ಕೃಷಿ ಜತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ: ಸಚಿವ ಚಲುವರಾಯಸ್ವಾಮಿ
ಗ್ರಾಮೀಣ ಪ್ರದೇಶದ ಜನರಿಗೆ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಸಣ್ಣ ಪುಟ್ಟಖರ್ಚುಗಳಿಂದ ಕನಿಷ್ಠ ಪ್ರಮಾಣದಲ್ಲಿ ಜೀವನ ನಡೆಸಲು ಹೈನುಗಾರಿಕೆ ಅನುಕೂಲವಾಗಿದೆ. ರೈತರು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಾಗಮಂಗಲ (ಜೂ.16): ಗ್ರಾಮೀಣ ಪ್ರದೇಶದ ಜನರಿಗೆ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಸಣ್ಣ ಪುಟ್ಟಖರ್ಚುಗಳಿಂದ ಕನಿಷ್ಠ ಪ್ರಮಾಣದಲ್ಲಿ ಜೀವನ ನಡೆಸಲು ಹೈನುಗಾರಿಕೆ ಅನುಕೂಲವಾಗಿದೆ. ರೈತರು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಟಿ.ಚನ್ನಾಪುರ ಗ್ರಾಮದಲ್ಲಿ ಜಿಲ್ಲಾ ಹಾಲು ಒಕ್ಕೂಟ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವಿನೊಂದಿಗೆ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಲೀಟರ್ ಹಾಲಿಗೆ 5 ರು. ಪ್ರೋತ್ಸಾಹ ಧನ ನೀಡಿದ್ದರು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರೈತರು ಉತ್ಪಾದಿಸುವ ಪ್ರತಿ ಲೀ.ಹಾಲಿಗೆ 2ರು. ಪ್ರೋತ್ಸಾಹ ಧನ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ ಎಂದರು. ಕೊಟ್ಟ ಭರವಸೆಯಂತೆ ರಾಜ್ಯದ ಎಲ್ಲ ಮಹಿಳೆಯರು ಮತ್ತು ಶಾಲಾ ಕಾಲೇಜುಗಳ ಹೆಣ್ಣು ಮಕ್ಕಳಿಗೆ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇನ್ನುಳಿದಂತೆ ಪ್ರಮುಖ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಶೀಘ್ರದಲ್ಲಿಯೇ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಪ್ರತಾಪ್ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್ ರಾಜಕಾರಣಿಗಳು: ಎನ್.ಚಲುವರಾಯಸ್ವಾಮಿ
ಗ್ರಾಮೀಣ ಪ್ರದೇಶದ ರೈತರು ಉತ್ಪಾದಿಸುವ ಹಾಲನ್ನು ಸ್ಥಳೀಯವಾಗಿಯೇ ಶಿಥಿಲೀಕರಿಸಿ ಹಾಲಿನ ಗುಣಮಟ್ಟಕಾಪಾಡಲು ತಾಲೂಕಿನಲ್ಲಿ 54 ಬಿಎಂಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಮತ್ತು ಜಿಲ್ಲಾ ಹಾಲು ಒಕ್ಕೂಟ ರೈತಪರವಾಗಿದೆ. ಹೈನುಗಾರಿಕೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಸಿದ್ಧವಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿಗೆ ಮುಂದಾಗಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಸಂಘಗಳಲ್ಲಿಯೇ ಹಾಲಿಗೆ ನೀರು ಮಿಶ್ರಿತವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಜಿಲ್ಲಾ ಹಾಲು ಒಕ್ಕೂಟದ ಅಧಿಕಾರಿಗಳು ಅಥವಾ ಸಂಘದ ಕಾರ್ಯದರ್ಶಿಗಳು ರೈತರಿಗೆ ಯಾವುದೇ ರೀತಿಯ ಮೋಸ ಮಾಡಬಾರದು. ಅಂತೆಯೇ ರೈತರೂ ಸಹ ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಬೇಕು ಎಂದರು.
ಇದಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ಯುವಕರು ಪಟಾಕಿ ಸಿಡಿಸಿ ಜಯಘೋಷದೊಂದಿಗೆ ಬರಮಾಡಿಕೊಂಡರು. ಸಮಾರಂಭದಲ್ಲಿ ಮನ್ಮುಲ್ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಮತ್ತು ಕೋಟಿ ರವಿ ಮಾತನಾಡಿದರು. ಸಂಘದ ಅಧ್ಯಕ್ಷ ಚನ್ನೇಗೌಡ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಂಜೇಶ್, ವ್ಯವಸ್ಥಾಪಕ ಪ್ರಭಾಕರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಪ್ಪ, ತಾಪಂ ಮಾಜಿ ಸದಸ್ಯ ಜವರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಗ್ರಾಮದ ಮುಖಂಡರಾದ ಗಿರೀಶ್, ಯೋಗಾನಂದ, ಸಿ.ಕೆ.ಕಾಳೇಗೌಡ, ಕೆ.ಗೋಪಾಲ…, ಗೋವಿಂದೇಗೌಡ, ಬಸವರಾಜು, ವಿಜಯಕುಮಾರ್ ಸೇರಿದಂತೆ ನೂರಾರುಮಂದಿ ಇದ್ದರು.
ಸಭೆಯಲ್ಲಿ ಸುರ್ಜೇವಾಲ ಪಾಲ್ಗೊಂಡಿದ್ದರಲ್ಲಿ ತಪ್ಪೇನಿಲ್ಲ: ಸಚಿವ ಚಲುವರಾಯಸ್ವಾಮಿ
ರಸ್ತೆ ಅಭಿವೃದ್ಧಿಗೆ ಆದ್ಯತೆ: ತಾಲೂಕಿನ ಬ್ರಹ್ಮದೇವರಹಳ್ಳಿ ಬಸರಾಳು ಮುಖ್ಯ ರಸ್ತೆಯಿಂದ ಟಿ.ಚನ್ನಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ಈ ಭಾಗದ ಸಣ್ಣ ಪುಟ್ಟಹಳ್ಳಿಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜು ತೆರೆಯಲು ಅಗತ್ಯ ಕ್ರಮ ವಹಿಸಲಾಗುವುದು. ಶಿಥಿಲಗೊಂಡಿರುವ ಪ್ರೌಢಶಾಲಾ ಕಟ್ಟಡವನ್ನು ಶೀಘ್ರದಲ್ಲಿಯೇ ದುರಸ್ತಿ ಮಾಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.