PSI Recruitment Scam: ಪಿಎಸ್ಐ ಮರುಪರೀಕ್ಷೆ ರದ್ದತಿ ಕೋರಿದ್ದ ಅರ್ಜಿ ಕೆಎಟಿಯಿಂದ ವಜಾ
545 ಪಿಎಸೈ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ, ಮರುಪರೀಕ್ಷೆಗೆ ನಿರ್ಧರಿಸಿದ್ದ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಮರುಪರೀಕ್ಷೆ ನಿರ್ಧಾರವೇ ಸರಿ ಎಂದು ಈ ಹಿಂದಿನ (19.7.2022) ಆದೇಶವನ್ನೇ ಕೆಎಟಿ ಎತ್ತಿ ಹಿಡಿದಿದೆ.
ಯಾದಗಿರಿ (ಜ.11): 545 ಪಿಎಸೈ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ, ಮರುಪರೀಕ್ಷೆಗೆ ನಿರ್ಧರಿಸಿದ್ದ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಮರುಪರೀಕ್ಷೆ ನಿರ್ಧಾರವೇ ಸರಿ ಎಂದು ಈ ಹಿಂದಿನ (19.7.2022) ಆದೇಶವನ್ನೇ ಕೆಎಟಿ ಎತ್ತಿ ಹಿಡಿದಿದೆ.
ಪಿಎಸೈ (ಸಿವಿಲ್) ನೇಮಕಾತಿಯಲ್ಲಿ ಅಕ್ರಮ(PSI Recruitment Scam:) ಕಂಡುಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿರದ್ದುಗೊಳಿಸಿದ ರಾಜ್ಯ ಸರ್ಕಾರ ಏ.29, 2022ರಂದು ಮರು ಪರೀಕ್ಷೆಗೆ ಆದೇಶಿಸಿತ್ತು. ಆದರೆ ಸರ್ಕಾರದ ಈ ಮರುಪರೀಕ್ಷೆ ಆದೇಶ ರದ್ದುಪಡಿಸಿ ಕಳಂಕಿತರ ಪ್ರತ್ಯೇಕಿಸಿ ಉಳಿದವರಿಗೆ ಆದೇಶ ನೀಡುವಂತೆ ಕೋರಿ ಎಂ.ಕೆ. ಗುರುಪ್ರಸಾದ್ ಸೇರಿ 357 ಜನರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಡಿ.14ರಂದು ಕೆಎಟಿ ತೀರ್ಪು ನೀಡಿ, ಡಿ.30ರಂದು ಆದೇಶ ಪ್ರಕಟಿಸಿದೆ. ಇದಕ್ಕೂ ಮುನ್ನ ತೇಜಸ್ ಸೇರಿದಂತೆ ಮತ್ತಿತರರು ಜುಲೈ 19, 2022ರಂದು ಸಲ್ಲಿಸಿದ್ದ ಇಂತಹುದ್ದೇ ಅರ್ಜಿಯನ್ನು ವಜಾಗೊಳಿಸಿದ್ದ ಕೆಎಟಿ ಈಗ ಅದೇ ಆದೇಶದ ಅಂಶಗಳನ್ನೇ ತಿಳಿಸಿ ಈಗಿನ ಅರ್ಜಿಯನ್ನೂ ಸಹ ವಜಾ ಮಾಡಿದೆ.
PSI Recruitment Scam: ಜೈಲಿಂದ ಹೊರಬಂದ ಕಿಂಗ್‌ಪಿನ್ ದಿವ್ಯಾ ಹಾಗರಗಿಗೆ ಭವ್ಯ ಸ್ವಾಗತ!
ಕೆಎಟಿ ನ್ಯಾಯಾಂಗ ಸದಸ್ಯ ಟಿ. ನಾರಾಯಣಸ್ವಾಮಿ ಹಾಗೂ ಆಡಳಿತಾತ್ಮಕ ಸದಸ್ಯೆ ಲತಾ ಕೃಷ್ಣರಾವ್ ಅವರಿದ್ದ ಪೀಠ ಈ ಆದೇಶವನ್ನು ಹೊರಡಿಸಿದೆ. ಈ ಮೂಲಕ, ಮರು ಪರೀಕ್ಷೆ ರದ್ದತಿ ಕೋರಿ ಅರ್ಜಿ ಕೆಎಟಿಗೆ ಸಲ್ಲಿಸಿದವರಿಗೆ ನಿರಾಸೆಯಾದಂತಾಗಿದೆ. ಆದರೂ, ಮರು ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಹೈಕೋರ್ಟಿನಲ್ಲಿ ದಾಖಲಾಗಿರುವ ಅರ್ಜಿ ವಿಚಾರಣೆ ನಡೆಯುತ್ತಿರುವುದರಿಂದ ಮುಂದಿನ ಆದೇಶವರೆಗೂ ಸರ್ಕಾರ ಕಾಯಬೇಕಿದೆ.
ಪಿಎಸ್‌ಐ ಹಗರಣ ಆರೋಪಿಗಳಿಗೆ ಬೇಲ್: ಪ್ರಿಯಾಂಕ್ ಖರ್ಗೆ ಕಿಡಿ
ಸರ್ಕಾರದ ಮರು ಪರೀಕ್ಷೆ ಆದೇಶ ಸರಿ:
ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಉಳಿದವರಿಗೆ ಆದೇಶ ಪ್ರತಿ ನೀಡುವಂತೆ ಆದೇಶ ಹೊರಡಿಸಬೇಕು. ಕೆಲವರು ಅಕ್ರಮ ಮಾಡಿದ್ದಾರೆಂದಕ್ಕೆ ಮಾತ್ರ ಎಲ್ಲರನ್ನೂ ಒಂದೇ ರೀತಿ ಕಾಣಬಾರದು. ಹೀಗಾಗಿ ಏ.29, 2022ರಂದು ಸರ್ಕಾರ ಹೊರಡಿಸಿದ್ದ ಆದೇಶ ರದ್ದುಗೊಳಿಸಬೇಕು ಎಂದು ಆಗ ಅರ್ಜಿದಾರರ ಪರ ವಕೀಲರು ಕೆಎಟಿಗೆ ಈ ಹಿಂದಿನಂತೆ ಕೋರಿದ್ದರು. ಆದರೆ, ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಸಾಧ್ಯತೆಯಿಂದಾಗಿ ಸರ್ಕಾರದ ಮರು ಪರೀಕ್ಷೆ ನಿರ್ಧಾರ ಸರಿಯಿದೆ, ತನಿಖೆ ನಡೆಯುತ್ತಿದ್ದು ಕಳಂಕಿತರನ್ನು ಪ್ರತ್ಯೇಕಿಸಲು ಆಗುವುದಿಲ್ಲ. ನೇಮಕಾತಿ ಮುಖ್ಯ ಕಚೇರಿಯಲ್ಲೇ ಅಕ್ರಮ ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬ ಸರ್ಕಾರದ ಪರ ವಕೀಲರ ವಾದವನ್ನು ಪರಿಗಣಿಸಿದ್ದ ಕೆಎಟಿ ಈ ಹಿಂದೆ 19.7.2022 ರಂದು ನೀಡಿದ್ದ ಆದೇಶ ಎತ್ತಿ ಹಿಡಿದು ಅದೇ ಕಾರಣಗಳಿಂದ ಈಗಿನ ಅರ್ಜಿಯನ್ನು ವಜಾಗೊಳಿಸಿದೆ.