ಮಂಗಳೂರು(ಮೇ 22): ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ ಏ.19ರಂದು ರಾತ್ರಿ ಬಂಟ್ವಾಳದಲ್ಲಿ ಸೀಲ್‌ ಡೌನ್‌ ಮಾಡಲಾಗಿದ್ದು, ಇದರ ವ್ಯಾಪ್ತಿ ನಿಗದಿಪಡಿಸಿದ್ದು ಸರಿಯಾಗಿಲ್ಲ. ಇವುಗಳ ಪೈಕಿ ಕೆಲ ಪ್ರದೇಶಗಳನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಗುರುವಾರ ಪ್ರತಿಭಟನೆ ಬಂಟ್ವಾಳ ಪೇಟೆಯಲ್ಲಿ ನಡೆಯಿತು.

ಪುರಸಭೆ ಸದಸ್ಯ ಎ. ಗೋವಿಂದ ಪ್ರಭು ನೇತೃತ್ವದಲ್ಲಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಬಳಿ ರಸ್ತೆಯನ್ನು ಮುಚ್ಚಲಾದ ಬ್ಯಾರಿಕೇಡ್‌ ಸಮೀಪ ಪ್ರತಿಭಟನೆ ನಡೆದಿದ್ದು, ಮಹಿಳೆಯರು ಸೇರಿದಂತೆ ಹಲವರು ಭಾಗವಹಿಸಿದರು. ತಹಸೀಲ್ದಾರ್‌ ರಶ್ಮಿ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಬಂಟ್ವಾಳ ನಗರ ಠಾಣಾಧಿಕಾರಿ ಅವಿನಾಶ್‌, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಮತ್ತು ಸಿಬ್ಬಂದಿ ಬಂದೋಬಸ್ತ್ ನಡೆಸಿದ್ದಾರೆ.

ಗೊಂದಲ ನಿವಾರಣೆಗೆ ರೈ ಆಗ್ರಹ:

ಪೇಟೆಯನ್ನು ಅವೈಜ್ಞಾನಿಕವಾಗಿ ಸೀಲ್‌ಡೌನ್‌ ಮಾಡಲಾಗಿದೆ ಎಂದು ಇಲ್ಲಿನ ನಾಗರಿಕರು ಹೇಳುತ್ತಿದ್ದಾರೆ. ಅದನ್ನು ಮೇಲಾಧಿಕಾರಿಗಳು ಪರಿಶೀಲಿಸಿ ನಿರ್ದಿಷ್ಟವಾದ ತೀರ್ಮಾನ ತೆಗೆದುಕೊಳ್ಳಬೇಕು. ಈ ಗೊಂದಲವನ್ನು ಸರಿಪಡಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಸಿಎಂ ಜೊತೆ ಚರ್ಚೆ:

ಬಂಟ್ವಾಳ ಪೇಟೆಯ ಸೀಲ್‌ಡೌನ್‌ ತೆರವು ವಿಚಾರ ಕುರಿತು ಬುಧವಾರ ರಾತ್ರಿಯೇ ಸಿಎಂ ಜೊತೆ ಚರ್ಚಿಸಿದ್ದೇನೆ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ… ಉಳಿಪ್ಪಾಡಿ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ ಡಿಸಿಎಂ ಅಶ್ವತ್ಥನಾರಾಯಣ ಅವರಿಗೂ ವಿಷಯ ತಿಳಿಸಲಾಗಿದೆ. ಸೀಲ್‌ಡೌನ್‌ ಸಡಿಲಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸರ್ಕಾರ ಮಟ್ಟದಲ್ಲಿ ಪ್ರಯತ್ನಗಳು ಮಾಡುತ್ತಿದ್ದೇನೆ.

‘ಅಂಫಾನ್‌’ ಚಂಡಮಾರುತ ವಿರುದ್ಧ ಗೆದ್ದ ಪಟ್ನಾಯಕ್‌: ಮಮತಾ ಫೇಲ್‌!

ಸೀಲ್‌ಡೌನ್‌ ಸಡಿಲಿಕೆ ವಿಚಾರವಾಗಿ ಡಿಸಿಎಂ ಅವರು ದ.ಕ.ಜಿಲ್ಲಾಧಿಕಾರಿ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ತಹಸೀಲ್ದಾರ್‌ ಹಾಗೂ ಟಿಎಚ್‌ಒ ಅವರ ಪ್ರಸ್ತಾವನೆ ಆಧಾರದಲ್ಲಿ ಕ್ರಮಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.