ವಕ್ಫ್ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಏ.17): ವಕ್ಫ್ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ್ದು, ರಸ್ತೆ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ನ್ಯಾಯಮೂರ್ತಿ ನಾಗ ಪ್ರಸನ್ನ ಅವರ ಏಕಸದಸ್ಯ ಪೀಠ ನೀಡಿದ ಆದೇಶದಲ್ಲಿ, “ಕಾನೂನು ಪ್ರಕಾರ ಅನುಮತಿ ಪಡೆದಿದ್ದರೆ, ಪ್ರತಿಭಟನೆ ಅನುಮತಿ ಪಡೆದ ಜಾಗದಲ್ಲಷ್ಟೇ ನಡೆಯಬೇಕು. ಯಾವುದೇ ರೀತಿಯ ರಸ್ತೆ ಬಂದ್‌ ಅಥವಾ ವಾಹನ ಸಂಚಾರಕ್ಕೆ ತೊಂದರೆ ಆಗಬಾರದು' ಎಂದು ಸ್ಪಷ್ಟಪಡಿಸಲಾಗಿದೆ. ಮಂಗಳೂರಿನ ರಾಜೇಶ್ ಅರ್ಕುಳ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ರಾಜ್ಯ ಸರ್ಕಾರ, ದ.ಕ. ಜಿಲ್ಲಾಧಿಕಾರಿ, ಮಂಗಳೂರು ಕಮಿಷನರ್, ಎಸಿಪಿ ಟ್ರಾಫಿಕ್ ಅವರನ್ನು ಪ್ರತಿವಾದಿಗಳಾಗಿ ಮಾಡಲಾಗಿತ್ತು. 

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ‌.ರೋಡ್ ನಿಂದ ಪಡೀಲ್ ವರೆಗೆ ವಾಹನ ಸಂಚಾರ ನಿರ್ಬಂಧಿತವಾಗಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಮಂಗಳೂರು-ಬೆಂಗಳೂರು ಹೆದ್ದಾರಿ ಮಾರ್ಗದ ಪಡೀಲ್ - ಕಣ್ಣೂರು - ಅಡ್ಯಾರ್ - ಸಹ್ಯಾದ್ರಿ - ಅರ್ಕುಳ ಭಾಗಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿತ್ತು. ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ನಾಳೆ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ. ಕರ್ನಾಟಕ ಉಲಮಾ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ ಗಂಡ ಹೆಂಡತಿ ಅನುಮಾನಾಸ್ಪದ ಸಾವು: ಪೊಲೀಸರು ಹೇಳೋದೇನು?

ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮತ್ತು ಖಾಝಿ ಶೈಖುನಾ ಮಾಣಿ ಉಸ್ತಾದ್ ನೇತೃತ್ವ ವಹಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಭಾಗಗಳಿಂದ ಲಕ್ಷಾಂತರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಮಂಗಳೂರು ಕಮಿಷನರ್ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಪ್ರತಿಭಟನೆ ಕಾನೂನುಬದ್ಧವಾಗಿ ನಡೆಯಬೇಕು ಮತ್ತು ಸಾರ್ವಜನಿಕ ಜೀವನಕ್ಕೆ ತೊಂದರೆ ಆಗಬಾರದು ಎಂಬುದು ಹೈಕೋರ್ಟ್ ಸೂಚಿಸಿದೆ.