ಕೋಲ್ಕತಾ(ಮೇ.22): ‘ಅಂಫಾನ್‌’ನಿಂದಾಗಿ ಪಶ್ಚಿಮ ಬಂಗಾಳದಲ್ಲಿ ಭಾರೀ ಸಾವು ನೋವು ಮತ್ತು ಆಸ್ತಿಪಾಸ್ತಿಗೆ ಹಾನಿ ದಾಖಲಾಗುವ ಮೂಲಕ, ಚಂಡಮಾರುತ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಆದರೆ ನೆರೆಯ ಒಡಿಶಾದಲ್ಲಿ ತೀರಾ ಕಡಿಮೆ ಹಾನಿಯಾಗಿದ್ದು, ಚಂಡಮಾರುತ ನಿರ್ವಹಿಸುವಲ್ಲಿ ತಾವು ನಿಷ್ಣಾತ ಎಂಬುದನ್ನು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಮತ್ತೊಮ್ಮೆ ನಿರೂಪಿಸಿದ್ದಾರೆ.

1999ರಲ್ಲಿ ಸೂಪರ್‌ ಸೈಕ್ಲೋನ್‌ ಅಪ್ಪಳಿಸಿದ್ದರಿಂದ ಒಡಿಶಾದಲ್ಲಿ 10 ಸಾವಿರ ಮಂದಿ ಬಲಿಯಾಗಿದ್ದರು. ಆಗ ಎಚ್ಚೆತ್ತ ನವೀನ್‌ ಪಟ್ನಾಯಕ್‌, ಪದೇಪದೇ ಬರುವ ಚಂಡಮಾರುತಗಳ ನಿರ್ವಹಣೆಗೆ ದೂರದೃಷ್ಟಿಯ ಯೋಜನೆಗಳನ್ನು ಹಾಕಿಕೊಂಡರು. ಅದರ ಫಲವಾಗಿ ಒಡಿಶಾದಲ್ಲಿ 800 ಚಂಡಮಾರುತ ಆಶ್ರಯ ಕೇಂದ್ರಗಳನ್ನು ಕರಾವಳಿಯುದ್ದಕ್ಕೂ ನಿರ್ಮಿಸಲಾಗಿದೆ. ಗಂಟೆಗೆ 300 ಕಿ.ಮೀ. ವೇಗದ ಬಿರುಗಾಳಿ ಬಂದರೂ ತಡೆದುಕೊಳ್ಳುವ ಕೇಂದ್ರಗಳಿವು. ಚಂಡಮಾರುತದ ಸೂಚನೆ ಲಭಿಸುತ್ತಿದ್ದಂತೆ ಜನರನ್ನು ಈ ಕೇಂದ್ರಗಳಿಗೆ ಸ್ಥಳಾಂತರಿಸಿ ಆಹಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದಾಗಿ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ.

ಬೊಬ್ಬಿರಿದ ಅಂಫನ್: ಪಶ್ಚಿಮ ಬಂಗಾಳದಲ್ಲಿ 100 ವರ್ಷಗಳಲ್ಲೇ ಭೀಕರ ಚಂಡಮಾರುತ!

ಚಂಡಮಾರುತ ಸೂಚನೆಯನ್ನು ಜನರ ಮೊಬೈಲ್‌ಗೆ ಅವರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ರವಾನಿಸಲಾಗುತ್ತದೆ. ಮನೆಮನೆ ಪ್ರಚಾರ ನಡೆಸಲಾಗುತ್ತದೆ. ಹವಾಮಾನ ಇಲಾಖೆಯ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ, ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವ ಪ್ರದೇಶದಲ್ಲಿ ಎಚ್ಚರಿಕೆ ವಹಿಸಲಾಗುತ್ತದೆ. ಹೀಗಾಗಿ ಪ್ರತಿ ಬಾರಿ ಚಂಡಮಾರುತ ಬಂದಾಗಲೂ ಒಡಿಶಾ ಅತ್ಯಂತ ಚಾಕಚಕ್ಯತೆಯಿಂದ ನಿರ್ವಹಿಸಿ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿದೆ.

ಆದರೆ ಒಡಿಶಾ ಪಕ್ಕದಲ್ಲೇ ಇದ್ದರೂ ಮಮತಾ ಬ್ಯಾನರ್ಜಿ ಈ ಯಾವ ಕ್ರಮಗಳನ್ನೂ ಕೈಗೊಳ್ಳದ ಕಾರಣ ಈಗ ಬೆಲೆ ತೆರುವಂತಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.