Mysuru: ಕೃಷಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ರೈತರಿಂದ ಪ್ರತಿಭಟನೆ
ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದವರು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ರೈತಾಗ್ರಹ ಧರಣಿ ಹಮ್ಮಿಕೊಂಡಿದ್ದರು.
ಮೈಸೂರು (ಜೂ.16): ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದವರು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ರೈತಾಗ್ರಹ ಧರಣಿ ನಡೆಸಿದರು. ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕು. ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಿ, ರೈತ ಪರ ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂ ಒಡೆಯ ಎಂಬ ಮಹತ್ವಾಕಾಂಕ್ಷೆಯ ಉದ್ದೇಶಕ್ಕೆ ಕೊಡಲಿ ಪೆಟ್ಟು ನೀಡಿ, ಉಳ್ಳವನೇ ಭೂ ಒಡೆಯನಾಗಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಭೂ ಸುಧಾರಣಾ ಕಾಯ್ದೆಯ ಮೂಲ ಉದ್ದೇಶವನ್ನೇ ಅಳಿಸಿ ಹಾಕಿದೆ. ರೈತ ಪರವಾಗಿ ಸುಧಾರಾಣೆಗಳನ್ನು ತರಬೇಕಾದ ಸರ್ಕಾರ ಕಾಪೋರ್‍ರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ತಂದು ಹೈನುಗಾರಿಕೆಗೆ ದೊಡ್ಡ ಪೆಟ್ಟು ನೀಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತ, ಕಾರ್ಮಿಕ, ಮಹಿಳಾ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸುವ ಭರವಸೆ ನೀಡಿತ್ತು. ಹೀಗಾಗಿ ಅದರಂತೆ ನಡೆದುಕೊಳ್ಳುವಂತೆ ಅವರು ಆಗ್ರಹಿಸಿದರು.
ಬೇಡಿಕೆ ಕಳೆದುಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದಲಾದ ನಿಯಮದಿಂದಾಗಿ ಸೀಟು ಕೇಳುವವರೇ ಇಲ್ಲ!
ಎಪಿಎಂಸಿ ಕಾಯ್ದೆಯನ್ನು ರೈತ ಸ್ನೇಹಿಯಾಗಿ ರೂಪಿಸಬೇಕು. 2013ರ ಭೂ ಸ್ವಾಧೀನ ಕಾಯ್ದೆ ರೈತ ವಿರೋಧಿಯಾಗಿದ್ದು, ತಿದ್ದುಪಡಿ ಮಾಡಿ ರೈತಪರ ನಿಯಮಗಳನ್ನು ರೂಪಿಸಬೇಕು. ಹಿಂದಿನ ಸರ್ಕಾರ ಸಂಘ ಪರಿವಾರಕ್ಕೆ ನೀಡಿರುವ ಭೂಮಿಯನ್ನು ವಾಪಸ್ ಪಡೆದು ಸರ್ಕಾರಕ್ಕೆ ಮರಳಿಸಬೇಕು. ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ರೂಪ ನೀಡಿ ಸ್ವಾಯತ್ತತೆ ಮತ್ತು ಸವಲತ್ತು ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2022ರ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕೃಷಿ ಪಂಪ್‌ಸೆಟ್‌ಗಳ ಹಳೆ ಬಾಕಿ ವಸೂಲಿಗೆ ತಡೆ ನೀಡಬೇಕು.
ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ನಿಗದಿತ ಬೆಲೆಯಲ್ಲಿ ಪೂರೈಸಬೇಕು. ಸಸಿಗಳ ದರ ಏರಿಕೆ ಹಿಂಪಡೆಯಬೇಕು. ಬೀಜ ಕೇಂದ್ರಗಳಿಗೆ ಬಿತ್ತನೆ ಬೀಜ ನೀಡಿರುವ ರೈತರಿಗೆ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು. ಕೊಬ್ಬರಿಗೆ .20 ಸಾವಿರ ಬೆಂಬಲ ಬೆಲೆ ನೀಡಬೇಕು. ಭತ್ತದ ಬೆಳೆ ಉತ್ತೇಜಿಸಲು ವಿಶೇಷ ಆದ್ಯತೆ ನೀಡಬೇಕು. ಕೈಗಾರಿಕಾ ಉದ್ದೇಶಕ್ಕೆ ಭೂಮಿ ಖರೀದಿಸಿ ರೈತರನ್ನು ವಂಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶ್ರೀರಂಗಪಟ್ಟಣ- ಮಡಿಕೇರಿ ಹೆದ್ದಾರಿಗೆ ಭೂಮಿ ನೀಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೃಷಿ ಜತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ: ಸಚಿವ ಚಲುವರಾಯಸ್ವಾಮಿ
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಯುವ ಘಟಕದ ಅಧ್ಯಕ್ಷ ಪ್ರೇಮ್‌ಕುಮಾರ್, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ, ಮುಖಂಡರಾದ ಬಸವರಾಜು, ಬೊಕ್ಕಳ್ಳಿ ನಂಜುಂಡಸ್ವಾಮಿ, ಪಿ. ಮರಂಕಯ್ಯ, ಬೆಂಕಿಪುರ ಚಿಕ್ಕಣ್ಣ, ಮಾದೇವನಾಯಕ, ಶಿವನಂಜು, ಪ್ರಭಾಕರ್, ಮಂಡಕಳ್ಳಿ ಮಹೇಶ, ರಾಜು, ಗುರುಲಿಂಲೇಗೌಡ ಮೊದಲಾದವರು ಇದ್ದರು.