಿಭಜಕ ಕಾಣದೆ ಅಪಘಾತಕ್ಕಿಡಾಗುತ್ತಿವೆ. ಈ ಲೋಪದೋಷಕ್ಕೆ ಯಾರು ಹೊಣೆಗಾರರು ಎಂಬ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಿದೆ.